ಬೆಂಗಳೂರು: ಶಾಲಾ ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಳ ಮಾಡುವ ನಿಟ್ಟಿನಲ್ಲಿ 5 ಮತ್ತು 8ನೇ ತರಗತಿಗೆ ರಾಜ್ಯಮಟ್ಟದ ಪರೀಕ್ಷೆ ನಡೆಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ.
ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಪ್ರಕಾರ 8ನೇ ತರಗತಿವರೆಗೂ ಯಾವುದೇ ಮಕ್ಕಳನ್ನು ಅನುತ್ತೀರ್ಣ ಮಾಡುವಂತಿಲ್ಲ ಎಂಬ ನಿಯಮವಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. 10ನೇ ತರಗತಿ ಪರೀಕ್ಷೆಯಲ್ಲಿ ಇದರ ನೇರ ಪರಿಣಾಮವಾಗುತ್ತಿದೆ ಎಂಬ ಅಪಸ್ವರಗಳು ಕೇಳಿಬಂದಿವೆ.
ಇದು ಪಬ್ಲಿಕ್ ಪರೀಕ್ಷೆಯಲ್ಲ. ಆದರೆ, ಕಲಿಕಾ ಮೌಲ್ಯಮಾಪನ ಮಾಡುವುದಕ್ಕಾಗಿ ಪರೀಕ್ಷೆ ನಡೆಸಲಾಗುತ್ತದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿಗಳ ಮೂಲಕ ಕೊಂಡೊಯ್ಯಲು ಸಹಕಾರಿಯಾಗಲಿದೆ. ಹೀಗಾಗಿ, ವಿದ್ಯಾರ್ಥಿಗಳಲ್ಲಿ ಕಲಿಕಾ ಮನೋಭಾವ ಹೆಚ್ಚಳ ಮಾಡುವುದಕ್ಕಾಗಿ 5 ಮತ್ತು 8ನೇ ತರಗತಿಗೆ ರಾಜ್ಯಮಟ್ಟದ ಪರೀಕ್ಷೆ ನಡೆಸುವ ಬಗ್ಗೆ ಮತ್ತು ಅನುತ್ತೀರ್ಣ ನಿಯಮ ಕುರಿತಂತೆ ಚರ್ಚಿಸುವುದಕ್ಕಾಗಿ ಇದೇ 12ರಂದು ಇಲಾಖೆ ಸಭೆ ಕರೆಯಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಅನುತ್ತೀರ್ಣ ಮಾಡುವಂತಿಲ್ಲ ಎಂಬ ನಿಯಮದಿಂದ ವಿದ್ಯಾರ್ಥಿಗಳು ಹೇಗೂ ಉತ್ತೀರ್ಣರಾಗುತ್ತೇವೆಂಬ ಮನಸ್ಥಿತಿಯಲ್ಲಿದ್ದಾರೆ. ಕೆಲವು ಶಿಕ್ಷಕರು ಕೂಡ ಮಕ್ಕಳಿಗೆ ಕಲಿಸುವ ಶೈಲಿಯಲ್ಲಿ ಹಾಗೂ ಬೋಧನೆಯಲ್ಲಿ ಪಾಸ್ ಮಾಡಿದರಾಯ್ತು ಎಂಬ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ.
ರಾಜ್ಯದಲ್ಲಿ 2004-05ನೇ ಶೈಕ್ಷಣಿಕ ಸಾಲಿನ ವರೆಗೂ 7ನೇ ತರಗತಿ ಮಕ್ಕಳಿಗೂ ಪಬ್ಲಿಕ್ ಪರೀಕ್ಷೆ ನಡೆಸಲಾಗುತ್ತಿತ್ತು. ಅದಾದ ನಂತರ ಪಬ್ಲಿಕ್ ಪರೀಕ್ಷೆ ನಡೆಸುತ್ತಿಲ್ಲ. ಇನ್ನು 5 ಮತ್ತು 8ನೇ ತರಗತಿಗೆ ಪರೀಕ್ಷೆ ನಡೆಸುವ ಕುರಿತಂತೆ ಈ ಹಿಂದೆಯೂ ಹಲವು ಬಾರಿ ಇಲಾಖೆ ಹಂತದಲ್ಲಿ ಚರ್ಚೆಯಾಗಿದೆ. ಸುರೇಶ್‌ಕುಮಾರ್ ಸಚಿವರಾಗಿದ್ದ ವೇಳೆಯೂ ಚರ್ಚೆಯಾಗಿತ್ತು.