ಮೈಸೂರು: ಆನೆ ಪಳಗಿಸುವ ಪರಿಣಿತಿಯಲ್ಲಿ ಕರ್ನಾಟಕದ ಮಾವುತರು, ಕಾವಾಡಿಗಳು ಇತರ ರಾಜ್ಯಗಳಿಗೆ ಮಾದರಿಯಾಗಿದ್ದು, ನಮ್ಮಲ್ಲಿರುವ ಮಾವುತರ ಜ್ಞಾನವನ್ನು ಇತರರಿಗೂ ತಿಳಿಸಿಕೊಡುವ ಕೆಲಸವಾಗಬೇಕಿದೆ ಎಂದು ಬೆಂಗಳೂರು ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಮನೋಜ್ ಕುಮಾರ್ ತಿಳಿಸಿದರು.
ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ದೇಶದ ವಿವಿಧ 10 ಮೃಗಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಾವುತರಿಗೆ ಆಯೋಜಿಸಿದ್ದ “ಸಾಮರ್ಥ್ಯ ಅಭಿವೃದ್ಧಿ ತರಬೇತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅವಿನಾಭಾವ ಸಂಬಂಧ: ಆನೆ ಮತ್ತು ಕಾವಾಡಿಗಳ ನಡುವೆ ಅವಿನಾಭಾವ ಸಂಬಂಧವಿದ್ದು, ಆನೆಗಳನ್ನು ಪಳಗಿಸುವಲ್ಲಿ ರಾಜ್ಯದ ಮಾವುತರು, ಕಾವಾಡಿಗಳು ಇತರರಿಗೆ ಮಾದರಿಯಾಗಿದ್ದಾರೆ. ಆನೆಗಳ ನಿಯಂತ್ರಿಸುವ ಪ್ರವೃತ್ತಿಯನ್ನು ನಮ್ಮ ಮಾವುತರು, ಕಾವಾಡಿಗಳು ಅನೇಕ ತಲೆಮಾರುಗಳಿಂದ ಬೆಳೆಸಿಕೊಂಡು ಬಂದಿರುವುದು ಶ್ಲಾಘನೀಯ. ಹೀಗಾಗಿ ಆನೆಗಳ ಪಾಲನೆ ಹಾಗೂ ಅವುಗಳನ್ನು ಸಾಕಾನೆಗಳನ್ನಾಗಿ ಪಳಗಿಸುವ ಕಲೆಯನ್ನು ಬೇರೆ ರಾಜ್ಯದ ಮಾವುತರಿಗೂ ತಿಳಿಸಿಕೊಡುವ ಅಗತ್ಯವಿದೆ ಎಂದರು.
ಹುಲಿ, ಆನೆ ಸಂತತಿ ವೃದ್ಧಿ: ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾತನಾಡಿ, ರಾಜ್ಯದ ವಿವಿಧ ಆನೆ ಸಾಕು ಕೇಂದ್ರಗಳಲ್ಲಿ 95 ಸಾಕಾನೆಗಳಿದ್ದು, ರಾಜ್ಯದಲ್ಲಿ 9 ಮೃಗಾಲಯದಲ್ಲಿ 42 ಆನೆಗಳಿವೆ. ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸಾರ್ವಜನಿಕರ ಸಹಕಾರದಲ್ಲಿ ರಾಜ್ಯದಲ್ಲಿ ಹುಲಿ ಮತ್ತು ಆನೆಗಳ ಸಂತತಿ ಹೆಚ್ಚುತ್ತಿದೆ. ಆನೆ ಮತ್ತು ಮಾವುತ, ಕಾವಾಡಿಗಳ ನಡುವೆ ಉತ್ತಮ ಭಾವನಾತ್ಮಕ ಸಂಬಂಧವಿದ್ದು, ಇದರಿಂದಾಗಿ ಮಾವುತನ ಸೂಚನೆಗಳನ್ನು ಬಲಿಷ್ಠವಾದ ಆನೆ ಸಹ ಪಾಲಿಸುತ್ತದೆ. ಇದು ಆನೆ ಮತ್ತು ಮಾವತರ ನಡುವಿನ ಅನುಬಂಧಕ್ಕೆ ಕಾರಣವಾಗಿದೆ ಎಂದು ಹೇಳಿದರು.
ತರಬೇತಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾವುತರು ಹಾಗೂ ಕಾವಾಡಿಗಳ ಮೊದಲ ತಂಡಕ್ಕೆ ಐದು ದಿನಗಳ ಕಾರ್ಯಾಗಾರ ನಡೆಯಲಿದ್ದು, ಇದಕ್ಕಾಗಿ 10 ಮೃಗಾಲಯದ 59 ಮಾವುತರು ಹಾಗೂ ಕಾವಾಡಿಗಳು ಭಾಗವಹಿಸಿದ್ದಾರೆ. ಮುಂದಿನ ವರ್ಷದ ಫೆಬ್ರವರಿ 4 ರಿಂದ 8ರವರೆಗೆ ಎರಡನೇ ತಂಡದ ಮಾವುತರು ಹಾಗೂ ಕಾವಾಡಿಗಳಿಗೆ ಕಾರ್ಯಾಗಾರ ನಡೆಯಲಿದೆ.
ಇದಕ್ಕೂ ಮುನ್ನ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್‌ರಾಮ್ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ, ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಸಿ.ಸಿದ್ದರಾಮಪ್ಪ, ಚೆನ್ನೈನ ಪ್ರಾಣಿ ಸಂಗೋಪನಾ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ.ಎನ್.ಎಸ್.ಮನೋಹರನ್, ಮೃಗಾಲಯ ಸಹಾಯಕ ನಿರ್ದೇಶಕ ಡಾ.ಕೆ.ಆರ್.ರಮೇಶ್ ಇನ್ನಿತರರು ಕಾರ್ಯಾಗಾರದಲ್ಲಿ ಹಾಜರಿದ್ದರು.
ವನ್ಯಜೀವಿ ರಕ್ಷಣೆಗೆ ಆಸ್ಪತ್ರೆ ನಿರ್ಮಾಣ: ಕಾಡಿನಿಂದ ನಾಡಿಗೆ ಬರುವ ವನ್ಯಜೀವಿಗಳನ್ನು ರಕ್ಷಿಸಲು ಹೆಚ್ಚಿನ ಮಾನವ ಸಂಪನ್ಮೂಲ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಂಪಿ ಮತ್ತು ಗದಗದಲ್ಲಿ ಆಸ್ಪತ್ರೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆಸ್ಪತ್ರೆ ಹಾಗೂ ವನ್ಯಜೀವಿ ನುರಿತ ಸಿಬ್ಬಂದಿಯಿಂದ ಆಯಾ ಪ್ರದೇಶದಲ್ಲೇ ನಾಡಿಗೆ ಬರುವ ಪ್ರಾಣಿಗಳನ್ನು ರಕ್ಷಿಸಲು ಇದು ಸಹಕಾರಿಯಾಗಿದೆ. ನುರಿತ ಸಿಬ್ಬಂದಿಗಳನ್ನು ಹೆಚ್ಚಿಸಿದರೆ, ಪ್ರಾಣಿಗಳ ನಿರ್ವಹಣೆ ಜತೆಗೆ ವನ್ಯಜೀವಿಗಳಿಗೆ ಆಗುವ ತೊಂದರೆಯನ್ನು ತಡೆಯಬಹುದು ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ತಿಳಿಸಿದರು.