Advertisement

ಭರವಸೆಗೆ ಸೀಮಿತವಾಗದಿರಲಿ ಪ್ಯಾಕೇಜ್‌ ಮೊತ್ತ

09:45 PM May 20, 2021 | Team Udayavani |

ಕೋವಿಡ್ ಹಿನ್ನೆಲೆಯಲ್ಲಿ ಸರಕಾರ ಘೋಷಿಸಿರುವ ಪ್ಯಾಕೇಜ್‌ ಅರ್ಹರೆಲ್ಲರಿಗೂ ಸಕಾಲದಲ್ಲಿ ತಲುಪುವಂತಾಗಬೇಕು. ವಿವಿಧ ದಾಖಲೆಗಳ  ನೆಪದಲ್ಲಿ ಅದು ಕೈ ತಪ್ಪಬಾರದು. ಈ ನಿಟ್ಟಿನಲ್ಲಿ ಸರಕಾರ ಗಮನ ಹರಿಸಿ ಸಲ್ಲಿಸಬೇಕಾದ ಅಗತ್ಯ ದಾಖಲೆಗಳ ಬಗ್ಗೆ ಮೊದಲೇ ಆಯಾ ವಲಯದ  ಕಾರ್ಮಿಕ ನಾಯಕರು ಅಥವಾ ತಜ್ಞರಲ್ಲಿ ಚರ್ಚಿಸಿ ಅಂತಿಮಗೊಳಿಸಬೇಕು. ಈ ಹಿಂದಿನ ಸಂದರ್ಭಗಳಲ್ಲಿನ ಕೆಲವೊಂದು ನಿಯಮಗಳಿಂದಾಗಿ ಸಮಸ್ಯೆಯಾಗಿದ್ದನ್ನು ತಿಳಿದುಕೊಂಡು ಮುಂದುವರೆಯಲಿ ಎಂಬುದೇ ಹೆಚ್ಚಿನ ವಲಯದವರ ಆಗ್ರಹವಾಗಿದೆ.

Advertisement

ವಿವಿಧ ರಂಗದ ಕಲಾವಿದರು ;

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ, ನಾಟಕ, ಜಾನಪದ, ಸಂಗೀತ ಸೇರಿದಂತೆ ಒಟ್ಟು 6,000ಕ್ಕೂ ಮಿಕ್ಕಿ ಕಲಾವಿದರಿದ್ದಾರೆ. ಕಳೆದ ಲಾಕ್‌ಡೌನ್‌ ಸಮಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 633 ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಈ ಪೈಕಿ 458 ಮಂದಿಗೆ ಪ್ಯಾಕೇಜ್‌ ಆಧಾರದಲ್ಲಿ ನೆರವು ದೊರಕಿದೆ. ಇದಲ್ಲದೆ ಯಕ್ಷಗಾನ ಅಕಾಡೆಮಿ, ನಾಟಕ ಅಕಾಡೆಮಿ, ತುಳು ಸಾಹಿತ್ಯ ಅಕಾಡೆಮಿ ಸೇರಿದಂತೆ ವಿವಿಧ ಅಕಾಡೆಮಿ ಮೂಲಕವೂ ಹಲವು ಮಂದಿ ಪರಿಹಾರ ಪಡೆದುಕೊಂಡಿದ್ದಾರೆ.

ಟ್ಯಾಕ್ಸಿ  , ಮ್ಯಾಕ್ಸಿ ಕ್ಯಾಬ್‌, ಆಟೋ ರಿಕ್ಷಾ :

ದ.ಕ. ಜಿಲ್ಲೆಯಲ್ಲಿ ಸುಮಾರು 10,500 ಮಂದಿ ಟ್ಯಾಕ್ಸಿ ಹಾಗೂ ಮ್ಯಾಕ್ಸೀ ಕ್ಯಾಬ್‌ ಚಾಲಕರಿದ್ದು, ಸುಮಾರು 5,500 ಮಂದಿ ಕಳೆದ ವರ್ಷ ಪ್ಯಾಕೇಜ್‌ಗೆ ಸೇವಾಸಿಂಧು ಪೋರ್ಟಲ್‌ ಮುಖೇನ ಅರ್ಜಿ ಸಲ್ಲಿಕೆ ಮಾಡಿದ್ದರು. ಇದರಲ್ಲಿ ಸುಮಾರು 2,000 ಮಂದಿಗೆ ಮಾತ್ರ ಸಹಾಯಧನ ಬಂದಿದೆ.

Advertisement

ಆಟೋ ರಿಕ್ಷಾ :

ಜಿಲ್ಲೆಯಲ್ಲಿ ಸುಮಾರು 23,000 ಮಂದಿ ಆಟೋ ರಿಕ್ಷಾ ಚಾಲಕರಿದ್ದು, 10,000 ಮಂದಿ ಕಳೆದ ವರ್ಷದ ಪ್ಯಾಕೇಜ್‌ಗೆ ಅರ್ಜಿ ಸಲ್ಲಿಸಿದ್ದಾರೆ. 5,000 ಮಂದಿಗಷ್ಟೇ ಸಹಾಯ ಧನ ಬಂದಿದೆ.

ಬೀದಿಬದಿ ವ್ಯಾಪಾರಸ್ಥರು  ;

ಬೀದಿ ಬದಿ ವ್ಯಾಪಾರಸ್ಥರಿಗೆ ಕಳೆದ ವರ್ಷ ಪಿಎಂ ಸ್ವ-ನಿಧಿ (10,000 ರೂ. ಕಿರುಸಾಲ) ಯೋಜನೆ (ಆತ್ಮನಿರ್ಭರ್‌) ಘೋಷಣೆಯಾಗಿತ್ತು.  ಈ ಬಾರಿ ರಾಜ್ಯ ಸರಕಾರ ಬೀದಿಬದಿ ವ್ಯಾಪಾರಸ್ಥರಿಗೆ ತಲಾ 2,000 ರೂ. ಘೋಷಿಸಿದ್ದು ಅದರಂತೆ ಕಳೆದ ಬಾರಿ ಅತ್ಮನಿರ್ಭರ್‌ ನಿಧಿಯಡಿ ನೋಂದಣಿಯಾದವರು ಫ‌ಲಾನುಭವಿಗಳಾಗಿರುತ್ತಾರೆ. ಹಾಗಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 4,773 ಮಂದಿ ಪ್ರಯೋಜನ ಪಡೆಯಲಿದ್ದಾರೆ. ಪಾಲಿಕೆಯೂ ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಒಟ್ಟು 7,277 ಮಂದಿ ಅರ್ಜಿ ಸಲ್ಲಿಸಿದ್ದು 4,684 ಮಂದಿಗೆ ಮಂಜೂರಾಗಿದೆ.

ಟೈಲರ್‌ :

ದ.ಕ. ಜಿಲ್ಲೆಯಲ್ಲಿ ಸುಮಾರು  30 ಸಾವಿರ ಟೈಲರ್‌ಗಳು ಇದ್ದಾರೆ. ಕಳೆದ ಲಾಕ್‌ಡೌನ್‌ ಸಮಯದಲ್ಲಿ ಟೈಲರ್‌ಗಳಿಗೆ ಪರಿಹಾರದ ಬಗ್ಗೆ ಜನಪ್ರತಿನಿಧಿಗಳು ಹೇಳಿಕೆ ನೀಡಿದರೇ ಹೊರತು ಪರಿಹಾರದ ಮೊತ್ತ ದೊರೆತಿರಲಿಲ್ಲ. ಈ ಬಾರಿ ಟೈಲರ್‌ಗಳಿಗೆ ಪರಿಹಾರ ಮೊತ್ತದ ಪ್ರಕಟಿಸಲಾಗಿದೆ.  ಇದಕ್ಕೆ ಸಂಬಂಧಿಸಿದ ನಿಯಮ ರೂಪಿಸುವಾಗ ಜಾಗರೂಕತೆ ವಹಿಸಲಿ. ಇತರ ಕೆಲವು ವಲಯಗಳಲ್ಲಿ ಆಗಿರುವಂತಹ ಸಮಸ್ಯೆ ಇಲ್ಲಿ ಆಗದಂತೆ ಗಮನ ನೀಡುವುದು ಅಗತ್ಯ.

ಕ್ಷೌರಿಕರು :

ಕಳೆದ ಬಾರಿ ಕ್ಷೌರಿಕರಿಗೆ ತಲಾ 5,000 ರೂ. ಸಹಾಯಧನ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ 992 ಮಂದಿ ಕ್ಷೌರಿಕರು ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ್ದರು.  ಈ ಪೈಕಿ 897 ಮಂದಿಗೆ ಸಹಾಯಧನ ಪಾವತಿಯಾಗಿದೆ. 59 ಮಂದಿ ಅರ್ಜಿದಾರರಿಗೆ ಪಾವತಿ ಬಾಕಿ ಇದೆ. 36 ಮಂದಿಯ ಅರ್ಜಿ ತಿರಸ್ಕೃತಗೊಂಡಿದೆ. ಪ್ಯಾಕೇಜ್‌ ಶೀಘ್ರ ಪಾವತಿಗೆ ಕ್ರಮ ಕೈಗೊಳ್ಳಲಿ.

ದ.ಕ. ಜಿಲ್ಲೆಯಲ್ಲಿ 2,000ಕ್ಕೂ  ಅಧಿಕ ಮಂದಿ ನಾಟಕ ಕಲಾವಿದರೇ ಇದ್ದಾರೆ. ಯಕ್ಷಗಾನ ಸೇರಿದಂತೆ ಇತರ ಪ್ರಕಾರಗಳಲ್ಲಿಯೂ ಸಾವಿರಾರು ಮಂದಿ ಶ್ರಮಿಸುತ್ತಿದ್ದಾರೆ. ವಿವಿಧ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪರಿಹಾರ ನೀಡುವ ಕಾರ್ಯ ಕಳೆದ ಬಾರಿ ಆಗಿದ್ದರೂ ಬೆರಳೆಣಿಕೆ ಜನರಿಗೆ ಮಾತ್ರ ಇದರಿಂದ ಲಾಭವಾಗಿದೆ. ಈ ಬಾರಿಯಾದರೂ ಎಲ್ಲರಿಗೂ ಪರಿಹಾರ ಮೊತ್ತ ಸಿಗುವಂತಾಗಲಿ. ಕಿಶೋರ್‌ ಡಿ. ಶೆಟ್ಟಿ,  ತುಳು ನಾಟಕ ಕಲಾವಿದರ ಒಕ್ಕೂಟ

ಕಳೆದ ವರ್ಷದ ಪ್ಯಾಕೇಜ್‌ನಲ್ಲಿ  ಶೇ. 50ರಷ್ಟು ಟ್ಯಾಕ್ಸಿ ಚಾಲಕರಿಗೆ ಇನ್ನೂ ಸಹಾಯಧನ ಬಂದಿಲ್ಲ. ಈ ಬಾರಿ ಸಹಾಯಧನ ಘೋಷಣೆ ಮಾಡಿದ್ದು, ಒಳ್ಳೆಯ ಬೆಳವಣಿಗೆ. ಇದರ ವಿತರಣೆ ಸಮರ್ಪಕವಾಗಿ ಆಗಲಿ. ಸಹಾಯಧನ ಪಡೆಯುವವರು ಅರ್ಜಿ ಸಲ್ಲಿಸುವಾಗ ವಾಹನಗಳ ಆರ್‌ಸಿ ಮತ್ತು ಚಾಲಕನ ಡ್ರೆçವಿಂಗ್‌ ಲೈಸನ್ಸ್‌ ಪರಿಗಣನೆಗೆ ತೆಗೆದುಕೊಂಡರೆ ಮತ್ತಷ್ಟು ಉಪಯೋಗವಾದೀತು. ದಿನೇಶ್‌ ಕುಂಪಲ, ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್‌ ಹಾಗೂ ಮ್ಯಾಕ್ಸಿಕ್ಯಾಬ್‌ ಅಸೋಸಿಯೇಶನ್‌ ಅಧ್ಯಕ್ಷ

ಪ್ರಯೋಜನವಾಗದು :

ಕಳೆದ ಬಾರಿಯ ಸ್ವ-ನಿಧಿ ಅರ್ಹ ಅನೇಕರಿಗೆ ದೊರೆತಿಲ್ಲ. ಅದಕ್ಕೆ ಅರ್ಜಿ ಸಲ್ಲಿಸುವುದಕ್ಕೇ 2,000 ರೂ. ವರೆಗೆ ಖರ್ಚಾಗುತ್ತಿತ್ತು. ಈ ಬಾರಿ ಘೋಷಿಸಿರುವ 2,000 ರೂ. ಪ್ಯಾಕೇಜ್‌ ನಿಷ್ಪ್ರಯೋಜಕ. ಸರಕಾರ 70 ವರ್ಷ ಹಿಂದೆ ಹೋದಂತಿದೆ. 2,000 ಮೊತ್ತ ಏನೇನೂ ಸಾಲದು. ಇದು ಕೂಡ ಅರ್ಹರಿಗೆ ಸಿಗುತ್ತದೆ ಎಂಬ ವಿಶ್ವಾಸವಿಲ್ಲ. ಸಂತೋಷ್‌ ಆರ್‌.ಎಸ್‌. ಉಪಾಧ್ಯಕ್ಷರು, ಬೀದಿಬದಿ ವ್ಯಾಪಾರಸ್ಥರ ಸಂಘ, ದ.ಕ. ಜಿಲ್ಲೆ

ಎಲ್ಲರಿಗೂ ಸಿಗುವಂತಾಗಲಿ ಕಳೆದ ಲಾಕ್‌ಡೌನ್‌ ಸಮಯ ದಲ್ಲಿಯೇ ಟೈಲರ್‌ಗಳಿಗೆ ಪ್ಯಾಕೇಜ್‌ ಘೋಷಿಸಬೇಕಿತ್ತು. ಉಳಿದ ಎಲ್ಲ ವರ್ಗದವರಿಗೆ ಪ್ಯಾಕೇಜ್‌ ಸಿಕ್ಕಿದರೂ ನಮಗೆ ದೊರೆತಿರಲಿಲ್ಲ. ಈ ಬಾರಿ ನಮ್ಮನ್ನು ಪ್ಯಾಕೇಜ್‌ನಡಿ ಸೇರಿಸಿದ್ದಾರೆ. ಎಲ್ಲ ಟೈಲರ್‌ಗಳಿಗೆ ಇದರ ಲಾಭ ಸಿಗಲಿ. ಪ್ರಜ್ವಲ್‌ ಕುಮಾರ್‌, ದ.ಕ. ಜಿಲ್ಲಾ ಟೈಲರ್‌ ಅಸೋಸಿಯೇಶನ್‌

ಬಿಪಿಎಲ್‌  ಮಾನದಂಡ ಬೇಡ ಕಳೆದ ಬಾರಿ ಬಿಪಿಎಲ್‌ ಮಾನದಂಡದಿಂದಾಗಿ ಅನೇಕ ಮಂದಿ ಅರ್ಹರಿದ್ದರೂ ಸಹಾಯಧನ ಪಡೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ಈ ಬಾರಿ ಸಹಾಯಧನ ಪಡೆಯಲು ಬಿಪಿಎಲ್‌ ಕಡ್ಡಾಯ ಮಾಡಬಾರದು. ಎಲ್ಲ ಕ್ಷೌರಿಕರಿಗೂ ಸರಕಾರದ ಪ್ಯಾಕೇಜ್‌ ಸಹಾಯಧನ ಸಿಗುವಂತಾಗಲಿ. ಆನಂದ ಭಂಡಾರಿ, ಜಿಲ್ಲಾಧ್ಯಕ್ಷರು, ಸವಿತಾ ಸಮಾಜ ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next