ಆಲಮಟ್ಟಿ: ಸಣ್ಣಪುಟ್ಟ ಜಾತಿಗಳ ಸುಧಾರಣೆ, ಹಸಿವು ಮುಕ್ತ, ಭಯ ಮುಕ್ತ, ಶೋಷಣೆ ಮುಕ್ತ, ಸಾಮಾಜಿಕ ನ್ಯಾಯ ಎಂದು ಹೇಳುತ್ತಿರುವ ಕಾಂಗ್ರೆಸ್ ಸರ್ಕಾರ ಜಾಹೀರಾತಿಗೆ ಮಾತ್ರ ಸೀಮಿತವಾಗಿದೆ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ತಮ್ಮ ಸಾಧನೆಯನ್ನು ಜಾಹೀರಾತಿನಲ್ಲಿ ಹೇಳುತ್ತಿದೆ. ವಾಸ್ತವವಾಗಿ ಏನೂ ಮಾಡುತ್ತಿಲ್ಲ. ಬೆಂಗಳೂರಿನಲ್ಲಿ ನಿತ್ಯ ಕೊಲೆ ನಡೆಯುತ್ತಿದ್ದು ಮಂಗಳೂರು, ಉಡುಪಿ ಸೇರಿ ಕೆಲ ಜಿಲ್ಲೆಗಳು ಭಯದಿಂದ ನರಳುತ್ತಿವೆ ಎಂದರು.
ವೀರೇಂದ್ರ ಪಾಟೀಲ ಮುಖ್ಯಮಂತ್ರಿಯಾಗಿದ್ದ ವೇಳೆ ಆಲಮಟ್ಟಿಯಲ್ಲಿ ಜಲಾಶಯ ನಿರ್ಮಿಸಿ ಕಲಬುರಗಿ ಜಿಲ್ಲೆಯ ಜಮೀನುಗಳಿಗೆ ನಾರಾಯಣಪುರ ಬಲದಂಡೆ ಕಾಲುವೆಯಿಂದ ನೀರು ಹರಿಸಲು ಉದ್ದೇಶಿಸಲಾಗಿತ್ತು. ನಂತರ ತಾವು ಮುಖ್ಯಮಂತ್ರಿಯಾದ ವೇಳೆ ಇಂಡಿ ಶಾಖಾ ಕಾಲುವೆ ಹಾಗೂ ಮುಳವಾಡ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿತ್ತು. ನ್ಯಾ. ಬಚಾವತ್ ಕೃಷ್ಣಾ ಕಣಿವೆ ನೀಡಿದ್ದ 734 ಟಿಎಂಸಿಯಲ್ಲಿ ತಮಿಳುನಾಡಿನ 5 ಟಿಎಂಸಿ ನೀರು ಹೊರತುಪಡಿಸಿ ಉಳಿದ 729 ಟಿಎಂಸಿ ನೀರನ್ನು ಸರ್ಕಾರಗಳು ಬಳಸಿಕೊಂಡಿವೆಯೇ ಎಂಬುದು ತಿಳಿಯದಾಗಿದೆ ಎಂದರು.
ಬಿಎಸ್‌ಪಿಯೊಂದಿಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದು ಫೆ.17ರಂದು ಸುಮಾರು 4 ಲಕ್ಷ ಜನರನ್ನು ಸೇರಿಸಿ ಬೆಂಗಳೂರಿನಲ್ಲಿ ಸಮಾವೇಶ ನಡೆಸಲಾಗುವುದು. ಮಾಯಾವತಿ ಭಾಗವಹಿಸಲಿದ್ದಾರೆ ಎಂದರು.
ಬಿಎಸ್ಪಿ ಜೊತೆ 20 ಸೀಟು ಹೊಂದಾಣಿಕೆ ಅಂತಿಮಗೊಂಡಿವೆ. ಉಳಿದ 204 ಸೀಟುಗಳಲ್ಲಿ ಕೆಲವನ್ನು ಎಡಪಂಥೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ. ಬಿಎಸ್ಪಿ ಕೇವಲ ದಲಿತರ ಪಕ್ಷ ಅನ್ನುವ ತಪ್ಪು ಕಲ್ಪನೆ ಸರಿ ಅಲ್ಲ. ಬಿಎಸ್ಪಿಯಲ್ಲಿ ಬ್ರಾಹ್ಮಣರು, ಇತರೆ ಜಾತಿಯವರು ಇದ್ದಾರೆ.
– ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ