Advertisement

ಕರಾವಳಿಯ ಮೂವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

12:30 AM Sep 05, 2019 | sudhir |

ಪುಂಜಾಲಕಟ್ಟೆ/ ಸುಳ್ಯ/ ಕಾರ್ಕಳ: ಬಂಟ್ವಾಳ ತಾಲೂಕು ವಗ್ಗ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಶೇಖ್‌ ಆದಂ ಸಾಹೇಬ್‌ ನೆಲ್ಯಾಡಿ, ಸುಳ್ಯ ತಾಲೂಕು ಆಲೆಟ್ಟಿ (ನಾರ್ಕೋಡು) ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪದ್ಮಾ ಡಿ. ರಂಗನಾಥ್‌ ಮತ್ತು ಕಾರ್ಕಳ ತಾಲೂಕು ಬಜಗೋಳಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಉಮೇಶ್‌ ಕೆರ್ವಾಶೆ ಅವರು ಈ ಸಾಲಿನ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಶಿಕ್ಷಕರ ಸಂಕ್ಷಿಪ್ತ ಪರಿಚಯ ಇಲ್ಲಿದೆ.

Advertisement

ಶೇಖ್‌ ಆದಂ ಸಾಹೇಬ್‌
ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ವಗ್ಗ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಇಂಗ್ಲಿಷ್‌ ಭಾಷಾ ಶಿಕ್ಷಕ ಶೇಖ್‌ ಆದಂ ಸಾಹೇಬ್‌ ನೆಲ್ಯಾಡಿ ಅವರು ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಮಕ್ಕಳು ಮತ್ತು ತಾನು ಸೇವೆ ಸಲ್ಲಿಸಿದ ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ಹಲವಾರು ವಿನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ.
21 ವರ್ಷಗಳಿಂದ ಮುಖ್ಯ ಶಿಕ್ಷಕ ಹುದ್ದೆ ಸಹಿತ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

ಇಂಗ್ಲಿಷ್‌ ಭಾಷಾ ಸ್ನಾತಕೋತ್ತರ ಪದವೀಧರರಾದ ಅವರು 1998ರಲ್ಲಿ ಗುರುಕಂಬಳ ಎ.ಕೆ.ಯು. ಹೆಣ್ಣುಮಕ್ಕಳ ಪಿಯು ಕಾಲೇಜಿನಲ್ಲಿ ಇಂಗ್ಲಿಷ್‌ ಉಪನ್ಯಾಸಕರಾಗಿ ಶಿಕ್ಷಣ ವೃತ್ತಿ ಆರಂಭಿಸಿ 2004ರಿಂದ ವಗ್ಗ ಸ. ಪ್ರೌ. ಶಾಲೆಯಲ್ಲಿ ಇಂಗ್ಲಿಷ್‌ ಭಾಷಾ ಶಿಕ್ಷಕರಾಗಿ 2012ರಿಂದ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರತಿಭಾ ಪುರಸ್ಕಾರ, ವಲಯ ಮಟ್ಟದ ಪ್ರತಿಭಾ ಕಾರಂಜಿ, ಗೇಮ್ಸ್‌, ಶಾಲಾ ಬೆಳ್ಳಿ ಹಬ್ಬ, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ, ತಾ| ಮಟ್ಟದ ಸ್ಕೌಟ್ಸ್‌ ಗೈಡ್ಸ್‌ ರ್ಯಾಲಿ, ಆರೋಗ್ಯ ಶಿಬಿರ ಮೊದಲಾದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.

ದಾನಿಗಳ ಸಹಕಾರದಿಂದ ಶೌಚಾಲಯ, ಇಂಟರ್‌ಲಾಕ್‌, ಸಿಸಿ ಕೆಮರಾ, ಶುದ್ಧೀಕರಿಸಿದ ಕುಡಿಯುವ ನೀರು, ಗೇಟ್‌, ಕಂಪ್ಯೂಟರ್‌, ಆವರಣ ಗೋಡೆ, ಸುಣ್ಣ ಬಣ್ಣ, ಬೋರ್‌ವೆಲ್‌, ಸೋಲಾರ್‌ ವ್ಯವಸ್ಥೆಯ ಸ್ಮಾರ್ಟ್‌ ಕ್ಲಾಸ್‌, ಸೌಂಡ್‌ ಸಿಸ್ಟಮ್‌, ಸಭಾಭವನ ವಿಸ್ತರಣೆ, ಬಾಲಕಿಯರ ಶೌಚಾಲಯಕ್ಕೆ ನ್ಯಾಪ್‌ಕಿನ್‌ ಬರ್ನರ್‌ ಅಳವಡಿಕೆ, ಶಾಲಾವನ, ಉತ್ತಮ ವಾಚನಾಲಯ, ಮಗು ಸ್ನೇಹಿ ವಾತಾವರಣದಿಂದ ವಗ್ಗ ಸರಕಾರಿ ಪ್ರೌಢಶಾಲೆಯ ಶಾಲೆಯ ಸಮಗ್ರ ಅಭಿವೃದ್ಧಿ ಸಾಧಿಸಿದ್ದಾರೆ.

Advertisement

ಉಮೇಶ್‌ ಕೆರ್ವಾಶೆ
ಕಾರ್ಕಳ: ಬಜಗೋಳಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಉಮೇಶ್‌ ಕೆರ್ವಾಶೆ ಕಳೆದ 28 ವರ್ಷಗಳಿಂದ ಆ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾರ್ಕಳ ತಾಲೂಕಿನ ಕೆರ್ವಾಶೆಯ ವರಾಗಿರುವ ಅವರು ಶಾಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಉಮೇಶ್‌ ಅವರ ಶ್ರದ್ಧೆ, ಸರಳತೆ, ಕಾರ್ಯಶೈಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಶಾಲೆಗೆ ಗೈರಾಗುವ ವಿದ್ಯಾರ್ಥಿಗಳ ಮನವೊಲಿಸಿ
ಶಾಲೆಗೆ ಹಾಜರಾಗುವಂತೆ ಮಾಡಿರು ತ್ತಾರೆ. ಮಲ್ಲಿಕಾ ವಿಕಾಸ ಶೆಟ್ಟಿ ಅವರನ್ನು ಅಂತಾರಾಷ್ಟ್ರೀಯ ವಾಲಿಬಾಲ್‌ ಪಟು ಆಗಿ ರೂಪಿಸುವಲ್ಲಿ ಇವರ ಶ್ರಮವೂ ಇದೆ.

ಸಾರ್ವಜನಿಕರಿಗೆ ಯೋಗ ತರಬೇತಿ, ಮಕ್ಕಳಿಗೆ ನಾಯಕತ್ವ ಶಿಬಿರ ನಡೆಸಿರುತ್ತಾರೆ. ಶಾಲಾ ಕಬಡ್ಡಿ ತಂಡ ಜಿಲ್ಲಾ ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದ ಅವರು 2002-03ರಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, ಸೇವಾದಳ ಜಿಲ್ಲಾ ಶಿಕ್ಷಕ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಯಿಂದ ಪುರಸ್ಕೃತರಾಗಿರುತ್ತಾರೆ.

ಸುವರ್ಣ ಮಹೋತ್ಸವ ಮತ್ತು ವಜ್ರಮಹೋತ್ಸವದ ಸಂದರ್ಭದಲ್ಲಿ ಹಳೆವಿದ್ಯಾರ್ಥಿಗಳಿಂದ ದೇಣಿಗೆ, ಕ್ರೀಡಾ ಸಾಮಗ್ರಿ, ಲ್ಯಾಪ್‌ಟಾಪ್‌ ಸಂಗ್ರಹಿಸಿರುತ್ತಾರೆ.

ಒಳಾಂಗಣ ಕ್ರೀಡಾಂಗಣ ನಿರ್ಮಾಣದಲ್ಲೂ ಉಮೇಶ್‌ ಕೆರ್ವಾಶೆ ಸಹಕರಿಸಿದ್ದಾರೆ.

ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ. ಪರಿಶ್ರಮಕ್ಕೆ ದೊರೆತ ಫ‌ಲ ಇದಾಗಿದ್ದು, ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ ಸಂತೋಷವಿದೆ ಎಂದು ಉಮೇಶ್‌ ಅವರು ಪ್ರತಿಕ್ರಿಯಿಸಿದ್ದಾರೆ.

ಪದ್ಮಾ ಡಿ. ರಂಗನಾಥ್‌
ಸುಳ್ಯ: ಆಲೆಟ್ಟಿ (ನಾರ್ಕೋಡು) ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪದ್ಮಾ ಡಿ. ರಂಗನಾಥ್‌ ಅವರು ಅಂಬೆಟಡ್ಕ ನಿವಾಸಿ. ಕಳೆದ 36 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಾಗಪಟ್ಟಣ, ಪಡ³ನಂಗಡಿ, ಮಂಡೆಕೋಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಆಲೆಟ್ಟಿ (ನಾರ್ಕೋಡು) ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿಯಾಗಿದ್ದಾರೆ.

ಶಿಕ್ಷಕಿಯಾಗಿ ಶಾಲಾ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕೊಡುಗೆ ನೀಡಿರುವ ಅವರಿಗೆ ಈಗಾಗಲೇ ತಾಲೂಕು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗಳು ಲಭಿಸಿವೆ. ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಕೊಡ ಮಾಡುವ ರಾಜ್ಯ ವಿಶೇಷ ಶಿಕ್ಷಕ ಪ್ರಶಸ್ತಿಯು ಲಭಿಸಿದೆ.

ಇವರ ಪತಿ ನಾಗಪಟ್ಟಣ ಕೆಎಸ್‌ಡಿಸಿ ಮ್ಯಾನೇಜರ್‌ ಆಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next