ದಾವಣಗೆರೆ: ಲೋಕಸಭೆ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಇದಕ್ಕಾಗಿ “ಆಪರೇಷನ್ ಕಮಲ’ ಮಾಡುವುದಿಲ್ಲ. ಬದಲಾಗಿ ಕಾಂಗ್ರೆಸ್ ಶಾಸಕರೇ ಬೇಸತ್ತು ರಾಜೀನಾಮೆ ನೀಡಿ ಸರ್ಕಾರ ಪತನಕ್ಕೆ ಕಾರಣರಾಗಲಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯದಲ್ಲಿ ಭೀಕರ ಬರಗಾಲವಿದ್ದು ಜನ ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ನಿಗಮ ಅಧ್ಯಕ್ಷ ಸ್ಥಾನಕ್ಕಾಗಿ ಕಚ್ಚಾಟ ನಡೆದಿದೆ.
ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಬೇಸತ್ತು ಪತ್ರ ಬರೆಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರೇಳು ತಿಂಗಳು ಕಳೆದರೂ ಇನ್ನೂ ಸರ್ಕಾರ ಟೇಕಾಫ್ ಆಗಿಯೇ ಇಲ್ಲ. ಇದನ್ನೆಲ್ಲ ನೋಡಿದರೆ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದರು.
ಜಾತಿಗಣತಿಗೆ ತಮ್ಮ ವಿರೋಧ ಇಲ್ಲ. ಆದರೆ, ಅವೈಜ್ಞಾನಿಕ ವರದಿ ಒಪ್ಪಲು ಸಾಧ್ಯವಿಲ್ಲ. ಆಡಳಿತ ಪಕ್ಷದ ಡಿಸಿಎಂ, ಶಾಸಕರು ಹಾಗೂ ವೀರಶೈವ ಮಹಾಸಭಾದ ಶಾಮನೂರು ಶಿವಶಂಕರಪ್ಪ ಸೇರಿದಂತೆ ಸರ್ಕಾರದ ಸಚಿವರೇ ವಿರೋಧ ಮಾಡಿದ್ದಾರೆ.
ನ್ಯಾ|ಕಾಂತರಾಜು ವರದಿ ಸರಿಯಿಲ್ಲ. ಯಾರ ಮನೆಗೂ ಹೋಗಿ ಸಮೀಕ್ಷೆ ಮಾಡಿಲ್ಲ. ಇದು ಅವೈಜ್ಞಾನಿಕ ಸರಿಯಾದ ರೀತಿ ಸಮೀಕ್ಷೆ ಮಾಡಿ ಅದರ ಆಧಾರದಲ್ಲಿ ವರದಿ ನೀಡಬೇಕು ಎಂದರು.
ಜಮೀರ್ ಅಹಮದ್ ಖಾನ್ ತಾವು ಸಚಿವರು ಎಂಬುದನ್ನು ಮರೆತು ಮಾತನಾಡುವುದು ಸರಿಯಲ್ಲ. ಅವರು ಸಭಾಪತಿ ಹುದ್ದೆಗೆ ಅಪಮಾನ ಮಾಡಿದ್ದಾರೆ. ಅವರ ಹೇಳಿಕೆ ಖಂಡನೀಯ ಎಂದ ರೇಣುಕಾಚಾರ್ಯ, ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಲಿದೆ. ತೆಲಂಗಾಣ ಹಾಗೂ ಮಿಜೋರಾಂನಲ್ಲಿ ಪೈಪೋಟಿ ನೀಡಿದೆ ಎಂದರು.