Advertisement
ಗಾಳಿಪಟ ಉತ್ಸವಕ್ಕೆ ನಾಂದಿ ಹಾಡಿದವರು ಖ್ಯಾತ ಜನಪದ ಲೇಖಕ ನಾಡೋಜ ಎಚ್.ಎಲ್.ನಾಗೇಗೌಡರು. ಗಾಳಿಪಟ ಸಂಸ್ಕೃತಿ ಮರೆಯಾಗುತ್ತಿದ್ದ ಸಂದರ್ಭದಲ್ಲಿ, ಅದನ್ನು ಮುನ್ನಲೆಗೆ ತರುವ ಉದ್ದೇಶದಿಂದ ನಾಗೇಗೌಡರು 1987-88ರ ಅವಧಿಯಲ್ಲಿ ಗಾಳಿಪಟ ಉತ್ಸವ ಆರಂಭಿಸಿದರು. ಜತೆಗೆ ಗಾಳಿಪಟ ಹಾರಿಸುವ ಸ್ಪರ್ಧೆ ಆಯೋಜಿಸಲಾಯಿತು. 10-12 ಅಡಿ ಎತ್ತರದ, ಎಂಟು-ಹತ್ತು ಜನ ಎತ್ತಿ ಹಿಡಿಯುವ ಗಾಳಿಪಟಗಳು, ಈ ಉತ್ಸವದಲ್ಲಿ ಪಾಲ್ಗೊಂಡವು. ಈ ಮೊದಲ ಯಶಸ್ಸಿನ ನಂತರ ಗಾಳಿಪಟ ಉತ್ಸವ ಮತ್ತಷ್ಟು ವಿಸ್ತಾರವಾಯಿತು.
Related Articles
Advertisement
ಜಿಲ್ಲೆಯಲ್ಲಿ ಮೊದಲ ಬಾರಿಗೆ ಗಾಳಿಪಟ ಉತ್ಸವ: ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮರಡಿಗುಡ್ಡದಲ್ಲಿ ಪ್ರತಿ ವರ್ಷ ಪಟದ ಹಬ್ಬ ಸಂದರ್ಭದಲ್ಲಿ ಗಾಳಿಪಟವನ್ನು ಸಾರ್ವಜನಿಕರು ಸಾಮೂಹಿಕವಾಗಿ ಹಾರಿಬಿಡುತ್ತಾರೆ. ಆದರೆ ರಾಜ್ಯ ಮಟ್ಟದ ಗಾಳಿಪಟ ಉತ್ಸವ ಮೊದಲ ಬಾರಿಗೆ ಜಿಲ್ಲಾ ಕೇಂದ್ರದಲ್ಲಿ ಆಯೋಜನೆಗೊಂಡಿದೆ. ನಗರದ ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗಾಳಿಪಟ ಸ್ಪರ್ಧೆಗಳು ನಡೆಯಲಿದೆ. ಜಿಲ್ಲಾಡಳಿತ ವತಿಯಿಂದ ಉತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಸತಿ, ಉಟೋಪಚಾರ, ಕುಡಿಯುವ ನೀರು ಹಾಗೂ ಇತರೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.
ಗಾಳಿಪಟ ಕಲೆ ಉಳಿಸುವುದು ಅವಶ್ಯ: ಗಾಳಿಪಟ ಮಾನವನ ಹಾರುವಿಕೆ ಪರಿಕಲ್ಪನೆಗೆ ಮೂಲ ಎಂದರೆ ತಪ್ಪಲ್ಲ. ಗಾಳಿಪಟ ಕಟ್ಟುವಿಕೆ ಒಂದು ಕಲೆಯೂ ಆಗಿರುವುದರಿಂದ, ಇದನ್ನು ಉಳಿಸುವುದು ಅವಶ್ಯವಾಗಿದೆ. ಈ ಅಮೂಲ್ಯ ಸಂಸ್ಕೃತಿಯನ್ನು ಭವಿಷ್ಯಕ್ಕೆ ಉಳಿಸಿಕೊಡುವ ನಿಟ್ಟಿನಲ್ಲಿ ಗಾಳಿಪಟ ಉತ್ಸವ ದಾರಿದೀಪವಾಗಿದೆ ಎಂದು ಜಾನಪದ ಲೋಕದ ಆಡಳಿತಾಧಿಕಾರಿ ಕುರುವ ಬಸವರಾಜು ಹೇಳುತ್ತಾರೆ.
ಜಿಲ್ಲೆಯಲ್ಲಿ ಮೊದಲ ಬಾರಿಗೆ ಏರ್ಪಡಿಸಲಾಗಿರುವ ರಾಜ್ಯ ಮಟ್ಟದ ಗಾಳಿಪಟ ಉತ್ಸವ ವಿಶೇಷ ಆಕರ್ಷಣೆಯಾಗಲಿದೆ. ರಾಜ್ಯದ ನಾನಾ ಮೂಲೆಗಳಿಂದ ಹೆಚ್ಚಿನ ಸ್ಪರ್ಧಿಗಳನ್ನು ಈ ಬಾರಿಯ ಗಾಳಿಪಟ ಉತ್ಸವ ಸ್ಪರ್ಧೆಗೂ ನಿರೀಕ್ಷಿಸಲಾಗಿದೆ. ಜಿಲ್ಲೆಯ ಜನತೆ ಈ ಅಪರೂಪದ ರಂಗು-ರಂಗಿನ ಪಟ ಉತ್ಸವಕ್ಕೆ ಉತ್ಸಾಹದಿಂದ ಪಾಲ್ಗೊಂಡು ಉತ್ತೇಜನ ನೀಡಬೇಕು ಎಂದು ಹೇಳಿದರು.