Advertisement

ರಾಜ್ಯ ನಾಯಕರ ಜತೆ ದಿಗ್ವಿಜಯ್‌ಸಿಂಗ್‌ ಚರ್ಚೆ

03:45 AM Apr 18, 2017 | Team Udayavani |

ಬೆಂಗಳೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಜಯ ಗಳಿಸಿರುವ ಆಡಳಿತಾರೂಢ ಕಾಂಗ್ರೆಸ್‌ ಅದೇ ಉತ್ಸಾಹದಲ್ಲಿ ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ದತೆ ಆರಂಭಿಸಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ದೆಹಲಿ ಭೇಟಿ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ದಿಗ್ವಿಜಯ್‌ ಸಿಂಗ್‌ ಸೋಮವಾರ ಸಂಜೆ ಬೆಂಗಳೂರಿಗೆ ಆಗಮಿಸಿ, ಪಕ್ಷದ ಪ್ರಮುಖ ನಾಯಕರ ಜೊತೆ  ಚರ್ಚೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌, ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ವೀರಪ್ಪ ಮೋಯಿಲಿ, ಆಸ್ಕರ್‌ ಫ‌ನಾಂìಡಿಸ್‌, ಕೆ.ಎಚ್‌. ಮುನಿಯಪ್ಪ, ಸಚಿವರಾದ ಡಿ.ಕೆ. ಶಿವಕುಮಾರ್‌, ಎಂ.ಬಿ. ಪಾಟೀಲ, ರೋಷನ್‌ ಬೇಗ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೇರಿ ಆಯ್ದ ನಾಯಕರು  ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಮುಖವಾಗಿ ಕೆಪಿಸಿಸಿ ಅಧ್ಯಕ್ಷರ ಹುದ್ದೆ ಬದಲಾವಣೆ ಕುರಿತಂತೆ ಬಿರುಸಿನ ಚಟುವಟಿಕೆಗಳು ನಡೆಯುತ್ತಿರುವುದರಿಂದ ಕೆಪಿಸಿಸಿ ಹುದ್ದೆಗೆ ಹೊಸದಾಗಿ ಯಾರನ್ನು ತರಬೇಕು? ಅಥವಾ  ಪರಮೇಶ್ವರ್‌ ಅವರನ್ನೇ ಮುಂದುವರೆಸಬೇಕಾ? ಎಂಬ ಬಗ್ಗೆ ಚರ್ಚೆ ನಡೆಯಿತು ಎಂದು ಹೇಳಲಾಗಿದೆ.

ರಾಜ್ಯದಲ್ಲಿ 2018 ರ ಚುನಾವಣೆ ಗೆಲ್ಲುವ ದೃಷ್ಠಿಯಿಂದ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವಂತೆ ಹೈ ಕಮಾಂಡ್‌ ಸಂದೇಶ ಹೊತ್ತು ಬಂದಿರುವ ದಿಗ್ವಿಜಯ್‌ಸಿಂಗ್‌, ಮುಂದಿನ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಹಾಗೂ ಕಾರ್ಯತಂತ್ರ ಈಗಿನಿಂದಲೇ ಆರಂಭಿಸುವಂತೆ ಸೂಚಿಸಿದರು.

Advertisement

2018 ರ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ಗೆ ಅತ್ಯಂತ ಮಹತ್ವದ್ದಾಗಿದ್ದು, ಮತ್ತೆ ಅಧಿಕಾರ ಪಡೆಯಲು ಬೇಕಾಗುವ ರಣ ತಂತ್ರ ರೂಪಿಸಬೇಕು. ಸಾಧ್ಯವಾದರೆ, ಬೆಂಗಳೂರಿನಲ್ಲಿಯೇ ಕಾಂಗ್ರೆಸ್‌ ರಾಷ್ಟ್ರೀಯ ಕಾರ್ಯಕಾರಿಣಿ ನಡೆಸುವ ಇಚ್ಚೆಯನ್ನು ಹೈ ಕಮಾಂಡ್‌ ಹೊಂದಿದೆ ಎಂದು ಸಭೆಯಲ್ಲಿ ದಿಗ್ವಿಜಯ್‌ ಸಿಂಗ್‌ ತಿಳಿಸಿದರು.

ಶೀಘ್ರವೇ ಎಐಸಿಸಿ ಪುನಾರಚನೆ ಮಾಡುವ ಸಾಧ್ಯತೆ ಇದ್ದು, ರಾಜ್ಯದ ಕೆಲವು ನಾಯಕರನ್ನು ಕೇಂದ್ರ ಸೇವೆಗೆ ಬಳಸಿಕೊಳ್ಳುವ ಸಾಧ್ಯತೆ ಕುರಿತ ಸೂಚನೆಯನ್ನೂ ಈ ಸಭೆಯಲ್ಲಿ ನೀಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್‌ ಯಾರನ್ನೇ ನೇಮಿಸಿದರೂ ಎಲ್ಲರೂ ಒಗ್ಗಟ್ಟಾಗಿ ಸಾಮೂಹಿಕ ನಾಯಕತ್ವದಲ್ಲಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.

ಸಂಪುಟದಲ್ಲಿ ಖಾಲಿ ಇರುವ ಎರಡು ಸಚಿವ ಸ್ಥಾನಗಳು ಹಾಗೂ ವಿಧಾನ ಪರಿಷತ್ತಿಗೆ ಮೂರು ನಾಮ ನಿರ್ದೇಶನದ ಸ್ಥಾನಗಳನ್ನು ಭರ್ತಿ ಮಾಡುವ ಕುರಿತಂತೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಜಾತಿ ಮತ್ತು ಪ್ರಾದೇಶಿಕತೆಯ ಆಧಾರದಲ್ಲಿ ಆದ್ಯತೆ ನೀಡುವಂತೆ ಅಭಿಪ್ರಾಯ ವ್ಯಕ್ತವಾಯಿತು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next