Advertisement

ಮೋಜು ಮಸ್ತಿಯಲ್ಲಿ ರಾಜ್ಯ ಸರ್ಕಾರ

08:24 AM Jan 28, 2019 | |

ಚಿತ್ತಾಪುರ: ರಾಜ್ಯದಲ್ಲಿ ಬರ ಆವರಿಸಿದ್ದು, ರೈತರ ಗೋಳು ಕೇಳುವವರಿಲ್ಲ. ಅಂತಹದ್ದರಲ್ಲಿ ರಾಜ್ಯ ಸರ್ಕಾರ ಮಾತ್ರ ರೇಸಾರ್ಟ್‌ಗಳಲ್ಲಿ ಮಧ್ಯ ಸೇವಿಸಿ ಮೋಜು, ಮಸ್ತಿಯಲ್ಲಿ ತೊಡಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಶ್ರೀರಾಮುಲು ಹೇಳಿದರು.

Advertisement

ತಾಲೂಕಿನ ದಿಗ್ಗಾಂವ ಗ್ರಾಮದ ವಿಠuಲರಾವ್‌ ಪಾಟೀಲ ಅವರ ಹೊಲಕ್ಕೆ ಬಿಜೆಪಿ ಬರ ಅಧ್ಯಯನ ತಂಡದೊಂದಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿ ಅವರು ಮಾತನಾಡಿದರು.

ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯವನ್ನು ಸಂಪೂರ್ಣ ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇವೆ. ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿ ಒಬ್ಬ ರೈತರ ಸಾಲವನ್ನು ಮನ್ನಾ ಮಾಡಲಿಲ್ಲ. ಬರೀ ಕಾಗದದಲ್ಲಿ ಮಾತ್ರ ರೈತರ ಸಾಲ ಮನ್ನಾ ಆಗಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೈಗೊಳ್ಳದೇ ರೆಸಾರ್ಟ ರಾಜಕಾರಣದಲ್ಲಿ ತೊಡಗಿರುವುದು ವಿಪರ್ಯಾಸವೇ ಸರಿ ಎಂದರು.

ಕ್ಷೇತ್ರದಲ್ಲಿ ಸಂಪೂರ್ಣ ಮಳೆ ಕೈಕೊಟ್ಟಿದ್ದರಿಂದ ರೈತರು ತಮ್ಮ ಹೊಲದಲ್ಲಿ ಎಕರೆಗೆ 8 ರಿಂದ 10 ಚೀಲ ತೊಗರಿ, ಕಡಲಿ, ಜೋಳ ಬೆಳೆಯುತ್ತಿದ್ದವರು ಅರ್ಧ ಚೀಲ ಕೂಡ ಬೆಳೆಯದೇ ಕಣ್ಣಿರು ಸುರಿಸುತ್ತಿದ್ದಾರೆ. ದಿಗ್ಗಾಂವನಂತ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಜಾನುವಾರುಗಳು ಮೇವಿಲ್ಲದೇ ಸಾಯುತ್ತಿವೆ. ಪಕ್ಕದಲ್ಲಿಯೇ ಸ್ಥಾಪನೆಯಾಗಿರುವ ಓರಿಯಂಟ್ ಸಿಮೆಂಟ್ ಕಂಪನಿವರು ಉದ್ಯೋಗ ನೀಡುತ್ತೇವೆ. ಕುಡಿಯಲು ನೀರು ಒದಗಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಒಂದು ಭರವಸೆ ಈಡೇರಿಸಿಲ್ಲ. ಹೀಗಾಗಿ ರೈತರು ಆತ್ಮ ಹತ್ಯೆ ಮಾಡಿಕೊಳ್ಳುತ್ತಿರುವುದು ಒಂದು ಕಡೆ ಆದರೆ ಕೂಲಿ ಕಾರ್ಮಿಕರು, ರೈತರು ತಮ್ಮ ಹೊಲ, ಮನೆ ಬಿಟ್ಟು ಗುಳೆ ಹೋಗುತ್ತಿದ್ದಾರೆ. ಇಂತಹ ದೊಡ್ಡ ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಕ್ಷೇತ್ರದ ಸಚಿವರು ಮಾತ್ರ ರೆಸಾರ್ಟ್‌ ರಾಜಕೀಯದಲ್ಲಿ ತೋಡಗಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯದಲ್ಲಿ ಬರ ಆವರಿಸಿದ್ದನ್ನು ತಿಳಿದುಕೊಳ್ಳಲು ಐದು ತಂಡಗಳನ್ನು ರಚಿಸಿದ್ದಾರೆ. ಅದರಂತೆ ನಾನು ಸೇಡಂ ಮತ್ತು ಚಿತ್ತಾಪುರಕ್ಕೆ ಭೇಟಿ ನೀಡಿ ಇಲ್ಲಿಯ ಸಮಸ್ಯೆಗಳನ್ನು ಮನಗೊಂಡಿದ್ದೇನೆ. ಜಿಲ್ಲಾಧಿಕಾರಿ ಗಮನಕ್ಕೂ ತಂದು ಸಮಸ್ಯೆ ಬಗೆಹರಿಸಲು ಸೂಚಿಸುತ್ತೇನೆ. ಇಲ್ಲಿಯ ಸಮಸ್ಯೆಗಳನ್ನು ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅವರಿಗೆ ವರದಿ ಮುಟ್ಟಿಸಿ, ಫೆ. 8ರಂದು ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಸಮಸ್ಯೆ ಕುರಿತು ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

Advertisement

ಬಿಜೆಪಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್‌ ಮಾತನಾಡಿ, ಕ್ಷೇತ್ರದಲ್ಲಿ ಈ ಭಾರಿ ಶೇಖಡವಾರು 5 ರಷ್ಟು ಮಳೆ ಆಗಿಲ್ಲ. ಕ್ಷೇತ್ರ ಸಂಪೂರ್ಣ ಬರ ಪೀಡಿತವಾಗಿದೆ. ಜಾನವಾರುಗಳು ಮೇವು, ಕುಡಿಯಲು ನೀರು ಇಲ್ಲದೇ ಸಾಯುತ್ತಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಇಲ್ಲಿಯ ವರೆಗೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಹೊಲದ ಮಾಲೀಕ ವಿಠuಲರಾವ್‌ ಪಾಟೀಲ ಮಾತನಾಡಿ, ದಿಗ್ಗಾಂವ ಗ್ರಾಮದಲ್ಲಿ 365 ಭಾವಿಗಳಿವೆ. ಆದರೆ ಒಂದು ಬಾವಿಯಲ್ಲಿಯೂ ಕುಡಿಯಲು ನೀರಿಲ್ಲ. ಪಕ್ಕದಲ್ಲಿಯೇ ಇರುವ ಓರಿಯಂಟ್ ಸಿಮೆಂಟ್, ಶ್ರೀ ಸಿಮೆಂಟ್ ಕಂಪನಿಯವರು ಕಲ್ಲನ್ನು ಕಟಿಂಗ್‌ ಮಾಡಲು ದೊಡ್ಡ ಸುರಂಗಗಳನ್ನು ಕೊರೆದಿರುವುದರಿಂದ ನೀರಿನ ಜರಿಗಳು ಬಂದ್‌ ಆಗಿ ಬಿಟ್ಟಿವೆ. ಕಂಪನಿಯ ಹೊಗೆ ಹೊರಗಡೆ ಬೀಡುತ್ತಿರುವುದರಿಂದ ಬೆಳೆಗಳು ಹೂವು ಬಿಡುವಾಗಲೇ ಒಣಗಿ ಹೋಗುತ್ತಿವೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಮಾಜಿ ಶಾಸಕ ವಾಲ್ಮೀಕಿ ನಾಯಕ, ಜಿಪಂ ಸದಸ್ಯ ಅರವಿಂದ ಚವ್ಹಾಣ, ವಕ್ತಾರ ಮಹೇಶ ಬಟಗೇರಿ, ಮುಖಂಡರಾದ ಲಿಂಗಾರೆಡ್ಡಿ ಭಾಸರೆಡ್ಡಿ, ಬಸವರಾಜ ಬೆಣ್ಣೂರಕರ್‌, ಶಂಕರ್‌ ಚವ್ಹಾಣ, ರವೀಂದ್ರ ಸಜ್ಜನಶೆಟ್ಟಿ, ಮಲ್ಲಿಕಾರ್ಜುನ ಅಲ್ಲೂರ್‌, ಭೀಮಣ್ಣ ಸೀಬಾ, ತಮ್ಮಣ್ಣ ಡಿಗ್ಗಿ, ಶರಣು ಜ್ಯೋತಿ, ನಾಗರಾಜ ಹೂಗಾರ ಇದ್ದರು.

ದಿಗ್ಗಾಂವ ಗ್ರಾಮಕ್ಕೆ ಶಾಸಕ ಶ್ರೀರಾಮಲು ಭೇಟಿ ನೀಡುತ್ತಿದ್ದಾರೆ. ಗ್ರಾಮದಲ್ಲಿನ ನೀರಿನ ಸಮಸ್ಯೆ ಕುರಿತು ಅವರ ಜತೆಯಲ್ಲಿ ಚರ್ಚೆ ಮಾಡೋಣ ಎಂದುಕೊಂಡಿದ್ದ ಗ್ರಾಮಸ್ಥರಿಗೆ ಶಾಸಕ ಶ್ರೀರಾಮುಲು ನಿರಾಶೆ ಮಾಡಿದ್ದಾರೆ. ಚಿತ್ತಾಪುರದಿಂದ ದಿಗ್ಗಾಂವ ಗ್ರಾಮಕ್ಕೆ ಹೊರಟಿದ್ದ ಶ್ರೀರಾಮುಲು ಗ್ರಾಮದ ಹೊರವಲಯದಲ್ಲಿನ ಹೊಲವೊಂದಕ್ಕೆ ಭೇಟಿ ನೀಡಿ, ಅಲ್ಲಿಯೇ ಕುಳಿತು ಸಮಸ್ಯೆ ಕುರಿತು ಪ್ರಶ್ನಿಸಿದರು. ಅಲ್ಲಿದ್ದ ಕೆಲವರು ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ. ಗ್ರಾಮದಲ್ಲಿ 365 ಬಾವಿಗಳಿದ್ದರೂ ಒಂದು ಬಾವಿಯಲ್ಲೂ ನೀರಿಲ್ಲ. ಹೀಗಾಗಿ ದೂರದ ಬಾವಿಗಳಿಂದ ನೀರು ತರುವ ಪರಿಸ್ಥಿತಿ ಇದೆ. ಗ್ರಾಮದಲ್ಲಿ ತಮ್ಮ ಸಮಸ್ಯೆ ಹೇಳಿಕೊಳ್ಳಲು ಗ್ರಾಮಸ್ಥರು ನಿಂತ್ತಿದ್ದಾರೆ ನಡಿರಿ ಎಂದು ಮನವಿ ಮಾಡಿಕೊಂಡರು. ಆದರೆ ಶ್ರೀರಾಮುಲು ಅವರು ನನಗೆ ಕಲಬುರಗಿಗೆ ಹೋಗಬೇಕಿದೆ, ನನಗೆ ಬರಲು ಆಗಲ್ಲ ಎಂದು ಅಲ್ಲಿಂದ ಹೊರಟು ಹೋದರು. ಇದು ಗ್ರಾಮಸ್ಥರಲ್ಲಿ ನಿರಾಶೆ ಮೂಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next