Advertisement

ಹೋಂ ಐಸೋಲೇಷನ್‌ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರಕಾರ

10:53 PM Jul 04, 2020 | Sriram |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣ ನಿಟ್ಟಿನಲ್ಲಿ ಪರಿಷ್ಕೃತ ಹೋಂ ಕ್ವಾರಂಟೈನ್‌ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

Advertisement

ಅಸಿಂಪ್ಟಮ್ಯಾಟಿಕ್‌ (ರೋಗ ಲಕ್ಷಣ ಇಲ್ಲದ) ರೋಗಿಗಳಿಗೆ ಹದಿನೇಳು ದಿನಗಳ ಹೋಂ ಐಸೋಲೇಷನ್‌ ವ್ಯವಸ್ಥೆಯಡಿ ಚಿಕಿತ್ಸೆ ನೀಡುವುದು ಮಾರ್ಗಸೂಚಿಯಲ್ಲಿನ ಪ್ರಮುಖ ಅಂಶವಾಗಿದೆ.

ಮಾರ್ಗಸೂಚಿಯನ್ವಯ ಹೋಂ ಐಸೋಲೇಷನ್‌ ಮುಗಿದ ನಂತರ ಕೋವಿಡ್‌ ಪತ್ತೆ ಪರೀಕ್ಷೆ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಅಲ್ಲದೇ 50 ವರ್ಷದೊಳಗಿನವರಿಗೆ ಮಾತ್ರ ಹೋಂ ಐಸೋಲೇಷನ್‌ಗೆ ಅವಕಾಶ ಕಲ್ಪಿಸಬಹುದಾಗಿದೆ.

“ಹೋಂ ಐಸೋಲೇಷನ್‌’ಗೆ ಒಳಗಾಗಲು ಅಗತ್ಯವಾದ ಅರ್ಹತೆ, ಪಾಲಿಸಬೇಕಾದ ನಿಯಮಗಳು, ಚಿಕಿತ್ಸಾ ವಿಧಾನ, ಮೇಲ್ವಿಚಾರಣೆ, ಒದಗಿಸಬೇಕಾದ ಸೌಲಭ್ಯ, ಯೋಗಕ್ಷೇಮ ನೋಡಿಕೊಳ್ಳುವವರು, ಕುಟುಂಬದವರು, ನೆರೆಹೊರೆಯುವರು ಪಾಲಿಸಬೇಕಾದ ನಿಯಮಗಳು ಸೇರಿದಂತೆ ಇತರೆ ಅಂಶಗಳ ಬಗ್ಗೆ ವಿವರವಾಗಿ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ

ಹೋಂ ಐಸೋಲೇಷನ್‌ಗೆ ಮಾರ್ಗಸೂಚಿ ಹೀಗಿದೆ

ಕೋವಿಡ್‌ ಪಾಸಿಟಿವ್‌ ರೋಗಿ ಹೋಮ್‌ ಐಸೋಲೇಷನ್‌’ಗೆ ಒಳಗಾಗಲು ವಿಧಿಸಿರುವ ನಿಬಂಧನೆಗಳು
* ರೋಗದ ಲಕ್ಷಣವಿಲ್ಲದವರು ಹಾಗೂ ಸಾಮಾನ್ಯ ಲಕ್ಷಣಗಳಿರುವವರಷ್ಟೇ ಅರ್ಹರು
* ಮನೆಯಲ್ಲೇ ಪ್ರತ್ಯೇಕವಾಗಿ ಇರಲು ಅಗತ್ಯ ವ್ಯವಸ್ಥೆ ಸಿದ್ಧಪಡಿಸಿಕೊಳ್ಳಬೇಕು
* ಸಂಬಂಧಪಟ್ಟ ಸ್ಥಳೀಯ ಆಡಳಿತ/ ಆರೋಗ್ಯ ಪ್ರಾ ಕಾರದ ಆರೋಗ್ಯ ಸೇವಾ ತಂಡ ಮನೆಗೆ ಭೇಟಿ ನೀಡಿ ಪ್ರತ್ಯೇಕವಾಗಿರಲು ಸೂಕ್ತವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು
* ಟೆಲಿ- ಮೆಡಿಸಿನ್‌ ಸಂಪರ್ಕ ಕಲ್ಪಿಸುವುದು ಹಾಗೂ ನಿತ್ಯ ಮೇಲ್ವಿಚಾರಣೆ ವ್ಯವಸ್ಥೆ ರೂಪಿಸುವುದು
* ಸೋಂಕಿತರು ತಮ್ಮ ಆರೋಗ್ಯ ಸ್ಥಿತಿಗತಿ ಬಗ್ಗೆ ನಿತ್ಯ ವೈದ್ಯರಿಗೆ ವರದಿ ಮಾಡುವುದು
* ಸೋಂಕಿತರು ತಮ್ಮ ಬಳಿ ಪಲ್ಸ್‌ ಆಕ್ಸಿಮೀಟರ್‌, ಡಿಜಿಟಲ್‌ ಥರ್ಮಾಮೀಟರ್‌, ಮಾಸ್ಕ್, ಗ್ಲೌಸ್‌ ಹೊಂದಿರಬೇಕು
* ಕೋವಿಡ್‌ 19 ರೋಗಿ ಆಸ್ಪತ್ರೆಯಿಂದ ಬಿಡುಗಡೆಯಾಗಲು ಇರುವ ಮಾರ್ಗಸೂಚಿಗಳನ್ನೇ ಹೋಮ್‌ ಐಸೋಲೇಷನ್‌ನಿಂದ ಬಿಡುಗಡೆಗೊಳಿಸುವಲ್ಲಿಯೂ ಪಾಲಿಸಬೇಕು
* ಹೋಂ ‌ ಐಸೋಲೇಷನ್‌ ಬಗ್ಗೆ ಸೋಂಕಿತರ ಕುಟುಂಬ ಸದಸ್ಯರು, ನೆರೆಹೊರೆಯವರು, ಚಿಕಿತ್ಸೆ ನೀಡುತ್ತಿರುವ ವೈದ್ಯರು, ಸ್ಥಳೀಯ ಆರೋಗ್ಯ ಸಂಸ್ಥೆಗೂ ಮಾಹಿತಿ ಇರಬೇಕು

Advertisement

ಸೋಂಕಿತರ ಮನೆಯಲ್ಲಿ ಪ್ರಾಥಮಿಕ ಹಂತದ ಪರಿಶೀಲನೆ
* ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟ ಬಳಿಕ ಅವರನ್ನು ಮನೆಯ ಒಂದು ಪ್ರತ್ಯೇಕ ಕೋಣೆಯಲ್ಲಿ ಇರಿಸಬೇಕು. ಆರೋಗ್ಯ ಸೇವಾ ತಂಡ ಮನೆಗೆ ಭೇಟಿ ನೀಡಿ ಪ್ರತ್ಯೇಕವಾಗಿರಲು ಪೂರಕವಾಗಿದೆಯೇ ಎಂಬುದನ್ನು ಪರಿಶೀಲಿಸಿ ಖಾತರಿಪಡಿಸಿಕೊಳ್ಳಬೇಕು
* ಜ್ವರ, ಶೀತ, ಕೆಮ್ಮ, ಗಂಟಲು ನೋವು, ಉಸಿರಾಟದ ತೊಂದರೆ ಇತರೆ ರೋಗ ಲಕ್ಷಣವಿದೆಯೇ ಎಂಬದುನ್ನು ತಿಳಿದುಕೊಳ್ಳಬೇಕು
* ಥರ್ಮಲ್‌ ಸ್ಕಾನಿಂಗ್‌, ಪಲ್ಸ್‌ ಆಕ್ಸಿಮೆಟ್ರಿ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರಿಶೀಲನೆಗೆ ಗುಕೋಮೀಟರ್‌, ರಕ್ತದೊತ್ತಡ ಪರೀಕ್ಷಾ ಸಾಧನಗಳನ್ನು ಹೊಂದಿಸಿಕೊಳ್ಳಬೇಕು
* ರಕ್ತದೊತ್ತಡ, ಮಧುಮೇಹ, ಬೊಜ್ಜು, ಥೈರಾಯ್ಡ, ಕ್ಯಾನ್ಸರ್‌, ಮೂತ್ರಪಿಂಡ ಸಮಸ್ಯೆ ಸೇರಿದಂತೆ ಡಯಾಲಿಸಿಸ್‌ ಚಿಕಿತ್ಸೆ, ಹೃದಯ ಸಂಬಂ  ಸಮಸ್ಯೆ, ಪಾರ್ಶ್ವವಾಯು, ಕ್ಷಯ, ಎಚ್‌ಐವಿ ಇತರೆ ಸಮಸ್ಯೆಗಳಿವೆಯೇ ಎಂಬುದನ್ನು ಪರಿಶೀಲಿಸಬೇಕು
* ಟೆಲಿ ಕನ್‌ಸಲ್ಟೆಷನ್‌ ಸಂಪಕ ವ್ಯವಸ್ಥೆ ರೂಪಿಸಬೇಕು
* ಸೋಂಕಿತರ ಇಚ್ಛೆಯಂತೆ ಸರ್ಕಾರಿ ಇಲ್ಲವೇ ಖಾಸಗಿ ಆಸ್ಪತ್ರೆಯೊಂದಿಗೆ ಟೆಲಿ- ಸಂದರ್ಶನ ವ್ಯವಸ್ಥೆ ಕಲ್ಪಿಸಬೇಕು

ಹೋಂ ಐಸೋಲೇಷನ್‌ಗೆ ಅರ್ಹತೆ
* ಸೋಂಕಿತರಿಗೆ ಕೋವಿಡ್‌ ಗುಣಲಕ್ಷಣಗಳಿಲ್ಲದಿರುವುದು/ ಸಾಮಾನ್ಯ ಗುಣಲಕ್ಷಣವಿದೆ ಎಂದು ವೈದ್ಯರು ದೃಢೀಕರಿಸಬೇಕು
* ಸೋಂಕಿತರು ಪ್ರತ್ಯೇಕವಾಗಿರಲು ಪೂರಕ ವಾತಾವರಣ ಮನೆಯಲ್ಲಿದೆಯೇ ಎಂಬುದನ್ನು ಪರಿಶೀಲಿಸಬೇಕು
* ದಿನದ 24 ಗಂಟೆ ಸೇವೆಗೆ ಕ್ಷೇಮದಾರರ ಲಭ್ಯತೆ ಪರಿಶೀಲನೆ. ಕ್ಷೇಮದಾರರು ಹಾಗೂ ಆಸ್ಪತ್ರೆ ನಡುವೆ ನಿರಂತರ ಸಂಪರ್ಕ ವ್ಯವಸ್ಥೆ
* 50 ವರ್ಷದ ಒಳಗಿನರವಾಗಿರಬೇಕು
* ಸೋಕಿತರು ರಕ್ತದೊತ್ತಡ, ಮಧುಮೇಹ, ಬೊಜ್ಜು, ಥೈರಾಯ್ಡ ಸಮಸ್ಯೆಯಿದ್ದರೂ ನಿಯಮಿತ ಔಷಧೋಪಚಾರದಿಂದ ಸಮರ್ಪಕವಾಗಿ ನಿಯಂತ್ರಣದಲ್ಲಿಟ್ಟುಕೊಂಡಿರಬೇಕು
* ಕಿಡ್ನಿ ಸಮಸ್ಯೆ ಸೇರಿದಂತೆ ಡಯಾಲಿಸಿಸ್‌, ಹೃದಯ ಸಮಸ್ಯೆ, ಪಾರ್ಶ್ವವಾಯು, ಕ್ಷಯ, ಕ್ಯಾನ್ಸರ್‌, ಎಚ್‌ಐವಿ ಇತರೆ ಸಮಸ್ಯೆ ಇರಬಾರದು
* ಸೋಂಕಿತರು ನಿಯಮಿತವಾಗಿ ತಮ್ಮ ಆರೋಗ್ಯದ ಮೇಲ್ವಿಚಾರಣೆ ನಡೆಸಿಕೊಂಡು ವೈದ್ಯರಿಗೆ ಆರೋಗ್ಯ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡುವಂತಿರಬೇಕು
* ಸ್ವಯಂ ಹೋಮ್‌ ಐಸೋಲೇಷನ್‌ಗೆ ಒಳಗಾಗುವ ಜತೆಗೆ ಮಾರ್ಗಸೂಚಿಗಳನ್ನು ಪಾಲಿಸುವುದಾಗಿ ಸೋಂಕಿತರು ಮುಚ್ಚಳಿಕೆ ನೀಡಬೇಕು
* ಗರ್ಭಿಣಿಯರಿಗೆ ಹೋಮ್‌ ಐಸೋಲೇಷನ್‌ಗೆ ಅವಕಾಶವಿಲ್ಲ

ಹೋಂ ಐಸೋಲೇಷನ್‌ಗೆ ಕೆಳಕಂಡ ಸೌಲಭ್ಯ ಅಗತ್ಯ
* ಮನೆಯಲ್ಲಿ ಗಾಳಿ- ಬೆಳಕಿನ ವ್ಯವಸ್ಥೆಯಿರುವ ಪ್ರತ್ಯೇಕ ಕೊಠಡಿ ಇರಬೇಕು
* ಪ್ರತ್ಯೇಕ ಕೊಠಡಿಯಲ್ಲಿ ನೆಲೆಸುವ ಸೋಂಕಿತರು ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿರುವಂತಿಲ್ಲ

ಹೆಚ್ಚುವರಿ ವೈದ್ಯ ಸಲಹೆ ಅಗತ್ಯ ಯಾವಾಗ
* ಉಸಿರಾಟದ ತೊಂದರೆ, ಎದೆ ಭಾಗದಲ್ಲಿ ನೋವು, ಮಾನಸಿಕ ತೊಳಲಾಟ, ಮುಖ/ ತುಟಿ ನೀಲಿ ಬಣ್ಣಕ್ಕೆ ತಿರುವುದು, ಸೋಂಕಿತರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿರುವ ಲಕ್ಷಣ ಕಂಡುಬಂದರೆ, ವೈದ್ಯರ ಸಲಹೆ ಮೇರೆಗೆ ಹೆಚ್ಚುವರಿ ವೈದ್ಯಕೀಯ ಸಲಹೆಗೆ ಮುಂದಾಗುವುದು

ಆರೋಗ್ಯ ಸಿಬ್ಬಂದಿ ಪಾಲಿಸಬೇಕಾದ ಮಾರ್ಗಸೂಚಿ
* ಹೋಂ ‌ ಐಸೋಲೇಷನ್‌ನಲ್ಲಿರುವ ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ಮೇಲ್ವಿಚಾರಣೆ ನಡೆಸಬೇಕು. ಹೋಮ್‌ ಐಸೋಲೇಷನ್‌ಗೆ ಒಳಗಾಗಿರುವ ಬಗ್ಗೆ ಸೂಚನಾ ಪತ್ರವನ್ನು ಮನೆಯ ಬಾಗಿಲಿಗೆ ಅಂಟಿಸುವುದು. ಸೋಂಕಿತರ ಕೈಗೆ ಮುದ್ರೆ ಹಾಕಬೇಕು. ಸೋಂಕಿತರ ಎಡಗೈಗೆ ಇ-ಟ್ಯಾಗ್‌ ಅಳವಡಿಸಬೇಕು. ನೆರೆಹೊರೆಯವರಿಗೂ ಈ ಬಗ್ಗೆ ಮಾಹಿತಿ ನೀಡಬೇಕು. ವಾರ್ಡ್‌/ ಗ್ರಾಮ/ ಮತಗಟ್ಟೆ/ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಮಟ್ಟದಲ್ಲಿ ಮೂರು ಮಂದಿಯ ತಂಡ ರಚಿಸಿಕೊಂಡು ನಿಗಾ ವಹಿಸುವುದು. ಸೋಂಕಿತರು ನಿಯಮ ಮೀರಿದರೆ ಸಂಚಾರಿ ದಳವು ಎಚ್ಚರಿಕೆ ನೀಡಬೇಕು. ನಂತರವೂ ಮುಂದುವರಿಸಿದರೆ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಅವರನ್ನು ಕೋವಿಡ್‌ ಕೇರ್‌ ಸೆಂಟರ್‌ಗೆ ಸ್ಥಳಾಂತರಿಸಬೇಕು. ಕ್ಷೇಮದಾರರು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಔಷಧೋಪಚಾರ ತೆಗೆದುಕೊಳ್ಳಬೇಕು. ಸೋಂಕಿತರ ಆರೋಗ್ಯ ಸ್ಥಿತಿಗತಿ ಬಗ್ಗೆ ದೂರವಾಣಿ ಸಂಪರ್ಕ ಇಲ್ಲವೇ ಟೆಲಿ ಸಂಪರ್ಕದ ಮೂಲಕ ಮಾಹಿತಿ ಪಡೆಯುವುದು. ಬಳಸಿದ ಮಾಸ್ಕ್, ಗ್ಲೌಸ್‌ ಇತರೆ ಬಳಸಿದ ವಸ್ತುಗಳನ್ನು ಪ್ರತ್ಯೇಕವಾಗಿ ಇರಿಸಿ ವಿಲೇವಾಗಿಯಾಗುವಂತೆ ಎಚ್ಚರ ವಹಿಸುವುದು. ಸೋಂಕಿತರು ಹಾಗೂ ಕುಟುಂಬದವರಿಗೆ ಕಿರಿಕಿರಿ ನೀಡದಂತೆ ನೆರೆಹೊರೆಯವರಲ್ಲಿ ತಿಳಿ ಹೇಳಬೇಕು.

ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರು ಪಾಲಿಸಬೇಕಾದ ಅಂಶ
* ಎನ್‌- 95 ಮಾಸ್ಕ್ ಅನ್ನು 8 ಗಂಟೆ ಕಾಲ ಬಳಸಿದ ನಂತರ ಬದಲಾಯಿಸಬೇಕು
* ಮಾಸ್ಕ್ ಅನ್ನು ಸೋಂಕುಮುಕ್ತಗೊಳಿಸಿದ ನಂತರವೇ ವಿಲೇವಾರಿ ಮಾಡಬೇಕು
* ಸೋಂಕಿತರು ನಿರ್ದಿಷ್ಟ ಕೊಠಡಿಯಲ್ಲೇ ಇರಬೇಕು. ಕುಟುಂಬ ಸದಸ್ಯರಿಂದ 2 ಮೀಟರ್‌ ಅಥವಾ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಮುಖ್ಯವಾಗಿ ಹಿರಿಯ ನಾಗರಿಕರು ಹಾಗೂ ನಾನಾ ಗಂಭೀರ ಕಾಯಿಲೆ, ಸಮಸ್ಯೆಗಳಿಂದ ಬಳಲುತ್ತಿರುವವರಿಂದ ಅಂತರ ಕಾಯ್ದುಕೊಳ್ಳಬೇಕು
* ಸೋಂಕಿತರು‌ ನಿರಂತರ ವಿಶ್ರಾಂತಿ ಪಡೆಯುವ ಜತೆಗೆ ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ನಿತ್ಯ ಕನಿಷ್ಠ ಎರಡು ಲೀಟರ್‌ ನೀರು ಕುಡಿಯಬೇಕು. ಕುದಿಸಿ ಆರಿಸಿದ ನೀರು ಕುಡಿಯಬೇಕು
* ಕೆಮ್ಮುವಾಗ ಎಚ್ಚರ ವಹಿಸಬೇಕು
* ನಿಯಮಿತವಾಗಿ ಸೋಪಿನಿಂದ 40 ಸೆಕೆಂಡ್‌ ಕಾಲ ಕೈಗಳನ್ನು ತೊಳೆಯಬೇಕು. ಹಾಲ್ಕೋಹಾಲ್‌ ಮಿಶ್ರಿತ ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬಹುದು
* ತಾವು ಬಳಸುವ ಟವೆಲ್‌, ವಸ್ತ್ರ, ತಟ್ಟೆ. ಲೋಟ ಇತರೆ ವಸ್ತುಗಳನ್ನು ಇತರರು ಬಳಸಲು ಅವಕಾಶವಿರಬಾರದು
* ಸೋಂಕಿತರಿರುವ ಕೊಠಡಿಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು
* ಸ್ನಾನದ ಮನೆ, ಶೌಚಾಲಯವನ್ನು ನಿತ್ಯ ಒಂದು ಬಾರಿಯಾದರೂ ಸ್ವಚ್ಛಗೊಳಿಸಬೇಕು
* ವೈದ್ಯರ ಸಲಹೆ, ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಔಷಧಗಳನ್ನು ಸೇವಿಸಬೇಕು
* ಯಾವುದೇ ರೀತಿಯ ಸಮಸ್ಯೆ ಕಾಣಿಸಿಕೊಂಡರೂ ತಕ್ಷಣ ತಿಳಿಸಬೇಕು
* ಧೂಮಪಾನ, ತಂಬಾಕ, ಮದ್ಯ ಸೇವನೆ ನಿಷಿದ್ಧ
* ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ನಿರಂತರವಾಗಿ ಆಕ್ಟಿವ್‌ ಆಗಿ ಇಟ್ಟುಕೊಂಡಿರಬೇಕು

ಕ್ಷೇಮಪಾಲರಿಗೆ ಮಾರ್ಗಸೂಚಿಗಳು
* ಎನ್‌- 95 ಮಾಸ್ಕ್ ಬಳಸಬೇಕು. ಮಾಸ್ಕ್ ತೇವಗೊಂಡಿದ್ದರೆ ಇಲ್ಲವೇ ಕೊಳಕಾಗಿದ್ದರೆ ಬದಲಾಯಿಸಬೇಕು
* ಕಣ್ಣು, ಮೂಗು, ಬಾಯಿ ಮುಟ್ಟಬಾರದು
* ಸೋಂಕಿತರ ಸಂಪರ್ಕಕ್ಕೆ ಹೋಗುವ ಮುನ್ನ ಕೈಗಳನ್ನು ಸಂಪೂರ್ಣ ಸ್ವತ್ಛಗೊಳಿಸಿಕೊಳ್ಳಬೇಕು
* ಆಹಾರ ಸಿದ್ಧಪಡಿಸುವ ಮುನ್ನ ಮತ್ತು ನಂತರ, ಬಡಿಸುವಾಗ, ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಕೈಗಳನ್ನು ಸ್ವತ್ಛಗೊಳಿಸಿಕೊಳ್ಳಬೇಕು
* ಸೋಪು, ನೀರಿನಿಂದ ಕೈಗಳನ್ನು ಸ್ವತ್ಛಗೊಳಿಸಿಕೊಂಡ ನಂತರ ಬಳಸಿ ಬಿಸಾಡುವ ಕಾಗದದಿಂದ ಸ್ವತ್ಛಗೊಳಿಸಿಕೊಳ್ಳಬೇಕು
* ಸೋಂಕಿತರಿಂದ ಯಾವುದೇ ರೂಪದ ದ್ರವ ದೇಹದ ಮೇಲೆ ಬೀಳದಂತೆ ಎಚ್ಚರ ವಹಿಸಬೇಕು. ಮುಖ್ಯವಾಗಿ ಬಾಯಿ, ಮೂಗಿನ ದ್ರವ ದೇಹಕ್ಕೆ ಸೋಕದಂತೆ ನೋಡಿಕೊಳ್ಳಬೇಕು
* ಸೋಂಕಿತರ ಕೊಠಡಿಗೆ ತಿಂಡಿ, ಊಟ ಪೂರೈಸುವುದು
* ಸೋಂಕಿತರು ಬಳಸಿದ ಉಡುಪು ಸೇರಿದಂತೆ ಇತರೆ ಬಟ್ಟೆಗಳನ್ನು ಸೋಪಿನಿಂದ ಚೆನ್ನಾಗಿ ಸ್ವತ್ಛಗೊಳಿಸಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು
* ನಿಯಮಿತವಾಗಿ ತಮ್ಮ ಆರೋಗ್ಯ ಪರೀಕ್ಷೆ ನಡೆಸಿಕೊಳ್ಳಬೇಕು

ಸೋಂಕಿತರ ಕುಟುಂಬ ಸದಸ್ಯರಿಗೆ ಮಾರ್ಗಸೂಚಿ
* ಸೋಂಕಿತರ ನೈತಿಕ ಸ್ಥೈರ್ಯ ಹೆಚ್ಚಿಸಲು ಪ್ರಯತ್ನಿಸಬೇಕು
* ಸೋಂಕಿತರು ಪ್ರತ್ಯೇಕ ಕೊಠಡಿಯಲ್ಲೇ ಇರುವಂತೆ ನೋಡಿಕೊಳ್ಳುವುದು
* ಸೋಂಕಿತರದಿಂದ 2 ಮೀಟರ್‌ ಅಂತರವನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳುವುದು
* ಸೋಂಕಿತರು ಗುಣಮುಖರಾಗುವವರೆಗೆ ಹೊರಗಿನ ಯಾರೊಬ್ಬರೂ ಭೇಟಿಯಾಗಲು ಅವಕಾಶ ನೀಡಬಾರದು
* ಸೋಂಕಿನ ವಿರುದ್ಧ ಹೋರಾಟವೇ ಹೊರತು ಸೋಂಕಿತರ ವಿರುದ್ದವಲ್ಲ ಎಂಬುದನ್ನು ಅರಿಯಬೇಕು

ನೆರೆಹೊರೆಯವರಿಗೆ ಮಾರ್ಗಸೂಚಿ
* ಆತಂಕ, ಅಳುಕು ಬೇಡ
* ಸೋಂಕಿತರ ಮನೆಗೆ ಔಷಧ, ದಿನಸಿ, ತರಕಾರಿ ಇತರೆ ಅಗತ್ಯ ವಸ್ತುಗಳನ್ನು ತಂದುಕೊಡಲು ನೆರವಾಗುವುದು
* ಹೋಂ ‌ ಐಸೋಲೇಷನ್‌ ಕಡ್ಡಾಯವಾಗಿ ಪಾಲನೆಯಾಗುವಂತೆ ನಿಗಾ ವಹಿಸುವುದು
* ಸೋಂಕಿತರಿಂದ 2 ಮೀಟರ್‌ ಅಂತರ ಕಾಯ್ದುಕೊಳ್ಳಬೇಕು

ಹೋಂ ಐಸೋಲೇನ್‌ನಿಂದ ಬಿಡುಗಡೆಯಾಗಲು ಪರಿಗಣಿಸಬೇಕಾದ ಅಂಶ
* ಈ ಲಕ್ಷಣಗಳಿರಬಾರದು: ಜ್ವರ ಸೇರಿದಂತೆ ಇತರೆ ರೋಗ ಲಕ್ಷಣ
* ರೋಗ ಲಕ್ಷಣ ಕಂಡು ಬಂದ 17 ದಿನ ಹಾಗೂ 10 ದಿನಗಳಿಂದ ಜ್ವರ ಕಾಣಿಸಿಕೊಳ್ಳದಿದ್ದರೆ ಬಿಡುಗಡೆಯಾಗಬಹುದು
*ಹೋಂ ಐಸೋಲೇಷನ್‌ ಪೂರ್ಣಪ್ರಮಾಣದಲ್ಲಿ ಅಂತ್ಯವಾದ ಬಳಿಕವಷ್ಟೇ ಕೆಲಸ ಕಾರ್ಯಕ್ಕೆ ತೆರಳುವುದು
* ಹೋಂ ಐಸೋಲೇಷನ್‌ ಮುಗಿದ ಬಳಿಕ ಸೋಂಕಿತರಿದ್ದ ಕೊಠಡಿಯನ್ನು ಎಲ್ಲ ರೀತಿ ಸೋಂಕು ಮುಕ್ತಗೊಳಿಸುವುದು.

ಹೋಮ್‌ ಐಸೋಲೇಷನ್‌ ಅವಧಿ ಮುಗಿದ ನಂತರ ಮತ್ತೆ ಕೋವಿಡ್‌ ಸೋಂಕಿನ ಪರೀಕ್ಷೆ ((RT-PCR/CBNAAT/True-NAT test)) ಅಗತ್ಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next