ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ 2024ರ ಸಿಇಟಿಯಲ್ಲಿ ಪಠ್ಯಪುಸ್ತಕದಿಂದ ಹೊರತಾದ 50 ಪ್ರಶ್ನೆಗಳನ್ನು ಕೇಳಿದ್ದ ಆರೋಪ-ವಿವಾದದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇದೀಗ ಕೆಇಎ ಕಾರ್ಯಕಾರಿ ನಿರ್ದೇಶಕಿ ಎಸ್.ರಮ್ಯಾ ಅವರನ್ನು ಎತ್ತಂಗಡಿ ಮಾಡಿದೆ.
ರಮ್ಯಾ ಅವರು ಕಾರ್ಯ ನಿರ್ವಹಿಸುತ್ತಿದ್ದ ಹುದ್ದೆಗೆ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಚ್.ಪ್ರಸನ್ನ ಅವರನ್ನು ನೇಮಿಸಿ ಆದೇಶಿಸಲಾಗಿದೆ.
ಸರ್ಕಾರವು ರಮ್ಯಾ ಅವರನ್ನು ಎತ್ತಂಗಡಿ ಮಾಡಿ ಆದೇಶಿಸಿದೆ. ಆ ಹುದ್ದೆಗೆ ತಾಂತ್ರಿಕ ಶಿಕ್ಷಣ ಇಲಾಖೆಯ ಹಾಲಿ ನಿರ್ದೇಶಕರಾಗಿದ್ದ ಎಚ್.ಪ್ರಸನ್ನ ಅವರಿಗೆ ಪ್ರಾಧಿಕಾರ ಕಾರ್ಯಕಾರಿ ನಿರ್ದೇಶಕ ಸ್ಥಾನವನ್ನು ಹೆಚ್ಚುವರಿಯಾಗಿ ನೀಡಿದ್ದಾರೆ. ಪ್ರಸನ್ನ ಅವರು ಗುರುವಾರ ಮಧ್ಯಾಹ್ನವೇ ಪ್ರಾಧಿಕಾರಕ್ಕೆ ತೆರಳಿ ಅಧಿಕಾರ ಸ್ವೀಕರಿಸಿದ್ದಾರೆ. ರಮ್ಯಾ ಅಧಿಕಾರ ಹಸ್ತಾಂತರ ಮಾಡಿ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪೂರ್ಣಾವಧಿ ನಿರ್ದೇಶಕರನ್ನು ನೇಮಿಸಿಲ್ಲ. ಜತೆಗೆ ರಮ್ಯಾ ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ.
ಏನಿದು ಆರೋಪ ?:
ಸಿಇಟಿಯಲ್ಲಿ 50 ಪಠ್ಯೇತರ ಪ್ರಶ್ನೆಗಳನ್ನು ಕೇಳಿದ ಆರೋಪ ಎದುರಿಸುತ್ತಿದ್ದ ಕೆಇಎ ವಿರುದ್ಧ ವಿದ್ಯಾರ್ಥಿಗಳು, ಪೋಷಕರು ಭಾರೀ ಆಕ್ರೋಶ ಹೊರಹಾಕಿದ್ದರು. ಇದು ಸಾಕಷ್ಟು ವಿವಾದಕ್ಕೆ ಸಿಲುಕಿ ಸರ್ಕಾರವೂ ಮುಜುಗರಕ್ಕೊಳಗಾಗಿತ್ತು. ಸರ್ಕಾರವು ತಜ್ಞರ ಸಮಿತಿ ರಚನೆ ಮಾಡಿ ಈ ಬಗ್ಗೆ ವರದಿ ಪಡೆದಿತ್ತು. ಆ ವೇಳೆ ಪಠ್ಯದಿಂದ ಹೊರತಾದ ಪ್ರಶ್ನೆಗಳು ಬಂದಿರುವುದು ಸಾಬೀತುಗೊಂಡಿತು ಎನ್ನಲಾಗಿದೆ. ಈ ಬೆಳವಣಿಗೆ ಬಳಿಕವೂ ಕೆಇಎ ಕಾರ್ಯಕಾರಿ ನಿರ್ದೇಶಕಿ ಹುದ್ದೆಯನ್ನು ರಮ್ಯಾ ಮುಂದುವರೆದಿದ್ದರು.