ಕಾಸರಗೋಡು: ಜನರೊಂದಿಗಿದ್ದೇವೆ ಎಂದು ಜಾಹೀರಾತು ನೀಡುವ ರಾಜ್ಯ ಸರಕಾರ ಮಾತು ಪಾಲಿಸದೆ ಮಾಫಿಯಾಗಳಿಗೆ ಸಹಾಯವಾಗುವ ರೀತಿಯಲ್ಲಿ ನಿಲುವು ಹೊಂದಿದೆಯೆಂದು ಎಐಸಿಸಿ ಕಾರ್ಯದರ್ಶಿ, ಶಾಸಕ ಪಿ.ಸಿ.ವಿಷ್ಣುನಾಥ್ ಹೇಳಿದ್ದಾರೆ.
ಅವರು ಕೇಂದ್ರ – ರಾಜ್ಯ ಸರಕಾರಗಳ ಜನ ವಿರೋಧಿ ನೀತಿಯನ್ನು ಪ್ರತಿಭಟಿಸಿ ಯುಡಿಎಫ್ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆಸಿದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಬೆಲೆ ಏರಿಕೆ ತಡುಗಟ್ಟಲು ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕೊನೆ ಇಲ್ಲ. ಹೀಗಿದ್ದೂ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು. ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರದ ಕಾರ್ಯವೈಖರಿಯನ್ನು ಅವರು ಟೀಕಿಸಿದರು.
ಐಕ್ಯರಂಗದ ಜಿಲ್ಲಾ ಅಧ್ಯಕ್ಷ ಚೆರ್ಕಳ ಅಬ್ದುಲ್ಲ ಅಧ್ಯಕ್ಷತೆ ವಹಿಸಿದರು. ಶಾಸಕರಾದ ಪಿ.ಬಿ.ಅಬ್ದುಲ್ ರಝಾಕ್ ಹಾಗೂ ಎನ್.ಎ. ನೆಲ್ಲಿಕುನ್ನು, ನೇತಾರರಾದ ಕೆ.ಪಿ. ಕುಂಞಿಕಣ್ಣನ್, ಎಂ.ಸಿ. ಖಮರುದ್ದೀನ್, ಹಕೀಂ ಕುನ್ನಿಲ್, ಕೆ. ನೀಲಕಂಠನ್, ಹರೀಶ್ ಪಿ. ನಂಬಿಯಾರ್, ಅಶ್ರಫಲಿ ಚೇರಂಗೈ, ಕಲ್ಲಟ್ರ ಮಾಹಿನ್ ಹಾಜಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ. ಬಶೀರ್, ಎ. ಅಬ್ದುಲ್ ರಹಿಮಾನ್, ಕರಿವೆಳ್ಳೂರು ವಿಜಯನ್ ನೇತೃತ್ವ ನೀಡಿದರು. ವಿದ್ಯಾನಗರ ಸರಕಾರಿ ಕಾಲೇಜು ಪರಿಸರದಿಂದ ಜಾಥಾ ನಡೆಯಿತು. ಪಿ. ಗಂಗಾಧರನ್ ನಾಯರ್ ಸ್ವಾಗತಿಸಿದರು.