Advertisement

ರಾಜ್ಯ ಸರಕಾರದ ಮೀನುಗಾರರ ಸಾಲ ಮನ್ನಾ: 23 ಸಾವಿರ ಮಂದಿಗೆ ಲಾಭ

11:03 AM Aug 03, 2019 | keerthan |

ಉಡುಪಿ: ನೂತನ ಬಿಎಸ್‌ವೈ ಸರಕಾರ ಮೀನುಗಾರರ ಸಾಲ ಮನ್ನಾ ಘೋಷಿಸಿದ್ದರೂ ಉಡುಪಿ, ದ.ಕ. ಮತ್ತು ಉತ್ತರ ಕನ್ನಡ ಜಿಲ್ಲೆಗಳ 14,000 ಮೀನುಗಾರರು ಇದರಿಂದ ವಂಚಿತರಾಗಿದ್ದಾರೆ.

Advertisement

ಕೇವಲ ಆರ್‌ಬಿಐ ನಿಯಂತ್ರಣದ ಬ್ಯಾಂಕ್‌ ಗಳಲ್ಲಿನ ಸಾಲವನ್ನು ಮಾತ್ರ ಮನ್ನಾ ಮಾಡಿರುವುದೇ ಇದಕ್ಕೆ ಕಾರಣ. ಇದರಿಂದಾಗಿ ಪ್ರಾಥಮಿಕ ಮತ್ತು ಇನ್ನಿತರ ಸಹಕಾರಿ ಸಂಘಗಳ ಮೂಲಕ ಸಾಲ ಪಡೆದ ಮೀನುಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮೀನಿನ ಕೊರತೆಯಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವವರಿಗೆ ಸರಕಾರದ ನೀತಿ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

23 ಸಾವಿರ ಮೀನುಗಾರರ ಸಾಲ ಮನ್ನಾ
ಉಡುಪಿ ಮತ್ತು ದಕ್ಷಿಣ ಕನ್ನಡ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಅಡಿಯಲ್ಲಿ ಒಟ್ಟು 75 ಮೀನುಗಾರ ಸಹಕಾರಿ ಸೊಸೈಟಿಗಳಿವೆ. 30,000 ಮಹಿಳಾ ಮೀನುಗಾರರು ಸೇರಿದಂತೆ ಒಟ್ಟು 85,000 ಸದಸ್ಯರು ನೋಂದಣಿ ಮಾಡಿ ಕೊಂಡಿದ್ದಾರೆ. ಆದರೆ ಇವರಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದ 23,507 ಮೀನುಗಾರರು ಮಾತ್ರ ರಾಜ್ಯ ಸರಕಾರ ಈಗ ಘೋಷಿಸಿರುವ ಮೀನುಗಾರರ ಸಾಲ ಮನ್ನಾ ಯೋಜನೆಯ ಲಾಭ ಪಡೆಯಲಿದ್ದಾರೆ.

60.58 ಕೋ.ರೂ. ಸಾಲ
2017-18 ಮತ್ತು 2018-19ನೇ ಸಾಲಿನ ಮೂರು ಜಿಲ್ಲೆಗಳ 23,507 ಮೀನುಗಾರರ 60.58 ಕೋಟಿ ರೂ. ಸಾಲವನ್ನು ರಾಜ್ಯ ಸರಕಾರ ಮನ್ನಾ ಮಾಡಿದೆ.

ಬಾಕಿ ಸಾಲ ಮಾತ್ರ ಮನ್ನಾ
ರಾಜ್ಯ ಸರಕಾರ ಮೀನುಗಾರ ಸಾಲ ಮನ್ನಾದ ಘೋಷಣೆ ಮಾಡಿದೆ. ಘೋಷಣಾ ಪತ್ರದಲ್ಲಿ ಮೀನುಗಾರರು ಬಾಕಿಯಿರಿಸಿದ ಸಾಲವನ್ನು ಮಾತ್ರ ಮನ್ನಾ ಮಾಡುವ ಕುರಿತು ಉಲ್ಲೇಖೀಸಲಾಗಿದೆ. ಆದರೆ ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಮರುಪಾವತಿ ಮಾಡಿದವರ  ಬಗ್ಗೆ ಪತ್ರದಲ್ಲಿ ಯಾವುದೇ ಉಲ್ಲೇಖವಿಲ್ಲ.

Advertisement

ಶೇ. 2ರಲ್ಲಿ ಸಾಲ ಸೌಲಭ್ಯ
ಮೀನುಗಾರರ ಮತ್ತು ಮಹಿಳಾ ಮೀನುಗಾರರಿಗೆ ಮೀನು ಮಾರಾಟ ಪರಿಕರಗಳ ಖರೀದಿ, ಮೀನಿನ ವ್ಯಾಪಾರಕ್ಕಾಗಿ ಬಂಡವಾಳ, ಮೀನಿನ ಸಂರಕ್ಷಣೆ ಮತ್ತು ಮೀನು ಸಾಗಾಣಿಕೆ ಸೇರಿದಂತೆ ಮೀನುಗಾರಿಕೆ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕ ನೆರವಿನ ದೃಷ್ಟಿಯಿಂದ ಶೇ. 2ರ ಬಡ್ಡಿ ದರದಲ್ಲಿ 50,000 ರೂ. ಸಾಲವನ್ನು ವಾಣಿಜ್ಯ ಬ್ಯಾಂಕ್‌ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಂದ ಪಡೆಯುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು.

ಜಿಲ್ಲೆಯಲ್ಲಿ ಶೇ.50ರಷ್ಟು ಮೀನುಗಾರರು ಪ್ರಾಥಮಿಕ ಮತ್ತು ಇನ್ನಿತರ ಸಹಕಾರಿ ಸಂಘಗಳಲ್ಲಿ ಸಾಲವನ್ನು ಪಡೆದುಕೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವ್ಯವಹಾರ ನಡೆಸಲು ಕಷ್ಟವಾಗಿರುವುದು. ಇದರಿಂದಾಗಿ ಮೀನುಗಾರರು ಇವುಗಳಲ್ಲಿ ಮಾಡಿರುವ ಸಾಲವನ್ನು ಕೂಡ ಸರಕಾರ ಮನ್ನಾ ಮಾಡಬೇಕು.
ಯಶಪಾಲ್‌ ಸುವರ್ಣ ,ಉಡುಪಿ ಮತ್ತು ದ.ಕ. ಸಹಕಾರಿ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷರು.

Advertisement

Udayavani is now on Telegram. Click here to join our channel and stay updated with the latest news.

Next