ಕಾರ್ಕಳ: ಹಿಂದಿನ ರಾಜ್ಯ ಬಜೆಟ್‌ನಲ್ಲಿ ಹೈನುಗಾರರು ಸಂಗ್ರಹಿಸುವ ಹಾಲಿಗೆ ಪ್ರೋತ್ಸಾಹ ಧನ 2 ರೂ. ಹೆಚ್ಚಿಸುವುದಾಗಿ ಹೇಳಲಾಗಿತ್ತು. ಆದರೆ ಅನುಷ್ಠಾನವಾಗಿಲ್ಲ. ಜತೆಗೆ ರಾಜ್ಯ ಸರಕಾರ ಕಳೆದ ಅಗಸ್ಟ್‌ನಿಂದ ಹಾಲಿನ ಪ್ರೋತ್ಸಾಹ ಧನ ಪಾವತಿಸದೆ ಬಾಕಿ ಉಳಿಸಿದ್ದು ಹೈನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜ್ಯದಲ್ಲಿ ದಿನವಹಿ ರಾಜ್ಯ ಹಾಲು ಮಂಡಳಿಯ 15 ಹಾಲೂ ಒಕ್ಕೂಟಗಳ ವ್ಯಾಪ್ತಿಯ 17 ಸಾವಿರಕ್ಕೂ ಮಿಕ್ಕಿ ಹಾಲು ಉತ್ಪಾದಕ ಸಂಘಗಳ ಮೂಲಕ 10 ಲಕ್ಷಕ್ಕೂ ಮಿಕ್ಕಿದ ಹೈನುಗಾರ ಕುಟುಂಬಗಳ ಪರಿಶ್ರಮದಿಂದ ಸರಾಸರಿ 82 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಆದರೆ ರಾಜ್ಯ ಸರಕಾರದಿಂದ ಕಳೆದ ಅಗಸ್ಟ್‌ನಿಂದ ಹೈನುಗಾರರ ಖಾತೆಗಳಿಗೆ ಸುಮಾರು 754.4 ಕೋ.ರೂ. ಪಾವತಿಗೆ ಬಾಕಿಯಿದೆ. ಕನಿಷ್ಠ 2 ತಿಂಗಳಿಗೊಮ್ಮೆಯಾದರೂ ನಿಯಮಿತವಾಗಿ ಪ್ರೋತ್ಸಾಹ ಧನ ನೀಡಬೇಕು ಎನ್ನುವುದು ಹೈನುಗಾರರ ಆಗ್ರಹ.
2 ವರ್ಷಗಳಿಂದ ಏರುತ್ತಿರುವ ಹಾಲು ಉತ್ಪಾದನ ಖರ್ಚು ವೆಚ್ಚಗಳಿಂದ ಹೈನು ಗಾರರು ಈ ಕಸುಬಿನಿಂದ ವಿಮುಖರಾಗುತ್ತಿದ್ದು, ರಾಜ್ಯದ ಹಲವು ಒಕ್ಕೂಟಗಳಲ್ಲಿ ಹಾಲಿನ ಉತ್ಪಾದನೆ ಬೇಡಿಕೆಗಿಂತ ತುಂಬಾ ಕಡಿಮೆಯಾಗಿ ಒಕ್ಕೂಟ ಮತ್ತು ಹೈನುಗಾರ ನಷ್ಟ ಅನುಭವಿಸುತ್ತಿದ್ದಾರೆ. ಈ ಮಾಹಿತಿ ಇದ್ದರೂ ಸರಕಾರ ಪೂರಕ ಕ್ರಮ ಕೈಗೊಂಡಿಲ್ಲ.
ನಂದಿನಿ ಪಶು ಆಹಾರದ ಬೆಲೆ ಆಗಾಗ ಏರುತ್ತಿದ್ದು, ಸರಕಾರವು ಪಶು ಆಹಾರ ಕೆಜಿ ಒಂದಕ್ಕೆ ಕನಿಷ್ಠ 5 ರೂ. ಸಬ್ಸಿಡಿ ನೀಡುವ ಮೂಲಕ ನಿರಂತರ ಹೆಚ್ಚಳದ ಹೊರೆಯನ್ನು ಇಳಿಸಿ ಹೈನುಗಾರರಿಗೆ ತುಸು ಸಾಂತ್ವನ ನೀಡಬೇಕು ಎನ್ನುವ ಒತ್ತಾಯವೂ ಇದೆ. ರಾಜ್ಯದಲ್ಲಿ ಸರಕಾರಿ ಪಶುವೈದ್ಯರ ಸಾವಿರಾರು ಹು¨ªೆಗಳು ಖಾಲಿ ಇದ್ದು ಭರ್ತಿಗೊಳಿಸಿ ಹೈನುಗಾರಿಕೆ ಕ್ಷೇತ್ರಕ್ಕೆ ಬಲ ತುಂಬುದರ ಜತೆಗೆ ಹೈನುಗಾರರ ಬೆಂಬಲಕ್ಕೆ ಸರಕಾರ ನಿಲ್ಲಬೇಕಿದೆ. ಬಾಕಿ ಇರುವ ಪ್ರೋತ್ಸಾಹ ಧನವನ್ನು ಕೂಡಲೇ ಏಕಗಂಟಿನಲ್ಲಿ ಪಾವತಿಸಿ ಹೈನುಗಾರರಲ್ಲಿ ಜೀವನೋತ್ಸಾಹ ತುಂಬಬೇಕಿದೆ.
ಲಕ್ಷಾಂತರ ಹೈನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರ ನೆರವಿಗೆ ಬರಬೇಕು. ಬಾಕಿ ಪ್ರೋತ್ಸಾಹಧನ ನೀಡುವ ಜತೆಗೆ ಹಿಂದಿನ ಬಜೆಟ್‌ನಲ್ಲಿ ಪ್ರೋತ್ಸಾಹಧನ 2 ರೂ. ಹೆಚ್ಚಿಸುವುದಾಗಿ ಹೇಳಿದ್ದ ಭರವಸೆಯನ್ನು ಈಡೇರಿಸಬೇಕು.
– ಸಾಣೂರು ನರಸಿಂಹ ಕಾಮತ್,
ಸಂಚಾಲಕ, ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಠ
-ಬಾಲಕೃಷ್ಣ ಭೀಮಗುಳಿ