ಬೆಳ್ತಂಗಡಿ: ರಾಜ್ಯ ಸರಕಾರದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಶುಕ್ರವಾರ ಧರ್ಮಸ್ಥಳ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆದು ವಿಶೇಷ ಸೇವೆಯನ್ನು ಸಲ್ಲಿಸಿದರು. ಬಳಿಕ ಸಚಿವ ಭೈರತಿ ಅವರು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಸಚಿವರ ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಮತ್ತು ಸುರೇಂದ್ರ ಕುಮಾರ್ ಸಹಿತ ಹಲವರು ಜೊತೆಗಿದ್ದರು.
ಸಚಿವ ಭೈರತಿ ಬಸವರಾಜ್ ಅವರು ಧರ್ಮಸ್ಥಳಕ್ಕೆ ಭೇಟಿ ನೀಡುವ ಮುನ್ನ ಭಾರತೀಯ ಜನತಾ ಪಕ್ಷದ ಬೆಳ್ತಂಗಡಿ ಘಟಕದ ವತಿಯಿಂದ ಅವರಿಗೆ ಪೌರ ಸಮ್ಮಾನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪಡಂಗಡಿ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ, ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ಸದಸ್ಯರಾದ ಸುಕೇಶ್ ಪೂಜಾರಿ, ಅಹಮ್ಮದ್ ಬಾವ ಅವರು ಸಚಿವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಭೈರತಿ ಬಸವರಾಜ್ ಅವರು ಬೆಳ್ತಂಗಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಕರಿಸುವುದಾಗಿ ಭರವಸೆ ನೀಡಿದರು. ಮಂಗಳೂರು ಸ್ಮಾರ್ಟ್ ಸಿಟಿ ಅಭಿವೃದ್ಧಿ ಸೇರಿದಂತೆ ತುಂಬೆ ಅಣೆಕಟ್ಟು ತಡೆಗೋಡೆ ನಿರ್ಮಾಣಕ್ಕೆ 15 ಕೋಟಿ. ರೂ. ಬಿಡುಗಡೆಗೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.