Advertisement

ರಾಜ್ಯದಲ್ಲಿದೆ ಅರಾಜಕತೆ, ತುರ್ತು ಪರಿಸ್ಥಿತಿ

11:19 PM May 04, 2019 | Lakshmi GovindaRaj |

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಗೃಹ ಇಲಾಖೆ ಮೂಲಕ ಕಾನೂನು ದುರ್ಬಳಕೆ ಮಾಡಿಕೊಂಡು ರಾಜಕೀಯ ಉದ್ದೇಶಗಳಿಗೋಸ್ಕರ ಬಿಜೆಪಿ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಈ ಪ್ರವೃತ್ತಿ ಇದೇ ರೀತಿ ಮುಂದುವರಿದರೆ ರಾಜ್ಯಪಾಲರಿಗೆ ದೂರು ನೀಡಬೇಕಾಗುತ್ತದೆ ಎಂದು ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Advertisement

ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ರೀತಿಯಲ್ಲಿ ತುರ್ತು ಪರಿಸ್ಥಿತಿ ವಾತಾವರಣವನ್ನು ಸಮ್ಮಿಶ್ರ ಸರ್ಕಾರ ತಂದೊಡ್ಡಿದೆ. ಇದು ಅಪಾಯಕಾರಿ ಎಂದು ತಿಳಿಸಿದರು.

ಇತ್ತೀಚೆಗೆ ಸಂಘ-ಪರಿವಾರದ ಕಾರ್ಯಕರ್ತ ಮಹೇಶ್‌ ಹೆಗ್ಡೆ ಅವರನ್ನು ಬಂಧಿಸಿ ಜೈಲಿಗಟ್ಟಿದ್ದು, ಶೃತಿ ಬೆಳ್ಳಕ್ಕಿಯನ್ನು ವಿನಾಕಾರಣ ಬಂಧಿಸಿ ಅವಮಾನಿಸಿದ್ದು, ರಾತ್ರೋ ರಾತ್ರಿ ಅಜಿತ್‌ ಶೆಟ್ಟಿ ಹೇರಂಜೆಯನ್ನು ಬಂಧಿಸಿ ಭಯೋತ್ಪಾದಕರ ರೀತಿ ನಡೆಸಿಕೊಳ್ಳಲಾಯಿತು. ಬಳಿಕ, ಹೇಮಂತ್‌ ಕುಮಾರ್‌ ಹಾಗೂ ಶಾರದ ಬಂಧನವಾಯಿತು. ಈ ಘಟನೆಗಳು ರಾಜ್ಯದಲ್ಲಿ ಯಾವ ರೀತಿಯ ಆಡಳಿತ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೃಹ ಸಚಿವರಿಗೆ ಪತ್ರ: ಗೃಹ ಸಚಿವ ಎಂ.ಬಿ.ಪಾಟೀಲರಿಗೆ ಪತ್ರವನ್ನೂ ಬರೆದಿರುವ ಕೋಟಾ ಶ್ರೀನಿವಾಸಪೂಜಾರಿ, ವೈಚಾರಿಕ ವಿಚಾರಗಳು ಏನೇ ಇದ್ದರೂ ಮೈತ್ರಿ ಸರ್ಕಾರದಲ್ಲಿ ನೀವು ಗೃಹ ಮಂತ್ರಿಯಾದಾಗ ತಮ್ಮ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೆ.

ರಾಜ್ಯದ ಆರೂವರೆ ಕೋಟಿ ಜನರನ್ನು ಸಂರಕ್ಷಿಸುವಲ್ಲಿ ತಾವು ಎಲ್ಲರಿಗೂ ಮಾದರಿಯ ಮಟ್ಟದಲ್ಲಿ ಕೆಲಸ ಮಾಡಬಹುದು ಎಂಬ ವಿಶ್ವಾಸ ಇಟ್ಟುಕೊಂಡಿದ್ದೆ. ತಮ್ಮ ಇಲಾಖೆಯ ಒಂದು ಲಕ್ಷಕ್ಕೂ ಮೀರಿದ ಪೊಲೀಸರಲ್ಲಿ ಆತ್ಮಸ್ಥೈರ್ಯ ಮೂಡಿಸಿ ಅವರಿಗೆ ಹೊಸ ಆಯುಧಗಳು, ಅಪರಾಧ ಪತ್ತೆಗೆ ಹೊಸ ತಂತ್ರಾಶ -ತಂತ್ರಜ್ಞಾನ, ಆಧುನಿಕ ವಾಹನ ಸೌಲಭ್ಯ, ವೇತನ ಪರಿಷ್ಕರಣೆ, ಔರಾದ್ಕರ್‌ ವರದಿಯ ಅನುಷ್ಟಾನ ಇವೆಲ್ಲವೂ ತಮ್ಮ ಅವಧಿಯಲ್ಲಿ ನಡೆಯಬಹುದು ಎಂದು ಆಶಿಸಿದ್ದೆ.

Advertisement

ದುರಾದೃಷ್ಟಕ್ಕೆ ರಾಜ್ಯದ ಗೃಹ ಮಂತ್ರಿಯಂತಹ ಪರಮೋಚ್ಚ ಅಧಿಕಾರ ಪಡೆದ ನೀವು ಕ್ಷುಲ್ಲಕ ಕಾರಣಕ್ಕೆ ಒತ್ತು ಕೊಟ್ಟು, ಸಣ್ಣಪುಟ್ಟ ರಾಜಕೀಯ ದ್ವೇಷಕ್ಕೆ ಮನಸ್ಸು ಕೊಟ್ಟು, ಕಳೆದ ಒಂದು ವಾರದಿಂದ ಈಚೆಗೆ ಬಿಜೆಪಿ ಕಾರ್ಯಕರ್ತರನ್ನು ಕಾರಣವಿಲ್ಲದೆ ಹಿಡಿದು ಜೈಲಿಗಟ್ಟುವ ರೀತಿ, ಅದಕ್ಕಾಗಿ ಇಡೀ ರಾಜ್ಯದ ಪೊಲೀಸ್‌ ಇಲಾಖೆಯನ್ನು ತಾವು ಬಳಸಿಕೊಂಡಿರುವ ವ್ಯವಸ್ಥೆ ಖಂಡನೀಯ ಮಾತ್ರವಲ್ಲ, ತೀರಾ ನಾಚಿಕೆಗೇಡು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ರಾಜ್ಯದ ಗೃಹ ಮಂತ್ರಿಯಾಗಿ ನೀವು ರಾಜ್ಯದಲ್ಲಿ ಅರಾಜಕತೆ ತಂದು ತುರ್ತು ಪರಿಸ್ಥಿತಿ ಮಾದರಿಯಲ್ಲಿ ನಡೆಸಿಕೊಂಡಿದ್ದೀರಿ. ತಕ್ಷಣ ಎಲ್ಲ ಮೊಕದ್ದಮೆ ವಾಪಸ್‌ ಪಡೆದು ಬಂಧಿತ ಅಮಾಯಕರ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಪಾಲರಿಗೆ ದೂರು ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಕೆಎಎಸ್‌ ಅಧಿಕಾರಿ ಮಥಾಯಿ ಅವರಿಗೆ ವೇತನ -ಬಡ್ತಿ ಸಿಗದಂತೆ ಮಾಡಿರುವ ಸರ್ಕಾರದ ಕ್ರಮ ಸರಿಯಲ್ಲ. ಪ್ರಾಮಾಣಿಕ ಅಧಿಕಾರಿಗಳಿಗೆ ಸರ್ಕಾರದಲ್ಲಿ ರಕ್ಷಣೆ ಇಲ್ಲದಂತಾಗಿದೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಕಿಡಿ ಕಾರಿದರು.

ಸ್ವಾಗತಾರ್ಹ: ಅರುಣ್‌ ಶಹಾಪುರ ಮಾತನಾಡಿ, ಮಕ್ಕಳಿಗೆ ಶಾಲಾ ಬ್ಯಾಗ್‌ ಹೊರೆ ತಗ್ಗಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮ ಸ್ವಾಗತಾರ್ಹ. ಹಿಂದೆ ಪ್ರಕಾಶ್‌ ಜಾವಡೇಕರ್‌ ಅವರು ಮಾನವ ಸಂಪನ್ಮೂಲ ಸಚಿವರಾಗಿದ್ದಾಗ ಆ ಬಗ್ಗೆ ಚಿಂತನೆ ನಡೆಸಿದ್ದರು. ಇದೀಗ ರಾಜ್ಯ ಸರ್ಕಾರ ಜಾರಿಗೆ ತಂದಿರುವುದು ಒಳ್ಳೆಯ ಕೆಲಸ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಾಸನ ಜಿಲ್ಲೆಗೆ ಉತ್ತಮ ಫ‌ಲಿತಾಂಶ ಬಂದಿದ್ದಕ್ಕೆ ಭವಾನಿ ಕಾರಣ, ದಕ್ಷಿಣ ಕನ್ನಡ ಜಿಲ್ಲೆಯವರು ನಾಲ್ಕನೇ ಸ್ಥಾನಕ್ಕೆ ಹೋಗಿದ್ದರೆ ನಮಗೆ ಮತ ಹಾಕದಿರುವುದು ಕಾರಣ ಎಂಬ ಎಚ್‌.ಡಿ.ರೇವಣ್ಣ ಅವರ ಹೇಳಿಕೆ ನಾಚಿಕೆಗೇಡು. ಶಿಕ್ಷಣದಲ್ಲೂ ದರಿದ್ರ ರಾಜಕೀಯ ಬೆರೆಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಪರಿಷತ್‌ ಸದಸ್ಯರಾದ ಲೆಹರ್‌ಸಿಂಗ್‌, ಎಸ್‌.ವಿ.ಸಂಕನೂರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next