ದಾವಣಗೆರೆ: ಶಿವಮೊಗ್ಗ ಗಲಭೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ಮಾರ್ಜಾಲ ನ್ಯಾಯದ ರೀತಿ ನಡೆದುಕೊಳ್ಳುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಶಿವಮೊಗ್ಗ ಗಲಭೆ ವಿಚಾರದಲ್ಲಿ ಸರ್ಕಾರ ಮತಾಂಧರಂತೆ ವರ್ತಿಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು.
ಆದರೆ, ಯಾರು ದೌರ್ಜನ್ಯಕ್ಕೊಳಗಾಗಿದ್ದಾರೋ ಅವರ ಮೇಲೆ ಪ್ರಕರಣ ದಾಖಲಿಸಿ ನಿನಗೂ ಸರಿ ಮಾಡಿದ್ದೇನೆ. ಅವನಿಗೂ ಸರಿಮಾಡಿದ್ದೇನೆ ಎಂದು ಮಾರ್ಜಾಲ ನ್ಯಾಯ ಮಾಡುತ್ತಿದೆ. ಸರ್ಕಾರದ ಈ ರೀತಿಯ ನ್ಯಾಯದಿಂದ ಮತಾಂಧತೆಗೆ ಕುಮ್ಮಕ್ಕು ಸಿಕ್ಕಂತಾಗಿದೆ. ಶಿವಮೊಗ್ಗದಲ್ಲಿ ಔರಂಗಜೇಬ್, ಟಿಪ್ಪು ಫೋಟೋ ಹಾಕಿ ವೈಭವೀಕರಿಸಲು ಬಿಟ್ಟಿದ್ದೇ ದೊಡ್ಡ ಅಪರಾಧ. ಟಿಪ್ಪು ಫೋಟೋ ಹಾಕುವ ಮೂಲಕವೇ ಮತಾಂಧರು ಸಂದೇಶ ಕೊಟ್ಟಿದ್ದರು. ಆದರೆ, ಸರ್ಕಾರ ಅದಕ್ಕೆ ಕಡಿವಾಣ ಹಾಕಿಲ್ಲ ಎಂದರು.
ಬಿಜೆಪಿಯವರೇ ವೇಷ ಹಾಕಿಕೊಂಡು ಹೋಗಿ ಗಲಾಟೆ ಮಾಡಿದ್ದಾರೆಂಬ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನಿರಾಧಾರ. ತಲೆಕೆಟ್ಟವರು ಸಹ ಹೀಗೆ ಮಾತನಾಡಲ್ಲ. ಅವರು ಹಿರಿಯರು ತಲೆ ಕೆಟ್ಟವರ ಥರ ಮಾತನಾಡಬಾರದು. ಬಿಜೆಪಿಯವರು ನಕಲಿ ಹಿಂದೂಗಳು ಎಂದು ಟೀಕಿಸುತ್ತಿದ್ದಾರೆ. ಕಾಂಗ್ರೆಸ್ಸಿನವರೇ ಅಸಲಿ ಹಿಂದೂಗಳು. ಆದ್ದರಿಂದ ಅವರು ಹಣೆಗೆ ಕುಂಕುಮ, ಭಗವಾಧ್ವಜ, ಕೇಸರಿ ಶಾಲು ವಿರೋಧಿಸುತ್ತಿದ್ದಾರೆ! ನಾವು ನಕಲಿ ಹಿಂದೂಗಳು ಕೇಸರಿ ಶಾಲು ಹಾಕಿ ಓಡಾಡುತ್ತಿದ್ದೇವೆ. ಅಸಲಿ ಹಿಂದೂಗಳಿಗೆ ಟಿಪ್ಪು, ಔರಂಗಜೇಬ್ ಎಂದರೆ ಪ್ರೀತಿ. ನಾಳೆ ಬಿನ್ ಲಾಡೆನ್ ಅಂದರೂ ಅವರಿಗೆ ಪ್ರೀತಿ. ನಕಲಿ ಹಿಂದೂಗಳಿಗೆ ದೇಶದ ಮೇಲೆ ಪ್ರೀತಿ. ಹಾಗಾಗಿ ಭಾರತ ಮಾತಾ ಕಿ ಜೈ ಎನ್ನುತ್ತಿದ್ದೇವೆ ಎಂದು ವ್ಯಂಗ್ಯವಾಡಿದರು.
ವೈಯಕ್ತಿಕ ಹಿತಾಸಕ್ತಿಗಾಗಿ ವಿರೋಧ: ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದನ್ನು ಕೆಲವರು ವಿರೋಧಿಸಲು ಅವರ ವೈಯಕ್ತಿಕ ಅಜೆಂಡಾ ಇರುವುದೇ ಕಾರಣ. ನಾವು ಯಾವತ್ತೂ ವೈಯಕ್ತಿಕ ಅಜೆಂಡಾ ಜತೆಗೆ ಇಲ್ಲ. ನಾವು ಪಕ್ಷದ ಅಜೆಂಡಾ ಜತೆ ಇದ್ದೇವೆ. ಇದುವರೆಗೆ ನಾವು ಪಕ್ಷದ ಅಜೆಂಡಾ ಇಟ್ಟುಕೊಂಡು ರಾಜಕಾರಣ ಮಾಡಿಕೊಂಡು ಬಂದಿದ್ದೇವೆಯೇ ಹೊರತು ವೈಯಕ್ತಿಕ ಅಜೆಂಡಾ ಇಟ್ಟುಕೊಂಡು ರಾಜಕಾರಣ ಮಾಡಿಲ್ಲ. ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದೇ ನಮ್ಮ ನಿರ್ಧಾರ ಎಂದರು.
ಜೆಡಿಎಸ್ ಜತೆಗಿನ ಮೈತ್ರಿಗೆ ಎಸ್.ಟಿ. ಸೋಮಶೇಖರ್ ಅಪಸ್ವರ ವ್ಯಕ್ತಪಡಿಸಿದ್ದಾರೆ. ಅಧಿಕಾರ ಇಲ್ಲದೇ ಇದ್ದರೆ ಕೆಲವರಿಗೆ ಉಸಿರು ಕಟ್ಟುತ್ತದೆ. ನಾವೆಲ್ಲ ಸಿದ್ಧಾಂತಕ್ಕೋಸ್ಕರ ರಾಜಕಾರಣ ಮಾಡುತ್ತಿದ್ದವರು. ಅಧಿಕಾರ ಇರಲಿ, ಇಲ್ಲದೇ ಇರಲಿ ಸಿದ್ಧಾಂತ ಇಟ್ಟುಕೊಂಡು ಹೋಗುತ್ತೇವೆ. ಕೆಲವರಿಗೆ ಅಧಿಕಾರ ಇದ್ದರೆ ಮಾತ್ರ ಒಳ್ಳೆಯ ಏರ್‌ಕಂಡಿಶನ್‌ನಲ್ಲಿ ಆರಾಮಾಗಿರುತ್ತಾರೆ. ಅಧಿಕಾರ ಇಲ್ಲದಿದ್ದಾಗ ವಿಲವಿಲ ಒದ್ದಾಡುತ್ತಾರೆ. ನಾವು ಅಧಿಕಾರ ಇದ್ದಾಗಲೂ ವಿಚಾರ ಬಿಟ್ಟು ರಾಜಕಾರಣ ಮಾಡಿಲ್ಲ. ಅಧಿಕಾರ ಇಲ್ಲದಾಗಲೂ ವಿಚಾರ ಬಿಟ್ಟು ರಾಜಕಾರಣ ಮಾಡುವ ಪ್ರಶ್ನೆಯೇ ಇಲ್ಲ ಎಂದರು.