ಬೆಂಗಳೂರು: ಕೇರಳಕ್ಕೆ ಶನಿವಾರ ಮುಂಗಾರು ಪ್ರವೇಶಿಸಿದೆಯಾದರೂ, ರಾಜ್ಯಕ್ಕೆ ಬರಲು ಇನ್ನೂ ಎರಡು, ಮೂರು ದಿನಗಳು ತಡವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆಯ ಅಂದಾಜಿನಂತೆ ಶನಿವಾರ ಕೇರಳಕ್ಕೆ ಮುಂಗಾರು ಪ್ರವೇಶಿಸಿದ್ದರೂ, ಮುಂಗಾರು ಮಾರುತಗಳು ಪ್ರಬಲವಾಗಿಲ್ಲ. ಹೀಗಾಗಿ ಕೇರಳದ ಅರ್ಧ ಭಾಗವನ್ನು ಮಾತ್ರ ಮುಂಗಾರು ಆವರಿಸಿದೆ. ಪರಿಣಾಮ ಮುಂದಿನ 48 ಗಂಟೆಗಳಲ್ಲಿ ರಾಜ್ಯ ಪ್ರವೇಶಿಸುವ ಸಾಧ್ಯತೆಗಳು ತೀರಾ ಕಡಿಮೆಯೆಂದು ಹವಾಮಾನ ಇಲಾಖೆ ತಿಳಿಸಿದೆ.
“ಹವಾಮಾನ ಇಲಾಖೆ ಹಿಂದೆ ತಿಳಿಸಿದಂತೆ ಕೇರಳಕ್ಕೆ ಶನಿವಾರ ಮುಂಗಾರು ಪ್ರವೇಶಿಸಿದ್ದು, ಹೆಚ್ಚಿನ ಭಾಗಗಳಲ್ಲಿ ಮಳೆಯಾಗುತ್ತಿದೆ. ಆದರೆ, ಮಾರುತಗಳು ಪ್ರಬಲವಾಗಿಲ್ಲದ ಕಾರಣ ಈವರೆಗೆ ಮುಂಗಾರು ಸಂಪೂರ್ಣ ಕೇರಳಕ್ಕೆ ಬಂದಿಲ್ಲ. ಇದರಿಂದಾಗಿ ಕರ್ನಾಟಕಕ್ಕೆ ಮುಂಗಾರು ಬರುವುದು ಇನ್ನಷ್ಟು ವಿಳಂಬವಾಗಲಿದೆ” ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಸುನೀಲ್ ಗವಾಸ್ಕರ್ ತಿಳಿಸಿದರು.
ಮುಂದಿನ 24 ಗಂಟೆಗಳಲ್ಲಿ ಒಳನಾಡು ಹಾಗೂ ಕರಾವಳಿಯ ಹಲವೆಡೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿ ಭಾಗದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಮೂಲಕ ರಾಜ್ಯ ಪ್ರವೇಶ: ಅರಬ್ಬಿ ಸಮುದ್ರದ ಮೂಲಕ ಕೇರಳದ ಕರಾವಳಿಗೆ ಶನಿವಾರ ಮುಂಗಾರು ಪ್ರವೇಶಿಸಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಕರಾವಳಿ ಮೂಲಕ ಮುಂಗಾರು ಪ್ರವೇಶಿಸಲಿದೆ. ಈಗಾಗಲೇ ಆ ಭಾಗಗಳಲ್ಲಿ ಪೂರಕ ವಾತಾವರಣ ನಿರ್ಮಾಣವಾಗಿದ್ದು, ಮಾರುತಗಳು ಬಲಗೊಂಡರೆ ಒಂದೆರಡು ದಿನಗಳಲ್ಲಿಯೂ ಮುಂಗಾರು ಪ್ರವೇಶಿಸಬಹುದು ಎಂದು ಗವಾಸ್ಕರ್ ಮಾಹಿತಿ ನೀಡಿದರು.