Advertisement
ಮಂಗಳವಾರ ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಆರ್.ಅಶೋಕ್ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆ ನಡೆಯಿತು. ರಾಜ್ಯ ಸರ್ಕಾರ ಜಿಂದಾಲ್ ಸಂಸ್ಥೆಗೆ ಜಮೀನು ಪರಭಾರೆ ಮಾಡಲು ನಿರ್ಧರಿಸಿರುವ ವಿಷಯ ಚರ್ಚೆಗೆ ಬರಬೇಕಿತ್ತು. ಆದರೆ, ಮುಂದಿನ ವಾರ ಚರ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
Related Articles
Advertisement
ಸಮಿತಿ ರಚನೆ ಕಣ್ಣೊರೆಸುವ ತಂತ್ರ: ಅಶೋಕ್* ರಾಜ್ಯ ಸರ್ಕಾರ ಸಂಪುಟ ಉಪ ಸಮಿತಿ ಮಾಡಿರುವುದು ಕಣ್ಣೊರೆಸುವ ತಂತ್ರ. ಸಂಪುಟ ಉಪ ಸಮಿತಿಯಲ್ಲಿ ಸಂಪುಟ ಸದಸ್ಯರು ಮಾತ್ರ ಇರುತ್ತಾಯೇ ವಿನಃ ಪ್ರತಿಪಕ್ಷದ ನಾಯಕರಿಗೆ ಅವಕಾಶ ಇರುವುದಿಲ್ಲ. ಸಿಎಂ ಕುಮಾರಸ್ವಾಮಿ ಈ ರೀತಿಯ ಹೇಳಿಕೆ ನೀಡುವಾಗ ಆಲೋಚನೆ ಮಾಡಬೇಕು. * ರಾಜ್ಯ ಸರ್ಕಾರ ಸಂಪುಟ ಉಪ ಸಮಿತಿ ಕೈ ಬಿಟ್ಟು ಜಮೀನು ಮಾರಾಟ ಮಾಡಲು ತೆಗೆದುಕೊಂಡ ತೀರ್ಮಾನವನ್ನು ರದ್ದು ಪಡಿಸಬೇಕು. ಅದರ ಬದಲು ಮತ್ತೆ 10 ವರ್ಷ ಲೀಸ್ ನೀಡಲು ಅಭ್ಯಂತರವಿಲ್ಲ. ಹಿಂದೆ ನೈಸ್ ಸಂಸ್ಥೆಗೆ ರಾಜ್ಯ ಸರ್ಕಾರ ಸಾವಿರಾರು ಎಕರೆ ಜಮೀನು ನೀಡಿದೆ. ಆದರೆ, ಆ ಸಂಸ್ಥೆ ಸರ್ಕಾರದ ಜಮೀನನ್ನೇ ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ತೆಗೆದುಕೊಂಡಿದೆ. * ಜಿಂದಾಲ್ ಸಂಸ್ಥೆಯೂ ಅದೇ ಕೆಲಸ ಮಾಡುವ ಸಾಧ್ಯತೆಯಿದೆ. ಸರ್ಕಾರಿ ಜಮೀನು ಅಡ ಇಟ್ಟು ಅವರು ಲಾಭ ತೆಗೆದುಕೊಳ್ಳುವುದಾದರೆ ನಮ್ಮ ಜಮೀನು ಏಕೆ ನೀಡಬೇಕು? ಬೇರೆ ದೇಶದಲ್ಲಿ ಇದಕ್ಕಿಂತ ಶೇ.25ರಷ್ಟು ಕಡಿಮೆ ಜಮೀನಿನಲ್ಲಿ 2 ಲಕ್ಷ ಮೆಟ್ರಿಕ್ ಟನ್ ಉಕ್ಕು ತೆಗೆದಿದ್ದಾರೆ. ನಮ್ಮ ರಾಜ್ಯದಲ್ಲಿ 12 ಸಾವಿರ ಎಕರೆ ಜಮೀನು ನೀಡಲಾಗಿದೆ. ಅದರಲ್ಲಿ ಕೇವಲ 1.5 ಲಕ್ಷ ಮೆಟ್ರಿಕ್ ಟನ್ ಉಕ್ಕು ಉತ್ಪಾದನೆ ಮಾಡಲಾಗುತ್ತಿದೆ. ತೀರ್ಮಾನಕ್ಕೆ ವಿರೋಧ ಸಲ್ಲ: ಎಚ್.ಕೆ.ಪಾಟೀಲ್
* ಸರ್ಕಾರದ ನಿರ್ಧಾರಗಳಲ್ಲಿ ಆಗಿರುವ ಲೋಪಗಳ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಸರ್ಕಾರದ ವ್ಯವಸ್ಥೆಯ ಬಗ್ಗೆ ವಿಶ್ವಾಸ ಇಟ್ಟುಕೊಳ್ಳಬೇಕು. ಸಂಪುಟ ಉಪ ಸಮಿತಿ ಸಾರ್ವಜನಿಕರ ಅಹವಾಲುಗಳನ್ನು ಕೇಳಬೇಕು. ತಕರಾರು ಮಾಡುವವರಿಂದ ಮಾಹಿತಿ ಪಡೆಯಬೇಕು. ಎಲ್ಲರ ಅಭಿಪ್ರಾಯ ಪಡೆದು ವರದಿ ನೀಡಬೇಕು. ಸರ್ಕಾರ ಆಡಳಿತಾತ್ಮಕವಾಗಿ ತೆಗೆದುಕೊಳ್ಳುವ ತೀರ್ಮಾನಕ್ಕೆ ವಿರೋಧ ಮಾಡುವುದು ಸರಿಯಲ್ಲ. * ಸಂಪುಟ ಸಮಿತಿಗಳಲ್ಲಿ ಸಚಿವರ ಹೊರತು ಬೇರೆಯವರಿಗೆ ಅವಕಾಶವಿಲ್ಲ. ಒಂದು ವೇಳೆ ಸಂಪುಟ ಉಪ ಸಮಿತಿ ಹೊರಗಿನವರಿಂದ ಮಾಹಿತಿ ಬಯಸಿದರೆ, ತಜ್ಞರೆಂದು ಪರಿಗಣಿಸಿ ಅವರಿಂದ ವಿವರಣೆ ಪಡೆಯಬಹುದು. * ಸಂಪುಟ ಉಪ ಸಮಿತಿ ಜಿಂದಾಲ್‌ಗೆ ನೀಡಿರುವ ಜಮೀನಿನ ಭೂ ಸಮೀಕ್ಷೆ (ಲ್ಯಾಂಡ್ ಆಡಿಟ್) ನಡೆಸಬೇಕು. ಜಿಂದಾಲ್‌ಗೆ ಅಷ್ಟೊಂದು ಜಮೀನು ಏಕೆ?: ವಿಶ್ವನಾಥ್
* ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕರಾಗಿದ್ದಾಗ ಬಳ್ಳಾರಿ ಗಣಿ ಧಣಿಗಳ ವಿರುದ್ಧ ಪಾದಯಾತ್ರೆ ಮಾಡಿದ್ದರು. ಜಿಂದಾಲ್‌ನವರು ಅಷ್ಟೊಂದು ಜಮೀನು ಏಕೆ ತೆಗೆದುಕೊಂಡಿದ್ದಾರೆ ಎನ್ನುವ ಬಗ್ಗೆ ತನಿಖೆಯಾಗಬೇಕು. ಜಿಂದಾಲ್‌ನವರು ಜೋಳ ಬೆಳೆಯಲು ತೆಗೆದುಕೊಂಡಿದ್ದಾರಾ? ಗಣಿಗಾರಿಕೆ ಮಾಡಲು ತೆಗೆದುಕೊಂಡಿದ್ದಾರಾ ಎನ್ನುವ ಬಗ್ಗೆ ತನಿಖೆಯಾಗಬೇಕು. * ಪ್ರತಿಪಕ್ಷದ ನಾಯಕರು ಸಮಿತಿ ಸದಸ್ಯರಾಗಲು ಅವಕಾಶವಿಲ್ಲ. ಆದರೆ, ಸರ್ಕಾರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಪ್ರತಿಪಕ್ಷ ನಾಯಕರು ಸರ್ಕಾರದ ಉತ್ತಮ ಕೆಲಸಗಳಿಗೆ ಸಹಕಾರ ನೀಡಬೇಕು.