Advertisement

ರಾಜ್ಯ ಉಷ್ಣ ಸ್ಥಾವರಗಳೀಗ ಸೂಪರ್‌ ಕ್ರಿಟಿಕಲ್‌

08:19 AM Sep 22, 2017 | |

ಬೆಂಗಳೂರು: ರಾಜ್ಯದ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಸದ್ಯ ಒಂದು ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಮಾತ್ರ ಇದ್ದು ಸೂಪರ್‌ ಕ್ರಿಟಿಕಲ್‌ ಹಂತ ತಲುಪಿದೆ. ಕಲ್ಲಿದ್ದಲು ಪೂರೈಕೆ ವ್ಯವಸ್ಥೆಯಲ್ಲಿ ತುಸು ವ್ಯತ್ಯಯವಾದರೂ ಉತ್ಪಾದನೆ ದಿಢೀರ್‌ ಕುಸಿಯುವ ಆತಂಕದಲ್ಲೇ ಉಷ್ಣ ವಿದ್ಯುತ್‌ ಸ್ಥಾವರಗಳು ಕಾರ್ಯ ನಿರ್ವಹಿಸುವಂತಾಗಿದೆ.

Advertisement

ಮಳೆಗಾಲದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಹಿನ್ನಡೆಯಾದರೂ ಹಿಂದಿನ ವರ್ಷಗಳ ಮಳೆಗಾಲಗಳಿಗೆ ಹೋಲಿಸಿದರೆ ಈ ಬಾರಿ ಕಲ್ಲಿದ್ದಲು ಪೂರೈಕೆ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ. ಕರ್ನಾಟಕ ಸೇರಿ ಬಹುತೇಕ ರಾಜ್ಯಗಳಿಗೂ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಜಲವಿದ್ಯುತ್‌ ಉತ್ಪಾದನೆ ಗರಿಷ್ಠ ಪ್ರಮಾಣದಲ್ಲಿರಲಿದ್ದು, ಬೇಡಿಕೆಗೆ ತಕ್ಕಂತೆ ಉಷ್ಣ ವಿದ್ಯುತ್‌ ಉತ್ಪಾದನೆಯನ್ನು ಹೊಂದಿಸಿಕೊಳ್ಳಲಾಗುತ್ತದೆ. ಆದರೆ, ಈ ಬಾರಿ ಮುಂಗಾರಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಉಷ್ಣ ಸ್ಥಾವರಗಳಲ್ಲಿ ಬಹುತೇಕ ದಿನಗಳಲ್ಲಿ ಗರಿಷ್ಠ ಪ್ರಮಾಣದಲ್ಲೇ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. 

ನಿತ್ಯ 52,000 ಟನ್‌ ಕಲ್ಲಿದ್ದಲು ಅಗತ್ಯ:
ರಾಯಚೂರಿನ ಬಿಟಿಪಿಎಸ್‌ ಘಟಕದಲ್ಲಿ ಒಟ್ಟು 8 ಘಟಕಗಳಿದ್ದು, ಗರಿಷ್ಠ 1720 ಮೆಗಾವ್ಯಾಟ್‌ ಉತ್ಪಾದನೆ ಸಾಮರ್ಥಯ ಹೊಂದಿದೆ. ಎಲ್ಲ ಘಟಕಗಳು ಪೂರ್ಣ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದಿಸಲು ನಿತ್ಯ 30,000 ಟನ್‌ ಕಲ್ಲಿದ್ದಲು ಅಗತ್ಯವಿದೆ. ಹಾಗೆಯೇ ಬಳ್ಳಾರಿಯ ಮೂರು ಘಟಕಗಳಿಂದ ಗರಿಷ್ಠ 1,700 ಮೆ.ವ್ಯಾ. ಉತ್ಪಾದನೆ ಸಾಮರ್ಥಯವಿದ್ದು, 22,000 ಟನ್‌ (ಸುಧಾರಿತ ಯಂತ್ರ) ಕಲ್ಲಿದ್ದಲು ಅಗತ್ಯವಿರುತ್ತದೆ. ಒಟ್ಟಾರೆ ನಿತ್ಯ ಎರಡೂ ಸ್ಥಾವರಗಳ ಎಲ್ಲ ಘಟಕಗಳು ಪೂರ್ಣ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದಿಸಲು 52,000 ಟನ್‌ ಕಲ್ಲಿದ್ದಲು ಅಗತ್ಯವಿದೆ.

ಒಂದು ದಿನದ ದಾಸ್ತಾನು: ಸದ್ಯ ಎರಡೂ ಸ್ಥಾವರಗಳಲ್ಲಿ ಒಂದು ದಿನಕ್ಕೆ ಸಾಕಾಗುವಷ್ಟು ಕಲ್ಲಿದ್ದಲು ಮಾತ್ರ ದಾಸ್ತಾನಿದೆ. ಪೂರೈಕೆಯಾದ ಕಲ್ಲಿದ್ದಲನ್ನು ಒಂದು ದಿನವಷ್ಟೇ ದಾಸ್ತಾನು ಮಾಡಿ ಬಳಸಬೇಕಿದೆ. ಪೂರೈಕೆ ವ್ಯವಸ್ಥೆಯಲ್ಲಿ ಯಾವುದೇ 
ಅಡಚಣೆಯಿಂದ ವಿಳಂಬವಾದರೆ, ಏರುಪೇರು ಉಂಟಾದರೂ ವಿದ್ಯುತ್‌ ಉತ್ಪಾದನೆ ದಿಢೀರ್‌ ಕುಸಿಯಲಿದೆ. ಕೇಂದ್ರ ವಿದ್ಯುತ್‌ ಪ್ರಾಧಿಕಾರದ ನಿಯಮದ ಪ್ರಕಾರ 30 ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇರಬೇಕು. ಕನಿಷ್ಠ 10 ದಿನಕ್ಕಾಗುವಷ್ಟು ದಾಸ್ತಾನು ಇದ್ದರೂ ಉತ್ತಮ ಸ್ಥಿತಿ ಎನ್ನಲಾಗುತ್ತದೆ. ಆದರೆ 3 ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇದ್ದರೆ “ಅತಿ ಗಂಭೀರ ಸ್ಥಿತಿ’ ಎಂದು ಪರಿಗಣಿಸಲಾಗುತ್ತಿದೆ. ಆದರೆ, ಸದ್ಯದ ರಾಜ್ಯದ ಸ್ಥಿತಿ ಅದಕ್ಕಿಂತಲೂ ಗಂಭೀರ ಸ್ಥಿತಿಯಲ್ಲಿರುವುದು ಆತಂಕಕ್ಕೆ ಕಾರಣವಾಗಿದೆ.

ಬಹುತೇಕ ರಾಜ್ಯಗಳಲ್ಲಿ ಕೊರತೆ: ಕರ್ನಾಟಕ ಮಾತ್ರವಲ್ಲದೆ ದೇಶದ ಬಹುತೇಕ ರಾಜ್ಯಗಳಿಗೂ ಕಲ್ಲಿದ್ದಲು ಪೂರೈಕೆ ಇಳಿಕೆಯಾಗಿದ್ದು, ದಾಸ್ತಾನು ಪ್ರಮಾಣ ಕಡಿಮೆಯಿರುವುದು ಕೇಂದ್ರ ವಿದ್ಯುತ್‌ ಪ್ರಾಧಿಕಾರದ ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ, ತಮಿಳುನಾಡು ಸೇರಿ ಬೆರಳೆಣಿಕೆ ರಾಜ್ಯಗಳಿಗೆ ಕಲ್ಲಿದ್ದಲು ಪೂರೈಕೆ ಉತ್ತಮವಾಗಿದ್ದು, ಉಳಿದ ರಾಜ್ಯಗಳಿಗೆ
ಕಡಿಮೆಯಿರುವುದು ಕಂಡುಬಂದಿದೆ.  ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆಯಲ್ಲಿ ಇಳಿಕೆಯಾಗಿದ್ದು, ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಸದ್ಯ ಒಂದು ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಮಾತ್ರ ಇದೆ. ಮಳೆಯಿಂದಾಗಿ ಕೆಲವೆಡೆ ಕಲ್ಲಿದ್ದಲು ಗಣಿಗಾರಿಕೆಗೆ ಹಿನ್ನಡೆ ಜತೆಗೆ ಸಾಗಣೆ ವ್ಯವಸ್ಥೆಯಲ್ಲಿನ ವ್ಯತ್ಯಯದಿಂದ ಪೂರೈಕೆ ಇಳಿಕೆಯಾಗಿರುವ ಸಾಧ್ಯತೆ ಇದೆ. ಇಷ್ಟಾದರೂ ವಿದ್ಯುತ್‌ ಅಭಾವ ತಲೆದೋರದಂತೆ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ.
●ಡಿ.ಕೆ.ಶಿವಕುಮಾರ್‌, ಇಂಧನ ಸಚಿವ

Advertisement

ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next