Advertisement

ಆನ್‌ಲೈನ್‌ ಮೂಲಕವೇ ಉದ್ಯೋಗ ; ಕಂಪೆನಿ, ಉದ್ಯೋಗಾರ್ಥಿಗಳ ನೋಂದಣಿ

03:14 AM Aug 07, 2020 | Hari Prasad |

ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಹೊರ ದೇಶ ಹಾಗೂ ಹೊರ ರಾಜ್ಯಗಳಿಂದ ಊರಿಗೆ ಮರಳಿದವರ ನಿರುದ್ಯೋಗ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ.

Advertisement

ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳ ನಡುವೆ ಸಂಪರ್ಕ ಸೇತುವೆಯಾಗಿ ಕೌಶಲ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ ಉದ್ಯೋಗ ದೊರಕಿಸಿಕೊಡುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ರೂಪುರೇಷೆ ಸಿದ್ಧಪಡಿಸಿದೆ.

ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮೂಲಕ ಇಂಥದ್ದೊಂದು ಪ್ರಯೋಗ ನಡೆಯುತ್ತಿದ್ದು, ಸಾವಿರಾರು ಅಭ್ಯರ್ಥಿಗಳು ಹಾಗೂ ನೂರಾರು ಕಂಪೆನಿಗಳು ಇಲ್ಲಿ ನೋಂದಣಿಯಾಗಿವೆ.

ಎಲ್ಲವೂ ಆನ್‌ಲೈನ್‌ನಲ್ಲೇ
ಆನ್‌ಲೈನ್‌ ಮೂಲಕವೇ ಅಭ್ಯರ್ಥಿಗಳಿಂದ ಅರ್ಜಿ ಪಡೆದು ಸಂದರ್ಶನವನ್ನೂ ಪೂರ್ಣಗೊಳಿಸಿ ನೇಮಕಾತಿ ಪತ್ರವನ್ನೂ ನೀಡಲಾಗಿದ್ದು, ಮನೆಯಿಂದಲೇ (ವರ್ಕ್‌ ಫ್ರಂ ಹೋಂ) ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ. ಮೊದಲ ಹಂತದಲ್ಲಿ 13 ಕಂಪೆನಿಗಳು 938 ಅಭ್ಯರ್ಥಿಗಳ ಸಂದರ್ಶನ ನಡೆಸಿ 59 ಮಂದಿಗೆ ಉದ್ಯೋಗ ನೀಡಿವೆ. ಮತ್ತಷ್ಟು ಅಭ್ಯರ್ಥಿಗಳ ಮುಖಾಮುಖಿ ಸಂದರ್ಶನ ಅಗತ್ಯವಿರುವ ಕಾರಣ ಕೋವಿಡ್ 19 ತೀವ್ರತೆ ಮುಗಿಯುತ್ತಲೇ ಆ ಪ್ರಕ್ರಿಯೆ ಮುಂದುವರಿಯಲಿದೆ.

ನಿರಂತರ ಹೊಸತನ
ಈ ಹೊಸ ವ್ಯವಸ್ಥೆಯನ್ನು ನಿರಂತರವಾಗಿ ಮುಂದುವರಿಸಲು ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ನಿರ್ಧರಿಸಿದೆ. ಹೀಗಾಗಿ, ರಾಜ್ಯದ ಎಲ್ಲ ಪ್ರಮುಖ ಕಂಪೆನಿಗಳು ಕಡ್ಡಾಯವಾಗಿ ಇಲಾಖೆಯ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ತಮ್ಮ ಸಂಸ್ಥೆ, ಅಲ್ಲಿ ಲಭ್ಯವಿರುವ ಉದ್ಯೋಗ ಸಹಿತ ಎಲ್ಲ ಮಾಹಿತಿಗಳನ್ನು ಅಲ್ಲಿ ನೀಡಬೇಕಾಗಿದೆ.

Advertisement

ಉದ್ಯೋಗಾರ್ಥಿಗಳು ಕೂಡ ಈ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಕಂಪೆನಿಗಳಿಗೆ ಬೇಕಾಗಿರುವ ಉದ್ಯೋಗಿಗಳ ಮಾಹಿತಿ ಪಡೆದು ಅದಕ್ಕೆ ತಕ್ಕಂತೆ ಉದ್ಯೋಗಾರ್ಥಿಗಳಿಗೆ ಇಲಾಖೆಯೇ ಕೌಶಲ ತರಬೇತಿಯನ್ನು ನೀಡಲಿದೆ. ಮುಂದೆ ಅಂತಹ ಕೌಶಲವು ಶಿಕ್ಷಣದ ಅವಧಿಯಲ್ಲೇ ಸಿಗುವಂತಾಗಲು ಉನ್ನತ ಶಿಕ್ಷಣದಲ್ಲಿ ಹೊಸ ಪಠ್ಯ ಸಿದ್ಧಪಡಿಸಲು ಚಿಂತನೆ ನಡೆಸಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಕೋವಿಡ್ 19 ನಿಂದಾಗಿ ಊರಿಗೆ ವಾಪಸಾದವರಲ್ಲಿ ನಿರುದ್ಯೋಗದ ಆತಂಕ ಹೆಚ್ಚಿತ್ತು. ಇದರಿಂದಾಗಿ ನಾವು ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಅದರಲ್ಲಿ ಯಶಸ್ಸು ಪಡೆದಿದ್ದೇವೆ. ಮುಂದಿನ ದಿನಗಳಲ್ಲಿ ವಿದ್ಯಾವಂತ ಹಾಗೂ ಕೌಶಲಯುಕ್ತ ಯುವ ಸಮೂಹ ಉದ್ಯೋಗಕ್ಕಾಗಿ ಅಲೆದಾಡುವುದನ್ನು ತಪ್ಪಿಸುವುದು ನಮ್ಮ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಬೇಕಾದ ಎಲ್ಲ ಕ್ರಮ ಕೈಗೊಂಡು ಕೌಶಲ ತರಬೇತಿ ಜತೆಗೆ ಉನ್ನತ ಶಿಕ್ಷಣದಲ್ಲಿ ಹೊಸ ಪಠ್ಯಕ್ರಮಕ್ಕೂ ಮುಂದಾಗಿದ್ದೇವೆ.
– ಡಾ| ಸಿ.ಎನ್‌.ಅಶ್ವತ್ಥನಾರಾಯಣ, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next