ಮಹಾನಗರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ದ.ಕ. ಜಿಲ್ಲಾ ಶಾಖೆಯ ಐದು ವರ್ಷಗಳ ಅವಧಿಯ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಪ್ರಾರಂಭವಾಗಿದ್ದು, ಯುವಜನಸೇವೆ ಮತ್ತು ಗ್ರಂಥಾಲಯ ಇಲಾಖೆಯ ಸಿಬಂದಿಯಾಗಿರುವ ಪಿ.ಕೆ. ಕೃಷ್ಣ ಇವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಇವರು ರಾಜ್ಯ ಸರಕಾರಿ ನೌಕರರ ಸಂಘ, ದ.ಕ. ಜಿಲ್ಲಾ ಶಾಖೆಯಲ್ಲಿ ಮೂವತ್ತು ವರ್ಷಗಳ ಅನುಭವ ಹೊಂದಿದ್ದು, ಸಂಘದ ಉಪಾಧ್ಯಕ್ಷರಾಗಿ, ಹಾಲಿ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪಶು ಸಂಗೋಪನೆ ಇಲಾಖೆಯ ಅಕ್ಷಯ ಭಂಡಾರ್ಕರ್ ಅವರು ಖಜಾಂಚಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಇವರು ಸಂಘದ ಲೆಕ್ಕ ಪರಿಶೋಧಕರಾಗಿ ಮತ್ತು ಎನ್‌ಪಿಎಸ್ ಘಟಕದ ಸಂಚಾಲಕರಾಗಿ ಕೆಲಸ ನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ.
ಶೆರ್ಲಿ ಸುಮಾಲಿನಿ ಇವರು ರಾಜ್ಯ ಪರಿಷತ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕಿಯಾಗಿದ್ದು, ಪ್ರಸ್ತುತ ಸಂಘದ ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯದರ್ಶಿಯಾಗಿರುತ್ತಾರೆ. ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣಾಧಿಕಾರಿ ಶೋಭಾ ಇವರು ನಾಮಪತ್ರಗಳನ್ನು ಸ್ವೀಕರಿಸಿದರು.
ನಾಮ ಪತ್ರ ಸಲ್ಲಿಕೆ ಸಮಯದಲ್ಲಿ ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ವಿವಿಧ ಇಲಾಖೆಗಳ ಸಿಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸಂಘದ ಜಿಲ್ಲಾ ವಕ್ತಾರರಾಗಿರುವ ಜಿ ಎಂ. ಹರೀಶ್ ಕುಮಾರ್, ಸಂಘದ ಹಿರಿಯ ಸದಸ್ಯರಾದ ಈಜುಪಟು ಬಿ. ಕೃಷ್ಣಪ್ಪ ನಾಯಕ್, ವಾಹನಚಾಲಕ ಸಂಘದ ಅಧ್ಯಕ್ಷರಾಗಿರುವ ದೇವದಾಸ್ ಮತ್ತು ವಿವಿಧ ಇಲಾಖೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ಉಪಸ್ಥಿತರಿದ್ದರು.