ಹಾವೇರಿ: ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನ್ಯಾ|ಸದಾಶಿವ ಆಯೋಗದ ವರದಿ ಬಹಿರಂಗಪಡಿಸಲು ಹಾಗೂ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾರ್ಚ್ ಕೊನೆಯ ವಾರದಲ್ಲಿ ನಗರದಲ್ಲಿ ರಾಜ್ಯಮಟ್ಟದ ಮಾದಿಗ ಸಮಾವೇಶ ಆಯೋಜಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಾದಿಗ ಮಹಾಸಭಾದ ಕಾರ್ಯಾಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗರ ಮತ್ತು ಮಾದಿಗ ಸಂಬಂಧಿತ ಜಾತಿಗಳಾದ ಸಮಗಾರ, ಮೋಚಿ, ಡೋಹರ ಕಕ್ಕಯ್ಯ ಹಾಗೂ ಡಕ್ಕಲಿಗ ಸಮುದಾಯಗಳ ಸಮಾವೇಶವನ್ನು ಆಯೋಜಿಸಲು ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘ ಹಾಗೂ ಜಿಲ್ಲಾ ಆದಿಜಾಂಬವ ಸಂಘ ಹಾವೇರಿ ಜಿಲ್ಲಾ ಸಮಿತಿ ನಿರ್ಧರಿಸಿದೆ ಎಂದರು.
ನ್ಯಾ|ಎ.ಜೆ.ಸದಾಶಿವ ಆಯೋಗದ ವರದಿ ಮತ್ತು ನ್ಯಾ|ನಾಗಮೋಹನದಾಸ ಆಯೋಗದ ವರದಿ ಬಹಿರಂಗಪಡಿಸಲು ಹಾಗೂ ಸಮುದಾಯದ ನಿಗಮಗಳಿಗೆ ಅನುದಾನ ಬಿಡುಗಡೆಗೆ ಅಗ್ರಹಿಸಿ ನಡೆಯುವ ಈ ಬೃಹತ್ ಸಮಾವೇಶದಲ್ಲಿ ಸಮುದಾಯದ ಸ್ವಾಮೀಜಿಗಳಾದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಬಸವ ಹರಳಯ್ಯ ಸ್ವಾಮೀಜಿ, ಮಾತಂಗಮುನಿ ಸ್ವಾಮೀಜಿ, ಆದಿಜಾಂಬವ ಷಡಕ್ಷರಿ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಸಮಾವೇಶವನ್ನು ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ಹಾಗೂ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪರವರ ನೇತೃತ್ವದಲ್ಲಿ ನಡೆಸಲಾಗುವುದು. ಸಮಾವೇಶದ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗುವುದು. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್ .ಡಿ.ಕುಮಾರಸ್ವಾಮಿ ಮತ್ತು ವಿವಿಧ ರಾಜಕೀಯ ಪಕ್ಷಗಳ ರಾಜ್ಯಾಧ್ಯಕ್ಷರನ್ನು, ಸಮುದಾಯದ ಹಾಲಿ, ಮಾಜಿ ಸಚಿವರು, ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಅಲ್ಲದೇ ವಿವಿಧ ಸಂಘಟನೆಗಳ ರಾಜ್ಯ ಅಧ್ಯಕ್ಷರನ್ನು ಸಮಾವೇಶಕ್ಕೆ ಅಹ್ವಾನಿಸಲಾಗುವುದು ಎಂದು ಹೇಳಿದರು.
ಮಾದಿಗ ಮಹಾಸಭಾದ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ ಮಾತನಾಡಿ, ಉತ್ತರ ಕರ್ನಾಟಕದ ಹೆಬ್ಟಾಗಿಲು, ಮೇಲಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರವಾಗಿರುವುದರಿಂದ ಜಿಲ್ಲೆಯಲ್ಲಿ ರಾಜ್ಯ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶ ಪಕ್ಷಾತೀತವಾಗಿದ್ದು, ನಮ್ಮ ಹಕ್ಕೋತ್ತಾಯಗಳನ್ನು ಮಂಡಿಸುತ್ತೇವೆ. ಸಮಾವೇಶದಲ್ಲಿ ನಮ್ಮ ಬೇಡಿಕೆಗಳ ಬಗ್ಗೆ ಕೇವಲ ಆಶ್ವಾಸನೆ ನೀಡಿದರೆ ನಾವು ಕೇಳಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದೇ ಹೋದರೆ ಸಮಾವೇಶ ನಿರಂತರ ಧರಣಿ ಸತ್ಯಾಗ್ರಹವಾಗಿ ಮುಂದುವರೆಯುತ್ತದೆ ಎಂದರು.
ಸಮಾವೇಶ ಆಯೋಜನೆಯ ಕುರಿತಂತೆ ಪೂರ್ವಭಾವಿ ಸಭೆಯನ್ನು ನಡೆಸಲಾಗಿದೆ. ರಾಜ್ಯ ಮಟ್ಟದ ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಪರಮೇಶ್ವರ ಮೇಗಳಮನಿ, ಗೌರವಾಧ್ಯಕ್ಷರನ್ನಾಗಿ ಡಿ.ಎಸ್. ಮಾಳಗಿ, ಕಾರ್ಯಾಧ್ಯಕ್ಷರನ್ನಾಗಿ ಪುಟ್ಟಪ್ಪ ಮರೆಮ್ಮನವರ, ಗೌರವ ಕಾರ್ಯದರ್ಶಿಗಳನ್ನಾಗಿ ಬಿ.ಎಚ್.ಅನಿಲಕುಮಾರ, ಸಂಚಾಲಕರಾಗಿ ಎಸ್.ಆರ್.ರಂಗನಾಥ, ಹೊನ್ನಪ್ಪ ತಗಡಿನಮನಿ, ಸಂಜಯಗಾಂಧಿ ಸಂಜೀವಣ್ಣನವರ, ನಾಗರಾಜ ಮಾಳಗಿ ಅವರನ್ನು ನೇಮಕ ಮಾಡಲಾಗಿದೆ.
ಇನ್ನುಳಿದ ವಿವಿಧ ಹಂತದ ಪ್ರಚಾರ ಸಮಿತಿ, ವೇದಿಕೆ ಸಿದ್ಧತಾ ಸಮಿತಿ, ಇತ್ಯಾದಿ ಸಮಿತಿಗಳನ್ನು ಮುಂದಿನ ಸಭೆಯಲ್ಲಿ ರಚಿಸಿ ಸಮಾವೇಶದ ಸಿದ್ಧತೆಗಳನ್ನು ಚುರುಕುಗೊಳಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸಂಜಗಾಂಸಂಜೀವಣ್ಣನವರ, ಎಸ್.ಆರ್.ರಂಗನಾಥ, ನಾಗಲಿಂಗ ಮಾಳೆಕೊಪ್ಪ, ನಿಂಗಪ್ಪ ಕಡೂರ, ನ್ಯಾಯವಾದಿ ಎಸ್.ಜಿ.ಹೊನ್ನಪ್ಪನವರ, ಬಸವರಾಜ ಹೆಡಿಗ್ಗೊಂಡ, ಮಂಜು ದಡೂxರ, ಕೆ.ಆರ್. ಉಮೇಶ, ಪಾರ್ವತಮ್ಮ ಗೋಣಿಬಸಮ್ಮನವರ, ಮೈಲಪ್ಪ ಗೋಣಿಬಸಮ್ಮನವರ, ಪ್ರಕಾಶ್ ಹರಿಜನ, ಮಂಜು ಸಂಗಮ್ಮನವರ, ಪುಟ್ಟಪ್ಪ ಗುಡ್ಡಣ್ಣನವರ ಇತರರು ಇದ್ದರು.