ಬೀದರ: ಅಬ್ಬಬ್ಟಾ ಅಂದರೂ ಒಂದು ಕೋಣದ ಬೆಲೆ ಎಷ್ಟಿರಬಹುದು? ಒಂದು ಲಕ್ಷ, ಎರಡು ಲಕ್ಷ, ಮೂರ್‍ನಾಲ್ಕು ಲಕ್ಷ. ಆದರೆ, ಇಲ್ಲಿನ ಪಶು ವೈದ್ಯಕೀಯ ವಿವಿಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಪಶುಮೇಳದಲ್ಲಿ ಭಾಗವಹಿಸಿರುವ ಕೋಣ (ಟೈಗರ್)ದ ಬೆಲೆ ಬರೋಬ್ಬರಿ 50 ಲಕ್ಷ ರೂ.!
ಗಜಗಾತ್ರದ “ಜಾಫರಬಾದಿ ಗಿರ್’ ತಳಿಯ ಈ ಕೋಣ ಈಗ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. 13 ಕ್ವಿಂಟಲ್ ತೂಕದ ಈ ಟೈಗರ್‌ಗೆ ಈಗ 8 ವರ್ಷ ವಯಸ್ಸು. 6.5 ಅಡಿ ಎತ್ತರ ಹಾಗೂ 9 ಅಡಿ ಉದ್ದ ಇರುವ ಈ ಕೋಣದ ಹಣೆಯೇ ಮೂರು ಅಡಿ ಇದೆ. ಇದಕ್ಕೆ ನಾಲ್ಕು ಕಿವಿಗಳು ಇರುವುದು ವಿಶೇಷ. ಸಂತಾನೋತ್ಪತ್ತಿಗಾಗಿ ಬಳಸುವ ಈ ಟೈಗರ್‌ಗೆ ನಿತ್ಯ 2 ಸಾವಿರ ರೂ.ಖರ್ಚಿದೆ. ರಾಜ್ಯದಲ್ಲಿ ಸೀಮಿತ ಸಂಖ್ಯೆಯಲ್ಲಿ ಕಂಡು ಬರುವ ಈ ತಳಿಯ ಕೋಣದ ಕೊಂಬಿನ ಆಕಾರ ದಪ್ಪ ಮತ್ತು ಚಪ್ಪಟೆ ಯಾಗಿದ್ದು, ಅರ್ಧ ಸುರುಳಿ ಆಕೃತಿಯಲ್ಲಿರುತ್ತವೆ. ಮೇಳ ದಲ್ಲಿ ಈ ಕೋಣದ ವೀಕ್ಷಣೆ-ಮಾಹಿತಿ ಪಡೆಯಲು ಜನ ಮುಗಿಬಿದ್ದಿದ್ದಾರೆ.
ಪಾಕ್ ಗಡಿಯ ಕಚ್‌ನಿಂದ ಖರೀದಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಬೀದರ ಜಿಲ್ಲೆಯ ಬಗದಲ್‌ನ ಪ್ರಗತಿಪರ ರೈತ ಡಾ|ಮಹಮ್ಮದ್ ಇದ್ರಿಸ್ ಅಹಮ್ಮದ್ ಖಾದ್ರಿ ಪಾಕಿಸ್ತಾನ ಗಡಿಯ ಕಚ್‌ನಿಂದ ಈ ತಳಿ ಖರೀದಿಸಿದ್ದಾರೆ. ಖಾದ್ರಿ ಅವರ ಡೇರಿಯಲ್ಲಿ ಜಾಫರಬಾದಿ ಗಿರ್ ತಳಿಯ 80ಕ್ಕೂ ಹೆಚ್ಚು ಎಮ್ಮೆಗಳಿದ್ದು, ಅವುಗಳ ಸಂತಾನೋತ್ಪತ್ತಿಗಾಗಿ ಈ ಕೋಣ ತಂದಿದ್ದಾರೆ. ಹೊರಗಿನವರ ಒಂದು ಎಮ್ಮೆ ಕ್ರಾಸಿಂಗ್‌ಗೆ 5 ಸಾವಿರ ಶುಲ್ಕ ಪಡೆಯುತ್ತಾರೆ. ಇನ್ನು ಖಾದ್ರಿ ಬಳಿ ಈ ತಳಿಯ 2 ವರ್ಷದ ರಾಜಾ ಹೆಸರಿನ ಕೋಣ ಸಹ ಇದೆ.
ಟೈಗರ್‌ನ್ನು ಬಗದಲ್‌ನಿಂದ ಲಾರಿಯಲ್ಲಿ ಪಶುಮೇಳಕ್ಕೆ ತರಲಾಗಿದೆ. ದಿನಕ್ಕೆ 24 ಮೊಟ್ಟೆ, ಕಡಲೆ ಚುನ್ನಿ, ಉದ್ದಿನ ಬೇಳೆ, ಬಿಸ್ಕಿಟ್ ಮೊದಲಾದವುಗಳನ್ನು ಆಹಾರ ರೂಪದಲ್ಲಿ ಕೊಡಲಾಗುತ್ತದೆ. ರಾಜಸ್ಥಾನ ಮತ್ತು ಪಂಜಾಬ್‌ನ ರೈತರು ಈ ಕೋಣವನ್ನು 40 ಲಕ್ಷಕ್ಕೆ ಕೇಳಿದ್ದರು. ಈಗ ಇದರ ಬೆಲೆ 50 ಲಕ್ಷ ರೂ. ಇದೆ ಎನ್ನುತ್ತಾರೆ ಕೋಣವನ್ನು ನೋಡಿಕೊಳ್ಳುವ ಷೇರು ಖಾದ್ರಿ
-ಶಶಿಕಾಂತ ಬಂಬುಳಗ