ಬೆಂಗಳೂರು: ಒಳಮೀಸಲಾತಿ ನೀಡಲು ಸುಪ್ರೀಂ ಕೋರ್ಟ್ ಆಯಾ ರಾಜ್ಯಗಳಿಗೆ ಅವಕಾಶ ನೀಡಿದ ಬೆನ್ನಲ್ಲೇ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ಸಂಬಂಧ ರಾಜ್ಯ ಸರಕಾರದ ಮೇಲೆ ಒತ್ತಡ ಶುರುವಾಗಿದೆ.
ತೀರ್ಪಿನ ಮರುದಿನವೇ ಪರಿಶಿಷ್ಟ ಜಾತಿ ಎಡಗೈ ಸಮುದಾಯದ ಸಚಿವರು ಸೇರಿ ಹಲವು ನಾಯಕರು, ಸಿಎಂ-ಡಿಸಿಎಂ ಭೇಟಿಯಾಗಿ, ತತ್‌ಕ್ಷಣ ಒಳಮೀಸಲಾತಿ ಜಾರಿಗೆ ಒತ್ತಾಯಿಸಿದರು.
ವಿಧಾನಸಭಾ ಚುನಾವಣ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ನೀಡುವುದಾಗಿ ಭರವಸೆ ನೀಡಲಾಗಿದೆ. ಈಗ ಸುಪ್ರೀಂ ಕೋರ್ಟ್ ತೀರ್ಪು ಕೂಡ ಬಂದಾಗಿದೆ. ಆದಷ್ಟು ಬೇಗ ಒಳಮೀಸಲಾತಿ ಜಾರಿಗೊಳಿಸಬೇಕು. ಅಲ್ಲಿಯವರೆಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದಿಂದ ಆಗಸ್ಟ್ 25ರಂದು ನಡೆಸಲು ಉದ್ದೇಶಿಸಿರುವ ಕೆಎಎಸ್ ಪೂರ್ವಭಾವಿ ಪರೀಕ್ಷೆ ಒಳಗೊಂಡಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸಂಬಂಧಿಸಿದ ಎಲ್ಲ ಯೋಜನೆಗಳನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಮುನಿಯಪ್ಪ, ಸುಪ್ರೀಂ ಕೋರ್ಟ್ ತೀರ್ಪು ಅತ್ಯಂತ ಸ್ವಾಗತಾರ್ಹವಾಗಿದೆ. ದಶಕಗಳ ಹೋರಾಟಕ್ಕೆ ಜಯ ಸಂದಿದೆ. ಈಗಾಗಲೇ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಬಗ್ಗೆ ಹೇಳಿದ್ದೆವು. ಅಧಿವೇಶನದಲ್ಲೂ ಮುಖ್ಯಮಂತ್ರಿಗಳು ಇದಕ್ಕೆ ಕಂಕಣಬದ್ಧವಾಗಿರುವುದಾಗಿ ಹೇಳಿದ್ದಾರೆ. ಮೀಸಲಾತಿ ಕಲ್ಪಿಸುವ ಮೂಲಕ ಅಸಮಾನತೆ ಹೋಗಲಾಡಿಸಲಾಗುವುದು ಎಂದು ಅವರು ಹೇಳಿದರು.
ಶಿಫಾರಸು, ಪತ್ರದ ಆಧಾರದಲ್ಲಿ ವರ್ಗೀಕರಣ?:
ಒಳಮೀಸಲಾತಿ ಕಲ್ಪಿಸುವುದರಿಂದ ಯಾವ ಜಾತಿಗಳಿಗೂ ಅನ್ಯಾಯ ಆಗುವುದಿಲ್ಲ. ಜನಸಂಖ್ಯೆಗೆ ಆಧಾರದಲ್ಲಿ ಮೀಸಲಾತಿ ಕಲ್ಪಿಸ ಬೇಕು ಅಂತ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬರಲಾಗಿದೆ. ಅಗತ್ಯಬಿದ್ದರೆ ಅಧ್ಯಾದೇಶದ ಮೂಲಕ ಜಾರಿಗೆ ತರಬೇಕು ಎಂದು ಮನವಿ ಮಾಡುವುದಾಗಿ ಎಂದು ಅವರು ತಿಳಿಸಿದರು.