ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವ ಸಲುವಾಗಿ ಸರ್ಕಾರಿ ಅನುದಾನಿತ, ಅನುದಾನ ರಹಿತ ಶಾಲೆಗಳನ್ನು ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಟಿಯಿಂದ ಸರ್ಕಾರ ಮುಚ್ಚಲು ಕ್ರಮ ಕೈಗೊಂಡಿದೆ. ಆದರೆ ಜಿಲ್ಲೆಯಲ್ಲಿ ಕಳೆದ 4 ತಿಂಗಳಿಂದ ವಿದ್ಯಾರ್ಥಿಗಳಿಗೆ ದವಸ ಧಾನ್ಯಗಳ ಭಾಗ್ಯ ಇಲ್ಲದಂತಾಗಿದೆ.
4 ತಿಂಗಳಿಂದ ಆಹಾರ ಧಾನ್ಯವಿಲ್ಲ: ಅಕ್ಷರ ದಾಸೋಹ ಬಿಸಿಯೂಟ ಯೋಜನೆಯಡಿ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆ ಜಾರಿಯಲ್ಲಿದೆ. ಆದರೆ ಕೋವಿಡ್ ಸೋಂಕಿನಿಂದ ಶಾಲೆಗಳು ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳಿಗೆ ಬಿಸಿಯೂಟದ ಯೋಜನೆಯ ಭಾಗ್ಯ ಇಲ್ಲದಂತಾಗಿರುವುದರ ಜೊತೆಗೆ ಕಳೆದ 4 ತಿಂಗಳಿಂದ ಆಹಾರ ಧಾನ್ಯ ಭಾಗ್ಯವು ಸಹ ಇಲ್ಲದಂತಾಗಿದೆ.
ಆಹಾರ ಧಾನ್ಯ ಸರಬರಾಜು ಸ್ಥಗಿತ: ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಆರಂಭ ವರ್ಷದಲ್ಲಿ ಅಂದರೆ ಏಪ್ರಿಲ್, ಮೇ ತಿಂಗಳಲ್ಲಿ ಆಹಾರ ಧಾನ್ಯಗಳನ್ನು ಶಾಲಾ ಅಭಿವೃದ್ಧಿ ಸಮಿತಿಗಳ ಮೂಲಕ ವಿತರಿಸಲಾಗಿದೆ. ಆದರೆ ತದನಂತರ ಸರ್ಕಾರದಿಂದ ಆಹಾರ ಧಾನ್ಯಗಳು ಸರಬರಾಜು ಸ್ಥಗಿತಗೊಂಡಿದ್ದು, ಸಂಬಂಧಿಸಿದ ಇಲಾಖಾಧಿಕಾರಿಗಳು ಸರ್ಕಾರಕ್ಕೆ ಆಹಾರ ಧಾನ್ಯವನ್ನು ಪೂರೈಕೆ ಮಾಡಲು ಹಿರಿಯ ಅಧಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಿದ್ದು, ಕಳೆದ 4 ತಿಂಗಳಿಂದ ಆಹಾರ ಧಾನ್ಯಗಳ ಭಾಗ್ಯದಿಂದ ವಿದ್ಯಾರ್ಥಿಗಳು ವಂಚಿತಗೊಂಡಿದ್ದಾರೆ.
ಜೂನ್‌ನಿಂದ ಇಲ್ಲ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಕೋವಿಡ್-19 ಸಂಕಷ್ಟದ ಪರಿಸ್ಥಿತಿ ನಿವಾರಿಸಲು ಬರಪೀಡಿತ ಮತ್ತು ಬರಪೀಡಿತ ರಹಿತ ತಾಲೂಕುಗಳಲ್ಲಿ ಸರ್ಕಾರಿ ಅನುದಾನಿತ 1,636 ಶಾಲೆಗಳ 96,434 ವಿದ್ಯಾರ್ಥಿಗಳಿಗೆ ಮಾರ್ಚ್, ಏಪ್ರಿಲ್, ಮೇ ತಿಂಗಳ ಅಂತ್ಯದವರೆಗೆ ಆಹಾರ ಧಾನ್ಯಗಳ ಕಿಟ್‌ನ್ನು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸಲಾಗಿದೆ. ಇನ್ನುಳಿದಂತೆ ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ವಿದ್ಯಾರ್ಥಿಗಳಿಗೆ ಆಹಾರ ಭಾಗ್ಯ ಇಲ್ಲದಂತಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಏಪ್ರಿಲ್ -ಮೇ ತಿಂಗಳಲ್ಲಿ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗಿದೆ. ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್, ತಿಂಗಳ ಅಕ್ಷರ ದಾಸೋಹ ಬಿಸಿಯೂಟ ಯೋಜನೆಯ ಆಹಾರ ಧಾನ್ಯಗಳನ್ನು ಬಿಡುಗಡೆ ಮಾಡಲು ಇಲಾಖೆಯ ಹಿರಿಯ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆಹಾರ ಧಾನ್ಯ ಬಿಡುಗಡೆ ಬಳಿಕ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.
–ಜಿ.ರಘುನಾಥ್‌ರೆಡ್ಡಿ, ಜಿಲ್ಲಾ ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ
ಕೋವಿಡ್ ಸೋಂಕಿನ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ಸರಬರಾಜು ನಿಲ್ಲಿಸಿದ್ದರಿಂದ ತೊಂದರೆ ಯಾಗಿದೆ. ಕೇಂದ್ರ, ರಾಜ್ಯ ಸರ್ಕಾರ ಪಡಿತರಚೀಟಿಗೆ ಆಹಾರ ಸಾಮಗ್ರಿ ವಿತರಣೆ ಮಾಡುತ್ತಿದೆ. ಸರ್ಕಾರಿ, ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಆಹಾರಧಾನ್ಯ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು.
– ಜಾಬೀರ್ ಪಾಷ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ, 1ನೇ ಕಾರ್ಮಿಕ ನಗರ , ಉ.ಕಿ.ಪ್ರಾ.ಶಾಲೆ, ಶಿಡ್ಲಘಟ್ಟ
– ಎಂ.ಎ.ತಮೀಮ್ ಪಾಷ