ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯು 3427 ಕೋಟಿ ರೂ. ಬಂಡವಾಳ ಹೂಡಿಕೆಯ ನಾಲ್ಕು ಹೊಸ ಯೋಜನೆಗಳಿಗೆ ಒಪ್ಪಿಗೆ ನೀಡಿದ್ದು, 2595 ಹೊಸ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಏರೋಸ್ಪೇಸ್, ವಸತಿ ಸೇರಿದಂತೆ ಇತರೆ ವಲಯಗಳಲ್ಲಿ ನಾಲ್ಕು ಬೃಹತ್ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಎರಡು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಒಂದು ಯೋಜನೆ ಅನುಷ್ಠಾನಕ್ಕೆ ಸಮಿತಿ ಅನುಮೋದನೆ ನೀಡಿದೆ.
ಬೋಯಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರಿನ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ನ ಎರಡು ಕಡೆ ಕ್ರಮವಾಗಿ 36.23 ಎಕರೆ ಹಾಗೂ 5.47 ಎಕರೆಯಲ್ಲಿ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೌಲಭ್ಯದ ಜತೆಗೆ ಎಲೆಕ್ಟ್ರಾನಿಕ್ಸ್/ ಅವೈನಿಕ್ಸ್ ಉತ್ಪಾದನೆ ಮತ್ತು ಜೋಡಣಾ ಯೋಜನೆಗೆ ಸಮಿತಿ ಹಸಿರು ನಿಶಾನೆ ತೋರಿದೆ. ಒಟ್ಟು 1152 ಕೋಟಿ ರೂ. ಬಂಡವಾಳ ಹೂಡಿಕೆಯ ಯೋಜನೆ ಅನುಷ್ಠಾನದಿಂದ ಬರೋಬ್ಬರಿ 2,300 ಹೊಸ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಮೂಡಿದೆ.
ಬೆಂಗಳೂರಿನ ಸಿ.ಡಿ.ಸಿ. ಡೆವಲಪ್‌ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ನಲ್ಲಿ 100 ಎಕರೆ ಕೆಐಎಡಿಬಿ ಪ್ರದೇಶದಲ್ಲಿ ತಂತ್ರಜ್ಞಾನ ಅನ್ವೇಷಣಾ ಅಂತಾರಾಷ್ಟ್ರೀಯ ಪಾರ್ಕ್ (ಟೆಕ್ನಾಲಜಿ ಇನ್ನೋವೇಷನ್ ಇಂಟರ್‌ನ್ಯಾಷನಲ್ ಪಾರ್ಕ್) ನಿರ್ಮಾಣ ಯೋಜನೆಗೂ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಒಪ್ಪಿಗೆ ನೀಡಿದೆ. ಒಟ್ಟು 740 ಕೋಟಿ ರೂ. ಹೂಡಿಕೆಯ ಯೋಜನೆಯಡಿ 25 ಉದ್ಯೋಗ ಸೃಷ್ಟಿ ನಿರೀಕ್ಷೆ ಇದೆ.
ಮಂಗಳೂರಿನ ಇಂಡಿಯನ್ ಕೋಸ್ಟ್ ಗಾರ್ಡ್ ಸಂಸ್ಥೆಯು ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿಯ ಕೆಐಎಡಿಬಿಯಲ್ಲಿ 160 ಎಕರೆ ಪ್ರದೇಶದಲ್ಲಿ ಕರಾವಳಿ ರಕ್ಷಣಾ ಪಡೆ ತರಬೇತಿ ಕೇಂದ್ರ (ಇಂಡಿಯನ್ ಕೋಸ್ಟ್ ಗಾರ್ಡ್ ಟ್ರೈನಿಂಗ್ ಸೆಂಟರ್- ಐಸಿಜಿಟಿಸಿ) ನಿರ್ಮಾಣ ಯೋಜನೆಗೂ ಸಮಿತಿಯ ಒಪ್ಪಿಗೆ ದೊರಕಿದೆ. ಒಟ್ಟು 1010 ಕೋಟಿ ರೂ. ಬಂಡವಾಳ ಹೂಡಿಕೆಯ ಯೋಜನೆಯಡಿ 250 ಉದ್ಯೋಗ ಸೃಷ್ಟಿಯಾಗುವ ಅಂದಾಜು ಇದೆ.
ಬೆಂಗಳೂರಿನ ಯೂನಿವರ್ಸಲ್ ಬಿಲ್ಡರ್ ಸಂಸ್ಥೆಯು ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ನ ಹಾರ್ಡ್‌ವೇರ್ ಪ್ರದೇಶದ 21.25 ಎಕರೆ ಕೆಐಎಡಿಬಿ ಪ್ರದೇಶದಲ್ಲಿ 525 ಕೋಟಿ ರೂ. ವೆಚ್ಚದ ಯೋಜನೆಗೆ ಸಮಿತಿ ಒಪ್ಪಿಗೆ ಸೂಚಿಸಿದ್ದು, 20 ಉದ್ಯೋಗ ಸೃಷ್ಟಿ ನಿರೀಕ್ಷೆ ಇದೆ. ಸಮಿತಿಯ 49ನೇ ಸಭೆಯಲ್ಲಿ ನಾಲ್ಕು ಮಹತ್ವದ ಯೋಜನೆಗಳಿಗೆ ಹಸಿರು ನಿಶಾನೆ ನೀಡುವ ಮೂಲಕ ಹೂಡಿಕೆಗೆ ಅವಕಾಶ ಕಲ್ಪಿಸಿದ್ದು, ರಾಜ್ಯದಲ್ಲಿ 2595 ಹೊಸ ಹುದ್ದೆ ಸೃಷ್ಟಿಯ ನಿರೀಕ್ಷೆ ಮೂಡಿದೆ. ಸಚಿವರಾದ ಆರ್.ವಿ.ದೇಶಪಾಂಡೆ, ಡಾ.ಎಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.