ಬಾಗಲಕೋಟೆ: ಇಂದು ಪ್ರತಿಯೊಬ್ಬರು ಒತ್ತಡದ ಬದುಕಿನಲ್ಲಿ ಸಾಗುತ್ತಿದ್ದೇವೆ. ಅದಕ್ಕೆ ಪ್ರತಿನಿತ್ಯ ಯಾವುದಾದರೊಂದು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡು ಒ್ತತಡ ನಿವಾರಣೆ ಮಾಡಿಕೊಳ್ಳಬೇಕು ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದರು. ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 11ನೇ ರಾಜ್ಯ ಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಆಯ್ಕೆ ಪ್ರಕ್ರಿಯೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಆವರು ಮಾತನಾಡಿದರು.
ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಒತ್ತಡ, ಸಮಸ್ಯೆಗಳಿದ್ದರೂ ನಿವಾರಣೆ ಮಾಡಬಹುದಾಗಿದೆ. ಕ್ರೀಡೆಯಲ್ಲಿ ಸೋಲು ಗೆಲವು ಸಹಜ. ಅವುಗಳನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. 11ನೇ ರಾಜ್ಯ ಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಆಯ್ಕೆ ಪ್ರಕ್ರಿಯೆ ತೀರ್ಪುಗಾರರು ಕ್ರೀಡಾಪಟುಗಳ ಪ್ರತಿಭೆ ಪರಿಗಣಿಸಿ ತೀರ್ಪು ನೀಡಬೇಕು. ಪ್ರತಿಭೆಗಳಿಗೆ ಹೆಚ್ಚಿನ ಒತ್ತು ನೀಡಿ ಅವರ ಸಾಧನೆಗೆ ಬೆನ್ನು ತಟ್ಟಬೇಕು ಎಂದು ತಿಳಿಸಿದರು.
ಬಾಗಲಕೋಟೆ-ವಿಜಯಪುರದ ಸೈಕ್ಲಿಂಗ್ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆ ತೋರಿ ಸಾಧನೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಸೈಕ್ಲಿಸ್ಟ್‌ಗಳು ಹೆಚ್ಚು ಇರುವುದರಿಂದ ಆವರ ಸಾಧನೆಗೆ ಪೂರಕವಾಗಿರುವ ಟ್ರ್ಯಾಕ್ ಸೆ„ಕ್ಲಿಂಗ್ ಕ್ರೀಡಾಕೂಟ ಆಯೋಜಿಸಬೇಕು. ಇದರಿಂದ ಆವರ ಸಾಮರ್ಥ್ಯ ತಿಳಿಯುತ್ತದೆ ಎಂದರು. ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಶ್ರೀಶೈಲ್ ಎಂ. ಕುರಣಿ ಮಾತನಾಡಿ, 11ನೇ ರಾಜ್ಯ ಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಆಯ್ಕೆ ಪ್ರಕ್ರಿಯೆಯಲ್ಲಿ ಬಾಲಕರು ಮತ್ತು ಬಾಲಕಿಯರು ಸೇರಿ ಒಟ್ಟು 129 ಸೈಕ್ಲಿಂಗ್ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. 16 ವೈಯಕ್ತಿಕ, 10 ಗುಂಪು ಸ್ಪರ್ಧೆಗಳು ನಡೆಯಲಿವೆ ಎಂದು ಹೇಳಿದರು.
129 ಕ್ರೀಡಾಪಟುಗಳಲ್ಲಿ ರಾಷ್ಟ್ರೀಯ ಸೈಕ್ಲಿಂಗ್‌ಗೆ 30 ಜನರ ರಾಜ್ಯ ತಂಡ ರಚನೆ ಮಾಡಿ ರಾಷ್ಟ್ರೀಯ ಮಟ್ಟಕ್ಕೆ ಕಳಿಸುವ ಕಾರ್ಯಮಾಡಲಾಗುವುದು. ರಾಜ್ಯದ ಸೈಕ್ಲಿಸ್ಟ್‌ಗಳು ಅಂತಾರಾಜ್ಯವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡಿದ್ದಾರೆ. 2018ರಲ್ಲಿ ಪುಣಾ, ಹರಿಯಾಣಾದಲ್ಲಿ ನಡೆದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಕರ್ನಾಟಕದ ಸೈಕ್ಲಿಸ್ಟ್‌ಗಳು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಶನ್ ಅಧ್ಯಕ್ಷ ಶ್ರೀಧರ ಗೋರೆ, ಉಪಾಧ್ಯಕ್ಷ ಆರ್.ಎಚ್. ಪೂಜಾರ, ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಯಂಕಪ್ಪ ಎಂಟೆತ್ತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಎಂ. ಸರಶೆಟ್ಟಿ ಉಪಸ್ಥಿತರಿದ್ದರು.