ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ರಾಜ್ಯದ 28 ಸಂಸದರನ್ನು ಚುನಾಯಿಸಿ ಲೋಕಸಭೆಗೆ ಕಳಿಸಿಕೊಡ ಬೇಕಾದರೆ ಸರ್ಕಾರದ ಖಜಾನೆಯಿಂದ 400 ರಿಂದ 500 ಕೋಟಿ ರೂ.ಖರ್ಚಾಗುತ್ತದೆ ಎಂದು ಚುನಾವಣಾ ಆಯೋಗ ಅಂದಾಜಿಸಿದೆ. 2014ರ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿಯ ವೆಚ್ಚದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣಲಿದೆ. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಮಾಡುವ ಖರ್ಚಿನ ಹೊರತಾಗಿ, ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಯೋಗ ಹಣ ವೆಚ್ಚ ಮಾಡುತ್ತದೆ. ಆಯೋಗ ವೆಚ್ಚ ಮಾಡುವ ಪೂರ್ತಿ ಹಣವನ್ನು ಸರ್ಕಾರದಿಂದ ಖಜಾನೆಯಿಂದ ನೀಡಬೇಕಾಗುತ್ತದೆ. ಹಿಂದಿನ ಚುನಾವಣೆಗೆ ಹೋಲಿಸಿದರೆ ಹೊಸ ಚುನಾವಣೆಗೆ ವೆಚ್ಚದ ಪ್ರಮಾಣ ಸರಾಸರಿ 50 ರಿಂದ 100 ಕೋಟಿ ರೂ.ಹೆಚ್ಚಳವಾಗಿರುತ್ತದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳುತ್ತಾರೆ.
ಸಾರ್ವತ್ರಿಕ ಚುನಾವಣೆಗೆಂದು ಕಳೆದ ಬಜೆಟ್‌ನಲ್ಲಿ ರಾಜ್ಯ ಸರ್ಕಾರ 460 ಕೋಟಿ ರೂ. ಮೀಸಲಿಟ್ಟಿದ್ದು, ಅದರಲ್ಲಿ ಚುನಾವಣಾ ಪೂರ್ವ ಸಿದ್ಧತೆಗಳಿಗಾಗಿ ಈಗಾಗಲೇ 75 ಕೋಟಿ ರೂ.ಬಿಡುಗಡೆ ಮಾಡಿದೆ. ಹೊಸ ಬಜೆಟ್‌ನಲ್ಲಿ 300 ಕೋಟಿ ರೂ.ಇಡಲಾಗಿದೆ. ಇದಲ್ಲದೇ, ಕೇಂದ್ರ ಚುನಾವಣಾ ಆಯೋಗ ಸಹ 1.92 ಕೋಟಿ ರೂ.ನೀಡಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಮೂಲಗಳು ತಿಳಿಸಿವೆ.
ಚುನಾವಣಾ ಆಯೋಗ ಮಾಡುವ ವೆಚ್ಚದಲ್ಲಿ ಪ್ರಮುಖ ವಾಗಿ “ಸಿವಿಲ್ ವೆಚ್ಚ’ ಹಾಗೂ “ಭದ್ರತಾ ವೆಚ್ಚ’ ಎಂಬ ಎರಡು ಪ್ರಮುಖ ವೆಚ್ಚಗಳಿರುತ್ತವೆ. ಅದರಂತೆ ಈ ಬಾರಿಯ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಸಿವಿಲ್ ವೆಚ್ಚಗಳಿಗಾಗಿ ಸುಮಾರು 400 ಕೋಟಿ ರೂ.ಹಾಗೂ ಭದ್ರತಾ ವೆಚ್ಚಗಳಿಗೆ 100 ಕೋಟಿ ರೂ. ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಸಿಬ್ಬಂದಿಗೆ ವೇತನ-ಭತ್ಯೆಗಳು, ಜೊತೆಗೆ ಕಾನೂನು-ಸುವ್ಯವಸ್ಥೆ ಕಾಪಾಡಲು ನಿಯೋಜಿಸುವ ಭದ್ರತಾ ಸಿಬ್ಬಂದಿಗಳ ಖರ್ಚು-ವೆಚ್ಚಗಳನ್ನೂ ಚುನಾವಣಾ ಆಯೋಗ ನೋಡಿಕೊಳ್ಳಬೇಕಾಗುತ್ತದೆ.
ಚುನಾವಣೆ ಒಂದು ಸಾಂವಿಧಾನಿಕ ಪ್ರಕ್ರಿಯೆ. ಇದಕ್ಕೆ ಹಣಕಾಸಿನ ಕೊರತೆ ಅಥವಾ ಸಮಸ್ಯೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈಗಾಗಲೇ ಅಗತ್ಯ ಹಣಕಾಸಿನ ನೆರವನ್ನು ಸರ್ಕಾರ ಒದಗಿಸಿದೆ. ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಆಗಿನ ಬೇಡಿಕೆ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ಸರ್ಕಾರದಿಂದ ಹಣ ಸಿಕ್ಕೆ ಸಿಗುತ್ತದೆ.
ಸಂಜೀವ ಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ.
ವೆಚ್ಚದ ಮಿತಿ 70 ಲಕ್ಷ
2014ರ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿ 70 ಲಕ್ಷ ರೂ.ಇತ್ತು. ಈ ಬಾರಿಯೂ ಅದೇ ಮುಂದುವರಿಯಲಿದೆ. 1999ರ ಲೋಕಸಭಾ ಚುನಾವಣೆ ವೇಳೆ ಅಭ್ಯರ್ಥಿಗಳ ವೆಚ್ಚದ ಮಿತಿ 40 ಲಕ್ಷ ರೂ.ಇತ್ತು. 2014ರ ಚುನಾವಣೆಯಲ್ಲಿ ಆ ಮಿತಿಯನ್ನು ಸರ್ಕಾರ 70 ಲಕ್ಷಕ್ಕೆ ಹೆಚ್ಚಿಸಿತ್ತು. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಿವರಗಳ ಪ್ರಕಾರ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಅಭ್ಯರ್ಥಿಗಳ ಸರಾಸರಿ ವೆಚ್ಚ 40 ರಿಂದ 50 ಲಕ್ಷ ರೂ.ಆಗಿತ್ತು.
ರಫೀಕ್ ಅಹ್ಮದ್