Advertisement

Teacher Award ರಾಜ್ಯಮಟ್ಟದ ಪ್ರಾಚಾರ್ಯ, ಶಿಕ್ಷಕ ಪ್ರಶಸ್ತಿ ಪುರಸ್ಕೃತರು

01:18 AM Sep 04, 2024 | Team Udayavani |

ಈ ಬಾರಿಯ ರಾಜ್ಯಮಟ್ಟದ ಪ್ರಾಚಾರ್ಯ ಪ್ರಶಸ್ತಿಗೆ ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ರಾಮಕೃಷ್ಣ ಬಿ.ಜಿ. ಆಯ್ಕೆಯಾಗಿದ್ದಾರೆ. ಉತ್ತಮ ಶಿಕ್ಷಕ ಪ್ರಶಸ್ತಿಗೆ ಕಾರ್ಕಳ ಸಂಯುಕ್ತ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ವಿನಾಯಕ ನಾಯ್ಕ್, ಮೂಡುಬಿದಿರೆಯ ನೀರ್ಕೆರೆ ದ.ಕ. ಜಿ. ಪಂ. ಹಿ. ಪ್ರಾ. ಶಾಲಾ ಮುಖ್ಯಶಿಕ್ಷಕಿ ಯಮುನಾ ಕೆ. ಮತ್ತು ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ವಿಶ್ವನಾಥ ಕೆ. ವಿಟ್ಲ ಅವರು ಆಯ್ಕೆಯಾಗಿದ್ದಾರೆ.

Advertisement

ಕುಂದಾಪುರ ಸ. ಪ.ಪೂ. ಪ್ರಾಚಾರ್ಯ ರಾಮಕೃಷ್ಣ ಬಿ.ಜಿ.
ಕುಂದಾಪುರ: ಇಲ್ಲಿನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರಾಮಕೃಷ್ಣ ಬಿ.ಜಿ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಬೆಳೆಯೂರಿನವರು. ಗಣಪತಿ ಬಿ.ಆರ್‌. – ಜಯಲಕ್ಷ್ಮೀಯವರ ಪುತ್ರ. ಪ್ರೌಢ ಶಿಕ್ಷಣ ವರೆಗೆ ಬೆಳೆಯೂರಿನಲ್ಲಿ, ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ ಮೈಸೂರಿನಲ್ಲಿ ಪಡೆದರು. ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ.ಯ ತರ್ಕಶಾಸ್ತ್ರ ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಶತಮಾನೋತ್ತರ ಬೆಳ್ಳಿಹಬ್ಬವನ್ನು ಆಚರಿಸಿಕೊಂಡ ಕುಂದಾಪುರದ ಸರಕಾರಿ ಪ.ಪೂ. ಕಾಲೇಜಿನ ಭೌತಿಕ ಮತ್ತು ಬೌದ್ಧಿಕ ಉನ್ನತಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ CET/NEET/JEE ಪರೀಕ್ಷೆಗಳಿಗೆ ಆನ್‌ಲೈನ್‌ ತರಬೇತಿಗಳು, 20,000ಕ್ಕೂ ಮೀರಿದ ಅಮೂಲ್ಯವಾಗಿರುವ ಪುಸ್ತಕಗಳ ಗ್ರಂಥ ಭಂಡಾರ – ಹೀಗೆ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕ್ರಿಯಾತ್ಮಕ ಹಾಗೂ ಪ್ರಯೋಗಶೀಲ ಕ್ರಮಗಳನ್ನು ಕೈಗೊಂಡು ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಮುಂದಿನ ಶಿಕ್ಷಣಕ್ಕೆ ಪೂರಕ ಸಹಕಾರ ನೀಡುವ ಪ್ರಯತ್ನ ಮಾಡಿದ್ದಾರೆ.

ಸ. ಸಂಯುಕ್ತ ಪ್ರೌಢಶಾಲೆಯ ವಿನಾಯಕ ನಾಯ್ಕ್
ಕಾರ್ಕಳ: ಇಲ್ಲಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ವಿನಾಯಕ ನಾಯ್ಕ್ ಇವರಿಗೆ ಪ್ರಶಸ್ತಿ ಲಭಿಸಿದೆ. ಇವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತುಂಬೆಬೀಳು ಗ್ರಾಮದ ಮಹಾದೇವ ನಾಯ್ಕ್, ಮಾಲೂ ದಂಪತಿ ಪುತ್ರ. 2007ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. 2010ರಲ್ಲಿ ರೆಂಜಾಳ ಶಾಲೆಗೆ ವರ್ಗಾವಣೆಗೊಂಡು ಬಂದು ಕಳೆದ 14 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.ಸಮಾಜ ವಿಜ್ಞಾನ ಡಿಜಿಟಲ್‌ ಪ್ರಯೋಗಾಲಯವನ್ನು ಜಿಲ್ಲೆಯಲ್ಲಿ ಮೊತ್ತ ಮೊದಲ ಬಾರಿಗೆ ದಾನಿಗಳ ಸಹಕಾರದಿಂದ ರೆಂಜಾಳ ಶಾಲೆಯಲ್ಲಿ ಆರಂಭಿಸಿದ ಖ್ಯಾತಿ ಅವರದ್ದಾಗಿದೆ.

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಪೂರ್ವಭಾವಿ ಪ್ರೇರಣ ಶಿಬಿರ ಆಯೋಜಿಸಿದ್ದರು. ಸಮಾಜ ವಿಜ್ಞಾನ ವಿಷಯಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಕೊರೊನಾ ಸಂದರ್ಭ ಜಿಲ್ಲೆಗೆ ಸಮಾಜ ವಿಜ್ಞಾನ ಪಾಠ ಟೆಲಿಕಾಸ್ಟ್ ಮಾಡಿದ್ದರು.

Advertisement

ಸರಕಾರಿ ಪ್ರೌಢ ಶಾಲೆಯ ವಿಶ್ವನಾಥ ಕೆ. ವಿಟ್ಲ
ಬೆಳ್ತಂಗಡಿ: ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ವಿ.ಕೆ. ವಿಟ್ಲ ಎಂದೇ ಹೆಸರುವಾಸಿಯಾದ (ವಿಶ್ವನಾಥ ವಿಟ್ಲ) ಅವರಿಗೆ ಈ ಬಾರಿಯ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಸಿದೆ.

ಮೂಲತಃ ವಿಟ್ಲದ ಕಲ್ಲಕಟ್ಟ ನಿವಾಸಿ ಯಾಗಿದ್ದು, ಪ್ರಸ್ತುತ ಉಜಿರೆಯಲ್ಲಿ ನೆಲೆಸಿದ್ದಾರೆ. ಗುರುವಾಯನಕೆರೆ ಶಾಲೆಯನ್ನು ವಿವಿಧ ಕಲಾಕೃತಿಗಳ ಮೂಲಕ ವರ್ಣರಂಜಿತವಾಗಿ ಅಲಂಕರಿಸುವ ಮೂಲಕ ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.

ಚಂದಳಿಕೆ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವಿಠಲ ಪ.ಪೂ.ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪೂರೈಸಿದ್ದರು.

ಆರಂಭದಲ್ಲಿ ಸುಳ್ಯದ ಬಿಳಿನೆಲೆ ಸುಬ್ರಹ್ಮಣ್ಯೇಶ್ವರ ಪ್ರೌಢ ಶಾಲೆಯಿಂದ ಆರಂಭಗೊಂಡ ಅವರ ವೃತ್ತಿ ಬದುಕು ಆಬಳಿಕ ಉಜಿರೆಯ ಎಸ್‌ಡಿಎಂ ಮತ್ತು ಇದೀಗ ಗುರುವಾಯನಕೆರೆ ಪ್ರೌಢ ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಸೇವೆನೀಡುತ್ತಿದ್ದಾರೆ. 2016 ರಲ್ಲಿ ಈ ಶಾಲೆಗೆ ದ.ಕ.ಜಿಲ್ಲಾ ಉತ್ತಮ ಶಾಲೆ ಪ್ರಶಸ್ತಿ ಲಭಿಸುವ ಜತೆಗೆ 15 ಲಕ್ಷ ರೂ. ಗೌರವ ಪಡೆಯುವಲ್ಲಿ ಕಾರಣೀಭೂತರಾಗಿದ್ದಾರೆ. 2017ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ.

ನೀರ್ಕೆರೆ ಶಾಲಾ ಮುಖ್ಯಶಿಕ್ಷಕಿ ಯಮುನಾ
ಮೂಡುಬಿದಿರೆ: ಇಲ್ಲಿನ ನೀರ್ಕೆರೆ ದ.ಕ. ಜಿ. ಪಂ. ಹಿ. ಪ್ರಾ. ಶಾಲಾ ಮುಖ್ಯಶಿಕ್ಷಕಿ ಯಮುನಾ ಕೆ. ಅವರಿಗೆ ಈ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸಿಕ್ಕಿದೆ. ಹುಟ್ಟೂರು ಬೈಂದೂರಿನಲ್ಲಿ ಶಿಕ್ಷಕಿಯಾಗಿ 6 ವರ್ಷ, ಮೂಡುಬಿದಿರೆ ಕೆಸರ್‌ಗದ್ದೆ ಶಾಲೆಯಲ್ಲಿ 17 ವರ್ಷ ಕರ್ತವ್ಯ ನಿರ್ವಹಿಸಿ, ಮುಖ್ಯಶಿಕ್ಷಕಿಯಾಗಿ ಭಡ್ತಿ ಹೊಂದಿ ನೀರ್ಕೆರೆ ಶಾಲೆಗೆ ಬಂದರು. ಶಾಲೆಯ ದುರಸ್ತಿ, ಕೊಠಡಿ, ಶೌಚಾಲಯ, ಪೀಠೊಪಕರಣ, ಕಂಪ್ಯೂಟರ್‌ , ಸ್ಮಾರ್ಟ್‌ಕ್ಲಾಸ್‌, ಲ್ಯಾಪ್‌ಟಾಪ್‌, ಗ್ರಂಥಾಲಯ ಕೊಠಡಿ, ರಂಗಮಂದಿರ, ಅಂಗಳಕ್ಕೆ ಇಂಟರ್‌ಲಾಕ್‌ ಮೊದಲಾದ ವ್ಯವಸ್ಥೆಗಳನ್ನು ದಾನಿಗಳು, ಪೋಷಕರು, ಜನಪ್ರತಿನಿಧಿಗಳು, ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಹೊಂದಿಸುವಲ್ಲಿ ಪರಿಶ್ರಮಿಸಿದ್ದಾರೆ. ಕ್ರೀಡೆ, ಸಾಂಸ್ಕೃತಿಕ ಕಲಾಪಗಳಲ್ಲೂ ಮಕ್ಕಳನ್ನು ತೊಡಗಿಸಿಕೊಂಡಿದ್ದಾರೆ. ಆಂಗ್ಲ ಮಾಧ್ಯಮ ತರಗತಿಗಳನ್ನೂ ಪ್ರಾರಂಭಿಸಿದ್ದಾರೆ. ಗಣಿತ ಶಿಕ್ಷಕಿಯಾಗಿ ಉತ್ತಮ ಹೆಸರಿದೆ. 2016ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next