Advertisement

ನಿನ್ನೆಯ ತನಕದ ಎಲ್ಲ ಕಳ್ಳಗಿವಿಯೂ ತನಿಖೆ

10:01 AM Aug 21, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿನ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಕೇಂದ್ರ ತನಿಖಾ ದಳಕ್ಕೆ ತನಿಖೆಗೆ ಶಿಫಾರಸು ಮಾಡಿ ಆದೇಶ ಜಾರಿಗೊಳಿಸಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕದ್ದಾಲಿಕೆ ಪ್ರಕರಣಗಳು ತನಿಖೆ ವ್ಯಾಪ್ತಿಗೆ ಬರಲಿವೆ.

Advertisement

ರಾಜ್ಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು, ಅವರ ಆಪ್ತರು, ಸರ್ಕಾರಿ ಅಧಿಕಾರಿಗಳ ದೂರವಾಣಿ ಕದ್ದಾಲಿಕೆ ಆಗಿರುವ ಬಗ್ಗೆ ಬೆಂಗಳೂರು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದರ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತ, ಪ್ರತಿಪಕ್ಷದ ನಾಯಕರು, ಅವರ ಆಪ್ತರು, ಸರ್ಕಾರಿ ಅಧಿಕಾರಿಗಳ ದೂರವಾಣಿಗಳನ್ನು ಕಾನೂನು ಬಾಹಿರವಾಗಿ ಕದ್ದಾಲಿಸಿರುವುದರಿಂದ ಅವರ ಖಾಸಗಿ ಜೀವನಕ್ಕೆ ಧಕ್ಕೆಯುಂಟು ಮಾಡುವಂತಿದೆ. ಹೀಗಾಗಿ ಈ ಪ್ರಕರಣವನ್ನು ಸ್ವತಂತ್ರ ಸಂಸ್ಥೆಯ ಮೂಲಕ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಶಿಫಾರಸು ಮಾಡಿದ್ದರು.

ಅವರ ಶಿಫಾರಸಿನ ಆಧಾರದಲ್ಲಿ ರಾಜ್ಯ ಗೃಹ ಇಲಾಖೆ ಉಪ ಕಾರ್ಯದರ್ಶಿ ಬಿ.ಎಸ್‌. ಶ್ರೀನಿವಾಸ್‌ ಅಧಿಕೃತ ಆದೇಶ ಹೊರಡಿಸಿದ್ದು, 2018 ರ ಆಗಸ್ಟ್‌ 1ರಿಂದ 2019 ರ ಆಗಸ್ಟ್‌ 19 ರವರೆಗಿನ ರಾಜ್ಯದ ಆಡಳಿತ ಪಕ್ಷದ ನಾಯಕರು, ಪ್ರತಿಪಕ್ಷಗಳ ನಾಯಕರು, ಅವರ ಆಪ್ತರು, ಸಂಬಂಧಿಕರು, ಅಧಿಕಾರಿಗಳ ದೂರವಾಣಿ ಕರೆಗಳನ್ನು ಕಾನೂನು ಬಾಹಿರವಾಗಿ ಕದ್ದಾಲಿಕೆ ಮಾಡಿರುವುದನ್ನು ಸಿಬಿಐ ತನಿಖೆ ನಡೆಸುವಂತೆ ಅಧಿಕೃತ ಆದೇಶದಲ್ಲಿ ತಿಳಿಸಿದ್ದಾರೆ.

ಇಂಡಿಯನ್‌ ಟೆಲಿಗ್ರಾಫ್ ಕಾಯ್ದೆ 2000 ರ 72ನೇ ಕಲಂ ಪ್ರಕಾರ ಬೆಂಗಳೂರು ಸೈಬರ್‌ ಕ್ರೈಂ ಪೊಲೀಸ್‌ ಸ್ಟೇಷನ್‌ನಲ್ಲಿ ದಾಖಲಾಗಿರುವ ಪ್ರಕರಣದ ಆಧಾರದಲ್ಲಿ ಸಿಬಿಐ ಈ ತನಿಖೆ ನಡೆಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಈ ತನಿಖೆಗೆ ರಾಜ್ಯ ಸರ್ಕಾರದ ಅಧಿಕಾರಿಗಳು, ಸಂಬಂಧ ಪಟ್ಟ ಇಲಾಖೆಗಳು ಅಗತ್ಯ ಮಾಹಿತಿಯನ್ನು ಸಿಬಿಐಗೆ ನೀಡಿ ತನಿಖೆಗೆ ಸಹಕಾರ ನೀಡುವಂತೆ ಸೂಚಿಸಲಾಗಿದೆ.

ಹೆಚ್ಚಿದ ಆರೋಪ-ಪ್ರತ್ಯಾರೋಪ: ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಪ್ರಕರಣವನ್ನು ತನಿಖೆಗೆ ವಹಿಸಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ ಎಂಬುದೇ ರಾಜಕೀಯ ವಲಯದಲ್ಲಿ ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ. ಜತೆಗೆ, ಕಾಂಗ್ರೆಸ್‌ ಈಗ ತನ್ನ ನಿಲುವು ಬದಲಾಯಿಸಿ ಫೋನ್‌ ಟ್ಯಾಪಿಂಗ್‌ ಪ್ರಕರಣದ ಜೊತೆಗೆ ಆಪರೇಷನ್‌ ಕಮಲದ ತನಿಖೆಯನ್ನೂ ಸಿಬಿಐಗೆ ವಹಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಆರಂಭಿಸಿದೆ.

Advertisement

ಸಿದ್ದರಾಮಯ್ಯ ಅವರು ಸಿಬಿಐ ತನಿಖೆಗೆ ಸ್ವಾಗತ ಮಾಡಿರುವುದು ಸ್ವತಃ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರಲ್ಲಿ ಅಸಮಾಧಾನಕ್ಕೂ ಕಾರಣವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯಲ್ಲಿ, ಟೆಲಿಫೋನ್‌ ಕದ್ದಾಲಿಕೆ ಪ್ರಕರಣವನ್ನು ತಾವು ಸಿಬಿಐನಿಂದ ತನಿಖೆ ನಡೆಸುವಂತೆ ಎಲ್ಲಿಯೂ ಆಗ್ರಹಿಸಿಲ್ಲ. ಮುಖ್ಯಮಂತ್ರಿಗಳು ಸುಳ್ಳು ಹೇಳಿದ್ದು, ರಾಜ್ಯದ ತನಿಖಾ ಸಂಸ್ಥೆಗಳಿಂದಲೇ ತನಿಖೆ ನಡೆಸಬಹುದಿತ್ತು ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ತಮ್ಮ ಅಧಿಕಾರದಲ್ಲಿ ಆತ್ಮ ಸಾಕ್ಷಿಗೆ ತಕ್ಕಂತೆ ನಡೆದುಕೊಂಡಿರುವುದಾಗಿ ಹೇಳಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರೂ ಕೂಡ ಈ ಪ್ರಕರಣವನ್ನು ಅನಗತ್ಯವಾಗಿ ಎಳೆಯಲಾಗುತ್ತಿದೆ. ಸುಪ್ರೀಂ ಕೋರ್ಟ್‌ ಕೂಡ ಫೋನ್‌ ಕದ್ದಾಲಿಕೆ ತಪ್ಪಲ್ಲ ಎಂದು ಹೇಳಿದೆ ಎಂದು ಪ್ರಕರಣವನ್ನು ಸಿಬಿಐಗೆ ನೀಡಿರುವ ಬಗ್ಗೆ ಪರೋಕ್ಷ ಅಸಮಾಧಾನ ಹೊರ ಹಾಕಿದ್ದಾರೆ.

ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಅವರೂ, ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ವಿರುದ್ಧ ಕದ್ದಾಲಿಕೆ ಆರೋಪ ಮಾಡಿದ್ದಾರೆ.

ಸಿಬಿಐ ತನಿಖೆಗೆ ಪ್ರಮುಖ ಅಂಶಗಳು

ಇಂಡಿಯನ್‌ ಟೆಲಿಗ್ರಾಫ್ ಆ್ಯಕ್ಟ್ 2000ದ ಕಲಂ 72 ಹಾಗೂ ಇಂಡಿಯನ್‌ ಟೆಲಿಗ್ರಾಫ್ ಆ್ಯಕ್ಟ್ 1885ರ ಕಲಂ 26 ಅನ್ವಯ ಬೆಂಗಳೂರು ಸೈಬರ್‌ ಪೊಲೀಸ್‌ ಸ್ಟೇಷನ್‌ನಲ್ಲಿ ದಾಖಲಾಗಿರುವ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವುದು.

2018 ರ ಆಗಸ್ಟ್‌ 1ರಿಂದ ಕಾನೂನು ಬಾಹಿರವಾಗಿ, ಅನಧಿಕೃತವಾಗಿ ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರ ದೂರವಾಣಿ ಕರೆಗಳನ್ನು ಕದ್ದಾಲಿಸಿರುವುದು. ಅವರ ಆಪ್ತರು ಹಾಗೂ ಸಂಬಂಧಿಕರು ಮತ್ತು ಸರ್ಕಾರಿ ಅಧಿಕಾರಿಗಳ ದೂರವಾಣಿ ಕರೆಗಳ ಕದ್ದಾಲಿಕೆಯನ್ನು ಸಿಬಿಐ ತನಿಖೆ ನಡೆಸುವುದು.

ಕಾನೂನು ಬಾಹಿರ ಹಾಗೂ ಅನಧಿಕೃತವಾಗಿ ರಾಜಕೀಯ ಪಕ್ಷಗಳ ನಾಯಕರು, ಅವರ ಆಪ್ತರು ಹಾಗೂ ಸಂಬಂಧಿಕರ ದೂರವಾಣಿ ಕರೆಗಳನ್ನು ಕದ್ದಾಲಿಸಿರುವ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸಿ ಪತ್ತೆ ಹಚ್ಚುವುದು ಇದರ ಮೂಲ ಉದ್ದೇಶ.

ಸಿಬಿಐಗೆ ಒಪ್ಪಿಸಬೇಕೆಂದು ನಾನು ಹೇಳಿದ್ದೇನೆಂದು ಯಡಿಯೂರಪ್ಪ ಹೇಳಿರುವುದು ಅಪ್ಪಟ ಸುಳ್ಳು. ಒಬ್ಬ ಸಿಎಂ ಈ ರೀತಿ ಬೇಜವಾ ಬ್ದಾರಿ ಹೇಳಿಕೆ ನೀಡಬಾರದು.
-ಸಿದ್ದರಾಮಯ್ಯ, ಮಾಜಿ ಸಿಎಂ
ಯಾರ್ಯಾರ ಅವಧಿಯಲ್ಲಿ ಟೆಲಿಫೋನ್‌ ಕದ್ದಾಲಿಕೆ ಮಾಡ ಲಾಗಿದೆ ಎಂದು ಮಾಧ್ಯಮ ಗಳಲ್ಲಿ ನೋಡಿದ್ದೇನೆ. ಅದಕ್ಕೆ ಅಷ್ಟೊಂದು ಮಹತ್ವ ಕೊಡುವ ಅಗತ್ಯವಿಲ್ಲ.
-ದೇವೇಗೌಡ, ಮಾಜಿ ಪ್ರಧಾನಿ

ಸಿಬಿಐಗೆ ವಹಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ.  -ಬಿ.ಎಸ್‌.ಯಡಿಯೂರಪ್ಪ, ಸಿಎಂ
Advertisement

Udayavani is now on Telegram. Click here to join our channel and stay updated with the latest news.

Next