Advertisement

ವಿಚಾರಣಾಧೀನ, ಸಜಾ ಕೈದಿಗಳಿಗೆ ಆರೋಗ್ಯ ಕಾರ್ಡ್‌

08:21 PM Sep 12, 2022 | Team Udayavani |

ಬೆಂಗಳೂರು: ರಾಜ್ಯದ ವಿವಿಧ ಜೈಲುಗಳಲ್ಲಿರುವ ಅಪರಾಧಿಗಳು ಮತ್ತು ವಿಚಾರಣಾಧೀನ ಕೈದಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ನಿಗಾವಹಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಎಲ್ಲ ಕೈದಿಗಳ ಆರೋಗ್ಯ ಪರೀಕ್ಷೆ ನಡೆಸಿ, ಆರೋಗ್ಯ ಕಾರ್ಡ್‌ಗಳನ್ನು ಸಿದ್ಧಪಡಿಸಿಲು ರಾಜ್ಯ ಮಾನವ ಹಕ್ಕುಗಳ ಆಯೋಗ ಸರ್ಕಾರಕ್ಕೆ ಸೂಚಿಸಿದೆ.

Advertisement

ಕಾರಾಗೃಹಗಳಲ್ಲಿರುವ ಅಪರಾಧಿಗಳು ಹಾಗೂ ವಿಚಾರಣಾಧೀನ ಕೈದಿಗಳು ಅನಾರೋಗ್ಯಕ್ಕೆ ತುತ್ತಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿರುವ ಪ್ರಕರಣ ಉಲ್ಲೇಖೀಸಿರುವ ಆಯೋಗ, ಅವರಿಗೆ ಸರಿಯಾದ ಸಮಯದಲ್ಲಿ ಜೈಲಿನಲ್ಲಿ ಚಿಕಿತ್ಸೆ ನೀಡಿದ್ದರೆ ಅವರು ಬದುಕುಳಿಯುತ್ತಿದ್ದರು. ಇಂತಹ ಪ್ರಕರಣಗಳನ್ನು ಸಹಜ ಸಾವೆಂದು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಕೈದಿಗಳು ಅನಾರೋಗ್ಯಕ್ಕೆ ತುತ್ತಾಗುವ ಮುನ್ನವೇ ಚಿಕಿತ್ಸೆ ಕೊಡಿಸಿ ಗುಣಮುಖರಾಗುವತ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ.

ಬೆಂಗಳೂರು ನಗರದಲ್ಲಿ ಪೋಕ್ಸೋ ಪ್ರಕರಣದಲ್ಲಿ ವಿಚಾರಣಾಧೀನ ಆರೋಗ್ಯವಂತ 21 ವರ್ಷದ ಕೈದಿ ಜೈಲು ಸೇರಿದ ಮೂರು ವರ್ಷದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗದ ಅಧ್ಯಕ್ಷ ಡಿ.ಎಚ್‌.ವಘೇಲಾ, ಸದಸ್ಯರಾದ ಕೆ.ಬಿ.ಚಂಗಪ್ಪ ಮತ್ತು ಆರ್‌.ಕೆ.ದತ್ತ ಅವರಿದ್ದ ಪೀಠ, ಸರ್ಕಾರಕ್ಕೆ ಕೈದಿಗಳ ಆರೋಗ್ಯದ ಬಗ್ಗೆ ನಿಗಾ ಇಡಲು ಹಲವು ಶಿಫಾರಸು ನೀಡಿದೆ.

ರಾಜ್ಯ ಸರ್ಕಾರ ಜೈಲಿನಲ್ಲಿರುವ ಸಜಾ ಹಾಗೂ ವಿಚಾರಣಾಧೀನ ಕೈದಿಗಳಿಗೆ ನಿಯಮಿತವಾದ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಅಗತ್ಯವಿದ್ದವರಿಗೆ ಸಮೀಪ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ರೋಗವು ಪ್ರಾಥಮಿಕ ಹಂತದಲ್ಲಿರುವ ವೇಳೆ ಚಿಕಿತ್ಸೆ ನೀಡಿ ಗುಣಪಡಿಸಬೇಕು. ಇದನ್ನು ವ್ಯವಸ್ಥಿತವಾಗಿ ಅಳವಡಿಸಿಕೊಳ್ಳಲು ಹಾಗೂ ದಾಖಲೀಕರಣ ನಡೆಸಲು ಪ್ರತಿ ಕೈದಿಗೂ ಒಂದು ಆರೋಗ್ಯ ಕಾರ್ಡ್‌ ಸಿದ್ಧಪಡಿಸಿ, ನಿಯಮಿತ ತಪಾಸಣೆ ದಾಖಲೆ ನಿರ್ವಹಣೆ, ಜತೆಗೆ ಮನೋವೈದ್ಯರಿಂದ ಆಪ್ತಸಮಾಲೋಚನೆಗೆ ಒಳಪಡಿಸಬೇಕು. ಧನಾತ್ಮಕ ಒತ್ತಡ ಕಾಪಾಡಲು ದೈಹಿಕ ಮತ್ತು ಮಾನಸಿಕ ಚಟುವಟಿಕೆ, ಜೈಲಿನ ಬ್ಯಾರಕ್‌ ಮತ್ತು ಹೊರಭಾಗಗಳಲ್ಲಿ ಕೆಲವು ಕ್ರೀಡೆಗಳನ್ನು ಆಯೋಜಿಸಬೇಕು ಎಂದು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಆಯೋಗ ಶಿಫಾರಸು ಮಾಡಿದೆ.

Advertisement

10 ಲಕ್ಷ ಪರಿಹಾರ: ಅಪರಾಧ ಸಾಬೀತಾಗುವ ಮುನ್ನವೇ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ವಿಚಾರಣಾಧೀನ ಕೈದಿ ಅರವಿಂದ ಕುಮಾರ್‌ ಮೃತಪಟ್ಟಿದ್ದಾರೆ. ಇಲ್ಲಿ ಸೂಕ್ತ ಚಿಕಿತ್ಸೆ ಲಭ್ಯತೆಯ ಕೊರತೆ ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡ ಮೃತರ ಕುಟುಂಬಕ್ಕೆ 10 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಆಯೋಗ ಸರ್ಕಾರಕ್ಕೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next