Advertisement

ಇನ್ನು ಜಿಲ್ಲೆಗಳಲ್ಲಿ “ರಾಜ್ಯ ಮಟ್ಟದ ಜಯಂತಿ’ಆಚರಣೆ

02:27 AM May 01, 2022 | Team Udayavani |

ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಚರಿಸಲ್ಪಡುತ್ತಿರುವ ರಾಜ್ಯ ಮಟ್ಟದ ಜಯಂತಿಗಳನ್ನು ಬೆಂಗಳೂರಿನ ಬದಲು ವಿವಿಧ ಜಿಲ್ಲೆಗಳಲ್ಲಿ ಆಚರಿಸುವ ಮಹತ್ವದ ತೀರ್ಮಾನವನ್ನು ಸರಕಾರ ಕೈಗೊಂಡಿದೆ.

Advertisement

ಸಮಾಜ ಸುಧಾರಕರು, ವಚನಕಾರರು, ಧಾರ್ಮಿಕ ಪುರುಷರು, ಪುರಾಣ ಪ್ರಸಿದ್ಧ – ಇತಿಹಾಸ ಪ್ರಸಿದ್ಧ ವ್ಯಕ್ತಿಗಳು ಹೀಗೆ ಸಮಾಜಕ್ಕೆ ತಮ್ಮ ತತ್ತಾದರ್ಶಗಳಿಂದ ಆದರ್ಶಪ್ರಾಯರಾದ ಮಹಾಪುರುಷರ ಸಾಧನೆಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಿ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಕೆಲವು ವರ್ಷಗಳಿಂದ ರಾಜ್ಯ ಮಟ್ಟದಲ್ಲಿ ಜಯಂತಿಗಳನ್ನು ಆಚರಿಸಲಾಗುತ್ತಿದೆ. 2022-23ನೇ ಸಾಲಿನಲ್ಲಿ 30 ಮಹಾಪುರುಷರ ಜಯಂತಿಗಳನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಆಚರಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಎಂದಿನಂತೆ ಜಿಲ್ಲಾ ಮಟ್ಟ-ತಾಲೂಕು ಮಟ್ಟದ ಜಯಂತಿ ಉತ್ಸವವೂ ಇರಲಿದೆ.

ಜಿಲ್ಲೆಗೆ 5 ಲಕ್ಷ ರೂ.
ರಾಜ್ಯ ಮಟ್ಟದ ಜಯಂತಿ ಕಾರ್ಯಕ್ರಮಕ್ಕೆ ಆಯಾ ಜಿಲ್ಲಾಡಳಿತಕ್ಕೆ 5 ಲಕ್ಷ ರೂ., ಜಿಲ್ಲಾ ಮಟ್ಟದ ಜಯಂತಿ ಆಚರಣೆಗೆ 50 ಸಾವಿರ ರೂ. ಹಾಗೂ ತಾಲೂಕು ಮಟ್ಟದ ಆಚರಣೆಗೆ 20 ಸಾವಿರ ರೂ. ನಿಗದಿಪಡಿಸಲಾಗಿದೆ. ಆಯಾ ಜಿಲ್ಲಾಧಿಕಾರಿಗಳು ರಾಜ್ಯ ಮಟ್ಟದ ಜಯಂತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಅನುಷ್ಠಾನಿಸಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಬೆಂಗಳೂರಿನಲ್ಲಿಯೇ ಆಚರಿಸಲ್ಪಡುತ್ತಿರುವ ರಾಜ್ಯ ಮಟ್ಟದ ಜಯಂತಿ ಕಾರ್ಯಕ್ರಮವನ್ನು ಇನ್ನು ಮುಂದೆ ವಿವಿಧ ಜಿಲ್ಲೆಗಳಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ. ಮಹಾಪುರುಷರ, ಗಣ್ಯರ ಜೀವನ ಸಾಧನೆಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಿ ಮಾರ್ಗದರ್ಶನ ನೀಡುವ ಮಹತ್ವದ ಕಾರ್ಯ ಈ ಮೂಲಕ ನಡೆಯಲಿದೆ.
– ವಿ. ಸುನಿಲ್‌ ಕುಮಾರ್‌,
ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ

-ದಿನೇಶ್‌ ಇರಾ

Advertisement
Advertisement

Udayavani is now on Telegram. Click here to join our channel and stay updated with the latest news.

Next