ಭಾರತೀನಗರ: ಕರ್ನಾಟಕ ರಾಜ್ಯ ರೈತ ಸಂಘದಿಂದ ಮುಂದಿನ ತಿಂಗಳು ಡಿ.23ರಂದು ನಡೆಯುವ ವಿಶ್ವ ರೈತ ದಿನಾಚರಣೆ ರಾಜ್ಯಮಟ್ಟದ ಸಮಾವೇಶದ ಹಿನ್ನೆಲೆಯಲ್ಲಿ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಡಿ.21ರಂದು ಎಂ.ಡಿ.ಸುಂದರೇಶ್ ಅವರ ಸ್ಮರಣೆ ಕಾರ್ಯವಿದ್ದು, 23ರಂದು ರೈತ ದಿನಾಚರಣೆಯನ್ನು ಆಯೋಜಿಸಲಾಗುತ್ತಿದೆ.
ಈ ಸಮಾವೇಶದಲ್ಲಿ ನೂರು ಮಂದಿ ರೈತ ಮಹಿಳೆಯರಿಗೆ ಸನ್ಮಾನ ಮಾಡಲು ನಿಶ್ಚಯಿಸಲಾಗಿದೆ. ಅದರಲ್ಲಿ ಈ ಭಾಗದ 60 ಮಹಿಳೆಯರು, ಜಿಲ್ಲೆಯಿಂದ 30 ಸೇರಿ 90 ಮಂದಿಯಾಗುತ್ತಾರೆ. ಇನ್ನು ಉಳಿದ ಹತ್ತು ಮಂದಿ ಮಹಿಳಾ ಸಾಧಕರನ್ನು ರಾಜ್ಯಮಟ್ಟದಲ್ಲಿ ಗುರುತಿಸಿ, ಒಟ್ಟು 101 ಮಹಿಳಾ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸುವುದು ಸೂಕ್ತ ಎಂದು ಸಲಹೆ ನೀಡಿದರು. ಇದಕ್ಕೆ ಸಭೆಯು ಸಹಮತ ವ್ಯಕ್ತಪಡಿಸಿತು.
ರೈತ ನಾಯಕ ದಿ. ಕೆ.ಎಸ್ ಪುಟ್ಟಣ್ಣಯ್ಯ, ಎಂ.ಡಿ. ಸುಂದರೇಶ್, ಕೋಣಸಾಲೆ ನರಸರಾಜು, ವಳಗೆರೆಹಳ್ಳಿ ಅಶೋಕ್ ಸೇರಿದಂತೆ ಹಲವು ದಿವಂಗತ ರೈತ ನಾಯಕರ ಸ್ಮರಣೆ ಕೂಡ ನಡೆಯಲಿದೆ. ಬಳಿಕ ಮಾತನಾಡಿದ ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಆದ್ದರಿಂದ ಸಮಾವೇಶದಲ್ಲೂ ಹಾರ ತುರಾಯಿಗಳಂತಹ ಹೆಚ್ಚು ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು ಸೂಕ್ತ. ಜತೆಗೆ ಡಿ.14, 15ರಂದು ಎರಡು ದಿನಗಳ ಕಾಲ ಮೇಲುಕೋಟೆ ವಿಭಾಗದ ರೈತರಿಗೆ ತರಬೇತಿ ಶಿಬಿರ ನಡೆಸಿದ ಬಳಿಕ ಈ ಸಮಾವೇಶಕ್ಕೆ ಕರೆತರುವುದು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ರೈತ ಮುಖಂಡ ಮಾದರಹಳ್ಳಿ ದೇಶೀಗೌಡ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರರವರಿಗೆ ಅಣ್ಣೇಗಿಡ ನೀಡುವ ಮೂಲಕ ಚಾಲನೆ ನೀಡಲಾಯಿತು. ಈ ವೇಳೆಯಲ್ಲಿ ನೆರೆದಿದ್ದ ನೂರಾರು ರೈತ ಮುಖಂಡರು ಸಮಾವೇಶಕ್ಕೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಪೂರ್ವಭಾವಿ ಸಭೆಯಲ್ಲಿ ಜಿ.ಪಂ ಮಾಜಿ ಸದಸ್ಯರಾದ ಕೆ.ಟಿ.ಗೋವಿಂದೇಗೌಡ, ಕೆಂಪೂಗೌಡ, ಪಾಂಡವಪುರ ಸಕ್ಕರೆ ಕಾರ್ಖಾನೆಯ ಮಾಜಿ ಉಪಾಧ್ಯಕ್ಷ ನಾಗರಾಜು, ರೈತ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಶಂಭೂನಹಳ್ಳಿ ಸುರೇಶ, ಉಪಾಧ್ಯಕ್ಷ ಅಣ್ಣೂರು ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಬೊಮ್ಮೇಗೌಡ, ಸಾದೊಳಲು ಪುಟ್ಟಸ್ವಾಮಣ್ಣ, ರವಿಕುಮಾರ್, ಬನ್ನಹಳ್ಳಿ ರಮೇಶ್, ಪದಾಧಿಕಾರಿಗಳಾದ ಗೋವಿಂದೇಗೌಡ, ಕೆನ್ನಾಳು ನಾಗರಾಜು ಪಾಲ್ಗೊಂಡಿದ್ದರು.