Advertisement

Namma clinic: ರೋಗಿಗಳನ್ನು ಉಚಿತವಾಗಿ ಪರೀಕ್ಷಿಸಿ ಸಲಹೆ ನೀಡಿ ಔಷಧಿಯನ್ನೂ ಕೊಡುತ್ತಾರೆ

03:51 PM Aug 14, 2023 | Team Udayavani |

ಮೈಸೂರು: ರಾಜ್ಯ ಸರ್ಕಾರದ ನಮ್ಮ ಕ್ಲಿನಿಕ್‌ಗಳು ಮೈಸೂರು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು ತುರ್ತು ಚಿಕಿತ್ಸಾ ಪರಿಕರಗಳ ಕೊರತೆ ಕಾಡುತ್ತಿದೆ.

Advertisement

ಜಿಲ್ಲೆಯ ಆರು ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್‌ಗಳಿವೆ. ಮೈಸೂರು ನಗರದ ಶ್ರೀರಾಮಪುರ, ಹೂಟಗಳ್ಳಿ, ಯರಗನಹಳ್ಳಿ, ಮೈಸೂರು ಜಿಲ್ಲೆಯ ಕೆ.ಆರ್‌.ನಗರ, ತಿ.ನರಸೀಪುರ, ಹೆಗ್ಗಡದೇವನಕೋಟೆಯಲ್ಲಿ ನಮ್ಮ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ.

ಔಷಧಿ ವಿತರಣೆ: ನಮ್ಮ ಕ್ಲಿನಿಕ್‌ಗಳಲ್ಲಿ ಪ್ರತಿದಿನ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮ ಕ್ಲಿನಿಕ್‌ಗೆ ಜ್ವರ, ಕೆಮ್ಮು, ತಲೆನೋವು, ವಾಂತಿ, ಭೇದಿ, ರಕ್ತದೊತ್ತಡ, ಮಧುಮೇಹ ರೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇಲ್ಲಿ ವೈದ್ಯರು ರೋಗಿಗಳನ್ನು ಉಚಿತವಾಗಿ ಪರೀಕ್ಷಿಸಿ ಉಚಿತವಾಗಿ ಔಷಧಿ ವಿತರಿಸುತ್ತಾರೆ. ನಮ್ಮ ಕ್ಲಿನಿಕ್‌ಗಳಲ್ಲಿ  ಔಷಧಿ ಲಭ್ಯವಿಲ್ಲದಿದ್ದರೆ ಔಷಧಿಗಳನ್ನು ಪಡೆದು ರೋಗಿಗಳಿಗೆ ವಿತರಿಸಲಾಗುತ್ತಿದೆ.

ಜಿಲ್ಲೆಯ ನಮ್ಮ ಕ್ಲಿನಿಕ್‌ಗಳಲ್ಲಿ ಪ್ರತಿ ದಿನ ಸರಾಸರಿ 70-80 ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಾರೆ. ನಮ್ಮ ಕ್ಲಿನಿಕ್‌ನಿಂದ ತಮಗೆ ಅನುಕೂಲವಾಗಿದೆ ಎಂಬುದು ಸ್ಥಳೀಯರ ಅನಿಸಿಕೆಯಾಗಿದೆ. ಜನಸಂಖ್ಯೆ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಹತ್ತಿರದಲ್ಲಿ ಸರ್ಕಾರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲದ ಕಡೆ ನಮ್ಮ ಕ್ಲಿನಿಕ್‌ ಆರಂಭಿಸಲಾಗಿದೆ ಎನ್ನುತ್ತಾರೆ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ.

ರಾತ್ರಿ 8ರವರೆಗೂ ತೆರೆಯಿರಿ: ನಮ್ಮ ಕ್ಲಿನಿಕ್‌ಗಳಲ್ಲಿ ಒಬ್ಬರು ವೈದ್ಯರು, ಸ್ಟಾಫ್ ನರ್ಸ್‌, ಲ್ಯಾಬ್‌ ಟೆಕ್ನೀಷಿಯನ್‌, ಗ್ರೂಪ್‌ ಡಿ.ನೌಕರರಿದ್ದಾರೆ. ವೈದ್ಯರು ಸೇರಿ ಎಲ್ಲರೂ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕ್ಲಿನಿಕ್‌ಗ್‌ಳು ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 4.30ರವರೆಗೆ ತೆರೆದಿರುತ್ತವೆ. ನಮ್ಮ ಕ್ಲಿನಿಕ್‌ಗಳನ್ನು ರಾತ್ರಿ 8 ಗಂಟೆವರೆಗೂ ತೆರೆದರೆ ತಮಗೆ ಅನುಕೂಲವಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.

Advertisement

ನಮ್ಮ ಕ್ಲಿನಿಕ್‌ಗಳಲ್ಲಿ ತುರ್ತು ವೇಳೆ ನೀಡುವ ಔಷಧಿಗಳು (ಎಮರ್ಜೆನ್ಸಿ ಡ್ರಗ್ಸ್‌) ಲಭ್ಯವಿಲ್ಲ. ಈ ಔಷಧಿಗಳೂ ಲಭ್ಯವಾಗಬೇಕು. ಇಲ್ಲಿ ರಕ್ತ ಪರೀಕ್ಷೆ ಮಾಡುವ ಸೌಲಭ್ಯ ಇದೆ. ರಕ್ತದ ಪರೀಕ್ಷೆಯಲ್ಲಿ ಈಗ ಮಧುಮೇಹ, ಎಚ್‌ಪಿ ಮಾತ್ರ ಪರೀಕ್ಷಿಸಲಾಗುತ್ತಿದೆ. ರಕ್ತ ಪರೀಕ್ಷೆಯಲ್ಲಿ ಥೈರಾಯ್ಡ, ಕೊಲೊಸ್ಟ್ರಾಲ್‌ ಪರೀಕ್ಷಿಸುವ ಸೌಲಭ್ಯವೂ ಬೇಕು ಎಂಬ ಬೇಡಿಕೆ ಇದೆ. ಮೂತ್ರ ಪರೀಕ್ಷೆ ಸೌಲಭ್ಯವೂ ಇಲ್ಲಿ ಲಭ್ಯವಿದೆ.

ಮೈಸೂರು ಹೊರವಲಯದ ಹೂಟಗಳ್ಳಿ ನಗರಸಭೆ ವ್ಯಾಪ್ತಿಯ ಹೂಟಗಳ್ಳಿ ನಮ್ಮ ಕ್ಲಿನಿಕ್‌ನಲ್ಲಿ ಪ್ರತಿದಿನ ಸುಮಾರು 35-40 ರೋಗಿಗಳು ಬರುತ್ತಾರೆ. ಇಲ್ಲಿ ನಾಲ್ವರು ಸಿಬ್ಬಂದಿ ಇದ್ದಾರೆ. ಒಬ್ಬರು ವೈದ್ಯರು, ಲ್ಯಾಬ್‌ ಟೆಕ್ನೀಷಿಯನ್‌, ನರ್ಸ್‌, ಡಿ.ಗ್ರೂಪ್‌ ನೌಕರರಿದ್ದಾರೆ. ನಾವು ರೋಗಿಗಳನ್ನು ಯಾವುದೇ ಶುಲ್ಕ ಪಡೆಯದೇ ಉಚಿತವಾಗಿ ಪರೀಕ್ಷಿಸುತ್ತೇವೆ. ಔಷಧಿಗಳನ್ನು ಉಚಿತವಾಗಿ ವಿತರಿಸುತ್ತೇವೆ ಎಂದು ಹೂಟಗಳ್ಳಿಯ ನಮ್ಮ ಕ್ಲಿನಿಕ್‌ ವೈದ್ಯರಾದ ಡಾ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ನಮ್ಮ ಕ್ಲಿನಿಕ್‌ಗಳು ಚೆನ್ನಾಗಿ ನಡೆಯುತ್ತಿದ್ದು ಹೆಚ್ಚಿನ ರೋಗಿಗಳು ಆಗಮಿಸುತ್ತಾರೆ. ರಕ್ತ ಪರೀಕ್ಷೆಯಲ್ಲಿ ಇನ್ನೂ ಕೆಲವು ಪರೀಕ್ಷೆ ನಡೆಸುವ ಸೌಲಭ್ಯ ನೀಡಬೇಕು. ಈ ಕ್ಲಿನಿಕ್‌ಗಳ ಸಮಯವನ್ನು ರಾತ್ರಿ 9 ಗಂಟೆವರೆಗೂ ವಿಸ್ತರಿಸಿದರೆ ರೋಗಿಗಳಿಗೆ ಇನ್ನೂ ಹೆಚ್ಚು ಅನುಕೂಲವಾಗುತ್ತದೆ.-ಜಿ.ಟಿ.ದೇವೇಗೌಡ, ಶಾಸಕರು, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ

ಜಿಲ್ಲೆಯ ನಮ್ಮ ಕ್ಲಿನಿಕ್‌ನಲ್ಲಿ ರೋಗಿಗಳಿಂದ ಯಾವುದೇ ಶುಲ್ಕ ಪಡೆಯುವುದಿಲ್ಲ. ಔಷಧಿಗಳನ್ನೂ ಉಚಿತವಾಗಿ ವಿತರಿಸುತ್ತೇವೆ. ರೋಗಿಗಳಿಂದ ಇನ್ನೂ ಕೆಲವು ಸೌಲಭ್ಯಗಳಿಗೆ ಬೇಡಿಕೆ ಇದೆ.-ಡಾ.ಪಿ.ಸಿ.ಕುಮಾರಸ್ವಾಮಿ, ಮೈಸೂರು ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ 

-ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next