Advertisement

ಕೊರೊನಾ ತಡೆಗೆ ರಾಜ್ಯ ಸರ್ಕಾರ ವಿಫ‌ಲ

06:17 PM Mar 16, 2020 | Suhan S |

ಕನಕಪುರ: ರಾಜ್ಯದಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ಸೋಂಕಿನ ನಿಯಂತ್ರಣದ ವಿಚಾರದಲ್ಲಿ ರಾಜ್ಯ ಸರ್ಕಾರ ವಿಫ‌ಲವಾಗಿದೆ ಎಂದು ನೂತನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಕೆಪಿಸಿಸಿ ಸ್ಥಾನ ಒಲಿದ ನಂತರ ಮೊದಲನೇ ಬಾರಿಗೆ ತನ್ನ ಸ್ವ-ಕ್ಷೇತ್ರಕ್ಕೆ ಭೇಟಿ ನೀಡಿದ ಅವರು, ನಗರದ ಮೈಸೂರು ರಸ್ತೆಯ ಸ್ವ-ಗೃಹದಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಆರೋಗ್ಯದ ವಿಚಾರದಲ್ಲಿ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ. ಆದರೆ, ಸಾರ್ವಜನಿಕರಲ್ಲಿ ಆತಂಕ ಹೋಗಲಾಡಿಸಿ ಅರಿವು ಮೂಡಿಸಿಲ್ಲ. ಮೆಡಿಕಲ್‌ ಕಾಲೇಜಿನ ಆಡಳಿತ ಮಂಡಳಿಯ ಸಭೆ ಕರೆದು ಚರ್ಚಿಸಿ, ವಿದೇಶಕ್ಕೆ ಭೇಟಿ ನೀಡುವವರ ಮೇಲೆ ನಿಗಾ ಇಟ್ಟು ತಪಾಸಣೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವುದು ಬಿಟ್ಟಿದ್ದಾರೆ ಎಂದು ಆರೋಪಿಸಿದರು.

ಭಯದ ವಾತಾವರಣ ನಿರ್ಮಾಣ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತಿ ದೂರವಾಣಿ ಕರೆಯಲ್ಲಿ ಕೊರೊನಾ ಸೋಂಕಿನ ಬಗ್ಗೆ ಭಯ ಹುಟ್ಟಿಸುವ ರೀತಿಯಲ್ಲಿ ಧ್ವನಿ ಅಳವಡಿಕೆ ಮಾಡಿದ್ದಾರೆ. ಬಹಳ ದೊಡ್ಡ ಆತಂಕವನ್ನು ಸೃಷ್ಟಿ ಮಾಡಿ, ಭಯದ ವಾತಾವರಣ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ. ಒಂದು ವಾರ ರಾಜ್ಯವನ್ನು ಸ್ಥಬ್ದಗೊಳಿಸಿರುವ ಸರ್ಕಾರದ ನಿಲುವಿನಿಂದ ದಿನನಿತ್ಯದ ಅಗತ್ಯ ವಸ್ತುಗಳ ವಹಿವಾಟುದಾರರ ಮೇಲೆ ಪರಿಣಾಮ ಬೀರಿದೆ. ಅಗತ್ಯ ವಸ್ತುಗಳನ್ನು ಕೇಳುವವರೇ ಇಲ್ಲದಂತಾಗಿದೆ. ಇದರಿಂದ ಅನ್ಯಾಯ ಮತ್ತು ನಷ್ಟ ಉಂಟಾಗುತ್ತಿರುವವರಿಗೆ ಬಜೆಟ್‌ ಇಡಲಿ, ಸರ್ಕಾರ ಬ್ಯಾಂಕುಗಳಲ್ಲಿ ಬಡ್ಡಿಗೆ ನೀಡಿರುವ ಹಣವನ್ನು ರದ್ದುಪಡಿಸಲಿ. ವಹಿವಾಟು ಇಲ್ಲದೇ ಸಾಲ ಪಡೆದು ಬಂಡವಾಳ ಹೂಡಿರುವವರು ಏನಾಗ ಬೇಕು ಎಂದು ರಾಜ್ಯಸರ್ಕಾರಕ್ಕೆ ಪ್ರಶ್ನೆ ಮಾಡಿದರು.

ಎಲ್ಲರಿಗೂ ಎಲ್ಲ ಸ್ಥಾನ ಕೊಡಲು ಸಾಧ್ಯವಿಲ್ಲ: ನನಗೆ ಪಕ್ಷ ಒಂದು ದೊಡ್ಡ ಜವಾಬ್ದಾರಿಯನ್ನು ಕೊಟ್ಟಿದೆ. ಒಂದೊಂದು ಪಕ್ಷಕ್ಕೂ ತನ್ನದೇ ಆದ ಸಿದ್ಧಾಂತಗಳಿವೆ. ಅವರವರ ಸಿದ್ಧಾಂತ ಅವರು ಮಾಡುತ್ತಾರೆ. ನಮ್ಮ ಪಕ್ಷದ ಸಿದ್ಧಾಂತವನ್ನು ನಾವು ಮಾಡುತ್ತೇವೆ. ವಿರೋಧ ಪಕ್ಷದ ನಾಯಕ ಸಿದ್ದ ರಾಮಯ್ಯ ಮತ್ತು ಹಲವು ಹಿರಿಯ ನಾಯಕರಿದ್ದಾರೆ. ಎಲ್ಲರಿಗೂ ಎಲ್ಲ ಸ್ಥಾನಗಳನ್ನು ಕೊಡಲು ಸಾಧ್ಯವಿಲ್ಲ. ನಮ್ಮ ಪಕ್ಷದ ಎಲ್ಲಾ ಹಿರಿಯ ಮುಖಂಡರು ಮತ್ತು ಶಾಸಕರ ಸೇವೆ, ಅನುಭವ ನಮ್ಮ ಪಕ್ಷದ ಆಸ್ತಿ. ಅವರನ್ನು ಭೇಟಿ ಮಾಡಿ ಅವರಿಗೆ ಶಕ್ತಿ ತುಂಬಬೇಕು. ನನ್ನ ಪರಾಜಿತ ಅಭ್ಯರ್ಥಿಗೂ ಶಕ್ತಿ ತುಂಬಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದಾಗಿ ತಿಳಿಸಿದರು.

ನನ್ನನ್ನು ಕಾಯುವ ಅವಶ್ಯವಿಲ್ಲ: ನಾನು ಎಷ್ಟೇ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದರೂ ಕೂಡ, ತಾಲೂಕು ಹಾಗೂ ಜಿಲ್ಲೆಯ ಜನತೆಯ ಮೊದಲ ಸೇವಕ ಹಾಗೂ ಕಾರ್ಯಕರ್ತ. ಹೀಗಾಗಿ ನನ್ನನ್ನು ನೋಡಿ ಅಭಿನಂದನೆ ಸಲ್ಲಿಸಬೇಕು ಎಂದುಕೊಂಡು ಯಾವುದೇ ಕಾರ್ಯ ಕರ್ತರು ಬೆಂಗಳೂರಿನ ನಿವಾಸದ ಬಳಿ ಬಂದು ಕಾದು ಕುಳಿತುಕೊಳ್ಳುವ ಅಗತ್ಯ ವಿಲ್ಲ. ಸದ್ಯದಲ್ಲೇ 28 ಕ್ಷೇತ್ರದ ಬ್ಲಾಕ್‌ಗಳಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಲು ಕಾರ್ಯಕ್ರಮವನ್ನು ರೂಪಿಸಿ, ಪ್ರತಿದಿನ 7ರಿಂದ 8 ವಿಧಾನಸಭಾ ಕ್ಷೇತ್ರದ ಬ್ಲಾಕ್‌ ಗಳಿಗೆ ಬಂದು ನಿಮ್ಮನ್ನು ಭೇಟಿ ಮಾಡಲಿದ್ದೇನೆ. ಹೀಗಾಗಿ ಯಾರು ಬಂದು ಕಾಯುವ ಅವಶ್ಯಕತೆ ಇಲ್ಲ ಎಂದು ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next