ಬೆಂಗಳೂರು: ರಾಜ್ಯದ ಜಿಲ್ಲಾ, ತಾಲೂಕು ಸೇರಿದಂತೆ ಎಲ್ಲ ವಕೀಲರ ಸಂಘಗಳ ಪದಾಧಿಕಾರಿಗಳ ಸಭೆ ಭಾನುವಾರ ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ನಡೆಯಿತು. ಸಭೆಯಲ್ಲಿ ಪಾಲ್ಗೊಂಡವರ ತೀರ್ಮಾನದಂತೆ ವಕೀಲರ ಶ್ರೇಯೋಭಿವೃದ್ಧಿ ಸಲುವಾಗಿ, ರಾಜ್ಯ ವಕೀಲರ ಪರಿಷತ್‌ನ ಮಾರ್ಗರ್ದಶನದಲ್ಲಿ ಕಾರ್ಯನಿರ್ವಹಿಸುವ ಸಲುವಾಗಿ ರಾಜ್ಯ ವಕೀಲರ ಸಂಘಕ್ಕೆ ಚಾಲನೆ ದೊರೆಯಿತು.
ಹೊಸದಾಗಿ ಅಸ್ತಿತ್ವಕ್ಕೆ ಬಂದ ರಾಜ್ಯ ವಕೀಲರ ಸಂಘದ ಅಧ್ಯಕ್ಷರನ್ನಾಗಿ ಹೈಕೋರ್ಟ್ ವಕೀಲ ಹಾಗೂ ವಕೀಲರ ಪರಿಷತ್‌ನ ಮಾಜಿ ಅಧ್ಯಕ್ಷ ಪಿ.ಪಿ ಹೆಗಡೆಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಳಿದಂತೆ ರಾಜ್ಯಮಟ್ಟದ ಕೇಂದ್ರ ಸಮಿತಿಗೆ ಜಿಲ್ಲಾವಾರು ವಕೀಲರ ಸಂಘಗಳ 45ಮಂದಿಯನ್ನು ನೇಮಕಗೊಳಿಸಲಾಯಿತು.
ಸಭೆಯಲ್ಲಿ ರಾಜ್ಯ ವಕೀಲರ ಸಂಘ,ಎಲ್ಲ ವಕೀಲರ ಸಂಘದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲಿದೆ .ರಾಜ್ಯ ಹೈಕೋರ್ಟ್‌ನಲ್ಲಿ ಖಾಲಿಯಿರುವ ನ್ಯಾಯಮೂರ್ತಿಗಳ ಹುದ್ದೆಗಳ ಭರ್ತಿಗೆ ಕೇಂದ್ರಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕೆಂಬ ಒತ್ತಾಯ. ರಾಜ್ಯದ ಎಲ್ಲ ವಕೀಲರ ಸಂಘಗಳಿಗೆ ಎರಡು ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಬೇಕು. ತಾಲೂಕು ನ್ಯಾಯಾಲಯಗಳಲ್ಲಿಯೂ ಇ- ಗ್ರಂಥಾಲಯ ತೆರೆಯಲು ರಾಜ್ಯಸರ್ಕಾರ ಮುಂದಾಗಬೇಕು ಎಂಬ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಈ ವೇಳೆ ಮಾತಾನಾಡಿದ ಸಂಘದ ಅಧ್ಯಕ್ಷ ಪಿ.ಪಿ ಹೆಗಡೆ, ರಾಜ್ಯ ವಕೀಲರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ, ನ್ಯಾಯಾಂಗ ವ್ಯವಸ್ಥೆ ಸಧೃಢಗೊಳಿಸುವುದು, ವಕೀಲರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಸಲುವಾಗಿ ಸಂಘ ಕಾರ್ಯನಿರ್ವಹಿಸಲಿದೆ. ರಾಜ್ಯ ವಕೀಲರ ಪರಿಷತ್‌ನ ಮಾರ್ಗದರ್ಶನದಲ್ಲಿಯೇ ಕಾರ್ಯಚಟುವಟಿಕೆಗಳು ನಡೆಯಲಿವೆ. ಸದ್ಯ ಕೈಗೊಂಡಿರುವ ನಿರ್ಣಯಗಳನ್ನು ಹೊರತುಪಡಿಸಿ ಹಂತ, ಹಂತವಾಗಿ ಸಂಘದ ಪದಾಧಿಕಾರಿಗಳು, ಕಾರ್ಯದರ್ಶಿಗಳ ಸಭೆಗಳ ಮೂಲಕ ವಕೀಲರಲ್ಲಿ ಒಗ್ಗಟ್ಟು ಹಾಗೂ ನ್ಯಾಯಾಂಗ ವ್ಯವಸ್ಥೆ ಸಧೃಢಗೊಳಿಸುವ ಸಂಬಂಧ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಹೈಕೋರ್ಟ್ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.