Advertisement

ರಾಜ್ಯ ವಿಧಾನಮಂಡಲ ಅಧಿವೇಶನ ಮೂರು ದಿನಕ್ಕೆ ಸೀಮಿತ

08:34 AM Sep 24, 2019 | Sriram |

ಬೆಂಗಳೂರು: ಉಪ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ರಾಜ್ಯ ವಿಧಾನಮಂಡಲ ಅಧಿವೇಶನ ಮೂರು ದಿನಗಳಿಗೆ ಸೀಮಿತಗೊಳಿಸಲಾಗಿದ್ದು, ಅಕ್ಟೋಬರ್‌ 10 ರಿಂದ 12 ವರೆಗೆ ನಿಗದಿಪಡಿಸಲಾಗಿದೆ.

Advertisement

ಸೋಮವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಮೂರು ದಿನ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ.

ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಈ ಹಿಂದೆ ಅ.14 ರಿಂದ 10 ದಿನ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಉಪ ಚುನಾವಣೆ ಘೋಷಣೆಯಾಗಿ ನೀರಿ ಸಂಹಿತೆ ಜಾರಿಯಲ್ಲಿರುವುದರಿಂದ ಅ.10 ರಿಂದ 12 ರವರೆಗೆ ಮೂರು ದಿನಕ್ಕೆ ಸೀಮಿತಗೊಳಿಸಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಬಜೆಟ್‌ ಅನುಮೋದನೆಗೆ ಸೀಮಿತವಾಗಿ ಅಧಿವೇಶನ ನಡೆಯಲಿದೆ. ಪೂರಕ ಬಜೆಟ್‌ ಮಂಡಿಸಲಾಗುವುದು. ಪೂರ್ಣ ಪ್ರಮಾಣದ ಬಜೆಟ್‌ಗೆ ಅನುಮೋದನೆ ಸಿಗದಿದ್ದರೆ ಲೇಖಾನುದಾನ ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದರು.

20 ಕೋಟಿ ರೂ. ಬಿಡುಗಡೆ
ಹೈದರಾಬಾದ್‌ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಣೆ ಮಾಡಲಾಗಿದ್ದು ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ತೀರ್ಮಾನಿಸಲಾಗಿತ್ತು. 50 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದೀಗ ಮೊದಲ ಹಂತದಲ್ಲಿ 20 ಕೋಟಿ ರೂ. ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು.

Advertisement

ಶಿವಮೊಗ್ಗ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಂಗನ ಕಾಯಿಲೆ ಸಮಸ್ಯೆ ತೀವ್ರವಾಗಿದ್ದು, ಕಾಯಿಲೆ ಸಂಬಂಧ ಅಧ್ಯಯನ ನಡೆಸಲು ಶಿವಮೊಗ್ಗದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಾಲಯ ಸ್ಥಾಪಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಪಶ್ಚಿಮ ಘಟ್ಟ ಪ್ರದೇಶದ ಭಾಗಗಳಲ್ಲಿ ಮಂಗನ ಕಾಯಿಲೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿರುವುದರಿಂದ ರೋಗ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ಮೂರು ವಿಚಾರ ಬಿಟ್ಟು ಯಾವುದೇ ವಿಚಾರ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿಲ್ಲ ಎಂದು ತಿಳಿಸಿದರು. ಬರ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next