ಬೆಂಗಳೂರು: ರಾಜ್ಯ ಬಿಜೆಪಿ ನೇಕಾರರ ಪ್ರಕೋಷ್ಠವು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಆ.7ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದು, ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ನೇಕಾರರ ಸಮಾವೇಶ ನಡೆಸಲು ನಿರ್ಧರಿಸಿದೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಶನಿವಾರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, 30 ಜಿಲ್ಲೆಗಳ ಜಿಲ್ಲಾ ಸಂಚಾಲಕರು, ಪದಾಧಿಕಾರಿಗಳು ಪಾಲ್ಗೊಂಡಿದ್ದ ರಾಜ್ಯ ಬಿಜೆಪಿ ನೇಕಾರರ ಪ್ರಕೋಷ್ಠದ ವಿಶೇಷ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಇದೇ ವೇಳೆ, ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ ದಿನವೇ ನೇಕಾರರ 100 ಕೋಟಿ ರೂ. ಸಾಲ ಮನ್ನಾ ಮಾಡಿರುವುದಾಗಿ ಘೋಷಿಸಿರುವುದಕ್ಕೆ ಪ್ರಕೋಷ್ಠದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಮುಖ್ಯಮಂತ್ರಿಗಳು ಘೋಷಿಸಿರುವ ಸಾಲ ಮನ್ನಾ ಯೋಜನೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು, ನಗರ ಸಹಕಾರಿ ಬ್ಯಾಂಕ್‌ಗಳು, ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಹಾಗೂ ನೇಕಾರರ ಸೇವಾ ಸಂಘಗಳಿಂದ ಸಾಲ ಪಡೆದ 50 ಸಾವಿರ ನೇಕಾರರು ಫಲಾನುಭವಿಗಳಾಗಿದ್ದಾರೆ. ಜತೆಗೆ, ಅಸಂಘಟಿತ ನೇಕಾರರು, ಸಹಕಾರ ಸಂಘಗಳ ವ್ಯಾಪ್ತಿಗೆ ಒಳಪಡುವ ನೇಕಾರರು, ಕೈಮಗ್ಗ ಅಭಿವೃದ್ಧಿ ನಿಗಮಗಳಲ್ಲಿ ದುಡಿಯುವ ನೇಕಾರರು ಸಾಲ ಮನ್ನಾದ ಲಾಭ ಪಡೆಯಲಿದ್ದಾರೆ ಎಂದು ಪ್ರಕೋಷ್ಠದ ಸಂಚಾಲಕ ಡಾ.ಜಿ.ರಮೇಶ್ ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಸದಸ್ಯತ್ವವನ್ನು ತೀವ್ರಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾ ಸಂಚಾಲಕರು ಹಾಗೂ ಮಂಡಲಗಳ ಸದಸ್ಯರನ್ನು ಒಳಗೊಂಡ ಜಿಲ್ಲಾ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಪ್ರಕೋಷ್ಠದ ಸಹ ಸಂಚಾಲಕ ಕಾಂತರಾಜು, ಹನುಮಂತ ಪಿ.ಶೆಟ್ಟಿ, ಸುಮಂಗಲಾ ವಿ.ಬಾಗೇವಾಡಿ, ಮಾರ್ಗದರ್ಶಕರಾದ ಡಾ.ಕೆ.ನಾರಾಯಣ ಉಪಸ್ಥಿತರಿದ್ದರು.