ಬೆಂಗಳೂರು: ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ತಲಾ 2.50 ರೂ. ಇಳಿಕೆ ಮಾಡಿರುವುದರಿಂದ ಜನರಿಗೆ ದೊಡ್ಡ ಪರಿಹಾರ ಸಿಕ್ಕಂತಾಗಿದೆ ಎಂದಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಕೂಡಲೇ ರಾಜ್ಯ ಸರ್ಕಾರವೂ ತಲಾ 2.50 ರೂ. ಇಳಿಕೆ ಮಾಡುವ ಮೂಲಕ ಜನರಿಗೆ ನೆರವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಗುರುವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೇಂದ್ರ ಸರ್ಕಾರಕ್ಕೆ ಪೆಟ್ರೋಲ್, ಡೀಸೆಲ್ ಮಾರಾಟದಿಂದ ಸಂಗ್ರಹವಾಗುವ ಸುಂಕ ಆದಾಯ ನಿಗದಿತ ಪ್ರಮಾಣದಲ್ಲಿದೆ. ಹಾಗಿದ್ದರೂ ದರ ಇಳಿಕೆ ಮಾಡಿ ಸರಿಯಾದ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರಕ್ಕೆ ಪೆಟ್ರೋಲ್, ಡೀಸೆಲ್ ಮಾರಾಟದಿಂದ ಸಂಗ್ರಹವಾಗುವ ಆದಾಯವು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಗೆ ಅನುಗುಣವಾಗಿ ಹೆಚ್ಚುತ್ತದೆ. ಹಾಗಾಗಿ ರಾಜ್ಯ ಸರ್ಕಾರಕ್ಕೂ ಹೆಚ್ಚಿನ ಜವಾಬ್ದಾರಿ ಇದೆ. ಉದಾಹರಣೆಗೆ ತಿಂಗಳ ಹಿಂದೆ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ತೈಲ ಬೆಲೆ 60 ಡಾಲರ್ ಇದ್ದುದು, ಈಗ 85 ಡಾಲರ್‌ಗೆ ಏರಿಕೆಯಾಗಿದೆ. ಇದಕ್ಕೆ ಅನುಗುಣವಾಗಿ ರಾಜ್ಯಕ್ಕೂ ಹೆಚ್ಚು ತೆರಿಗೆ ಸಂಗ್ರಹವಾಗಲಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಿದರೆ ಹೆಚ್ಚುವರಿ ತೆರಿಗೆ ಪ್ರಮಾಣದಲ್ಲಿ ಕಡಿತವಾಗಲಿದೆಯೇ ಹೊರತು ಯಾವುದೇ ಹೊರೆ ಬೀಳುವುದಿಲ್ಲ. ಆದರೆ ಕೇಂದ್ರ ಸರ್ಕಾರಕ್ಕೆ ನಿಗದಿತ ಪ್ರಮಾಣದಲ್ಲಿ ತೆರಿಗೆ ಬರುವುದರಿಂದ ಆರ್ಥಿಕ ನಿರ್ವಹಣೆ ಮೇಲೆ ಹೊಡೆತ ಬೀಳಲಿದೆ. ಬೆಲೆ ಇಳಿಕೆಯಿಂದಾಗಿ ಕೇಂದ್ರ ಸರ್ಕಾರಕ್ಕೆ 21,000 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದು ಹೇಳಿದ್ದಾರೆ.
ಬೇಜವಾಬ್ದಾರಿ ಹೇಳಿಕೆ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಅವರು ಇತ್ತೀಚೆಗೆ ತೈಲ ಬೆಲೆ ಇಳಿಕೆ ಮಾಡಿದ್ದು 46 ಪೈಸೆಯೇ ಹೊರತು 2 ರೂ. (ಬಜೆಟ್‌ನಲ್ಲಿ 2 ರೂ. ಏರಿಕೆ ಮಾಡಲಾಗಿತ್ತು) ಇಳಿಕೆ ಮಾಡಿಲ್ಲ. ತೈಲ ಬೆಲೆ ವಿಚಾರದಲ್ಲಿ ಕುಮಾರಸ್ವಾಮಿಯವರು ಜನರ ತೊಂದರೆಗೆ ಸ್ಪಂದಿಸಬೇಕೆ ಹೊರತು ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಈಗಾಗಲೇ ಮಹಾರಾಷ್ಟ್ರವು ಕೇಂದ್ರ ಸರ್ಕಾರದ 2.50 ರೂ. ದರ ಇಳಿಕೆ ಜತೆಗೆ ರಾಜ್ಯ ಸರ್ಕಾರದಿಂದಲೂ 2.50 ರೂ. ಇಳಿಕೆ ಮಾಡಿದೆ. ಹಾಗಾಗಿ ರಾಜ್ಯ ಸರ್ಕಾರವೂ ಕೂಡಲೇ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 2.50 ರೂ. ಇಳಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.