Advertisement

ಗುತ್ತಿಗೆ ವೈದ್ಯರ ಖಾಯಂಗೆ ಸಮ್ಮತಿ ; ರಾಜೀನಾಮೆ ನಿರ್ಧಾರ ತಾತ್ಕಾಲಿಕ ಹಿಂದೆಗೆತ

02:49 AM Jul 08, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 507 ಗುತ್ತಿಗೆ ವೈದ್ಯರನ್ನು ಖಾಯಂಗೊಳಿಸಲು ಸರಕಾರ ನಿರ್ಧರಿಸಿದೆ.

Advertisement

ಕೋವಿಡ್ 19 ಸೋಂಕಿನ ಸಂಕಷ್ಟದ ಸಂದರ್ಭದಲ್ಲಿ ಗುತ್ತಿಗೆ ವೈದ್ಯರು ಮತ್ತು ರಾಜ್ಯ ಸರಕಾರದ ನಡುವೆ ನಡೆದ ಸಂಘರ್ಷ ತಾತ್ಕಾಲಿಕ ಅಂತ್ಯ ಕಂಡಿದೆ.

ಸರಕಾರದ ನಿರ್ಧಾರದಿಂದ ತೃಪ್ತರಾಗಿರುವ ಗುತ್ತಿಗೆ ವೈದ್ಯರು ತಾತ್ಕಾಲಿಕವಾಗಿ ತಮ್ಮ ಮುಷ್ಕರ ಹಿಂದೆಗೆದು ಕೊಂಡಿದ್ದು, ರಾಜೀನಾಮೆ ನಿರ್ಧಾರವನ್ನೂ ಕೈಬಿಟ್ಟಿದ್ದಾರೆ.

ಆರೋಗ್ಯ ಸಚಿವ ಬಿ. ಶ್ರೀರಾಮುಲು ನೇತೃತ್ವದಲ್ಲಿ ಗುತ್ತಿಗೆ ವೈದ್ಯರ ಸಂಘದ ಪದಾಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಚರ್ಚಿಸಿ ಗುತ್ತಿಗೆ ವೈದ್ಯರನ್ನು ಖಾಯಂಗೊಳಿಸಲು ನಿರ್ಧರಿಸಲಾಗಿದೆ. ವೈದ್ಯರ ನೇರ ನೇಮಕ ಸಂದರ್ಭದಲ್ಲಿ ಈಗಾಗಲೇ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ವಾರ್ಷಿಕವಾಗಿ 5 ಕೃಪಾಂಕ ನೀಡುವುದಾಗಿ ಸರಕಾರ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ. ಆದರೆ ಯಾವಾಗ ನೇರ ನೇಮಕ ಮಾಡಲಾಗುತ್ತದೆ ಎಂದು ಸರಕಾರ ಸ್ಪಷ್ಟಪಡಿಸಿಲ್ಲ.

ಗುತ್ತಿಗೆ ವೈದ್ಯರನ್ನು ಖಾಯಂ ಮಾಡಬೇಕೆಂಬ ಬೇಡಿಕೆ 2017ರಿಂದ ಇದೆ. ಈ ಬಗ್ಗೆ ಕಳೆದ ಸಂಪುಟ ಸಭೆಯಲ್ಲಿ ಚರ್ಚಿಸಿ ಗುತ್ತಿಗೆ ವೈದ್ಯರ ವೇತನವನ್ನು 60 ಸಾವಿರ ರೂ.ಗಳಿಗೆ  ಹೆಚ್ಚಿಸಲಾಗಿತ್ತು. ಗುತ್ತಿಗೆ ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ.

Advertisement

ಅವರನ್ನು ನೇರ ನೇಮಕ ಮಾಡಿಕೊಳ್ಳುವ ಬಗ್ಗೆ ಸರಕಾರ ತೀರ್ಮಾನ ಮಾಡಿದೆ ಎಂದು ಸಭೆಯ ಅನಂತರ ಮಾತನಾಡಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಹೇಳಿದರು. ಈ ಬಗ್ಗೆ ಕೆಲವು ನೇಮಕಾತಿ ನಿಯಮ ಬದಲಾಯಿಸಬೇಕಿದ್ದು, ಆ ಬಗ್ಗೆಯೂ ಸರಕಾರ ತೀರ್ಮಾನಿಸಿದೆ ಎಂದರು.

ರಾಜ್ಯದಲ್ಲಿ 6 ಸಾವಿರ ವೈದ್ಯ ಹುದ್ದೆಗಳಿದ್ದು, 1,700 ಹುದ್ದೆ ಖಾಲಿ ಇವೆ. 500 ಹುದ್ದೆ ಭರ್ತಿಗೆ ಈಗಾಗಲೇ ಅರ್ಜಿ ಕರೆಯಲಾಗಿದೆ. ಅಲ್ಲದೆ 1,200 ಹುದ್ದೆಗಳನ್ನು ನೇರ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ಗುತ್ತಿಗೆ ವೈದ್ಯರ ಜತೆಗಿನ ಸಭೆ ಫಲಪ್ರದವಾಗಿದೆ. ನಮ್ಮ ತೀರ್ಮಾನವನ್ನು ಅವರು ಸ್ವಾಗತಿಸಿದ್ದಾರೆ. ಅವರ ಬೇಡಿಕೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ವೈದ್ಯರೇ ನಿಜವಾದ ಕೊರೊನಾ ಯೋಧರು. ಅವರಿಗೆ ಯಾವುದೇ ರೀತಿ ಸಮಸ್ಯೆಯಾಗದಂತೆ ಸರಕಾರ ತೀರ್ಮಾನಿಸಿದೆ.
– ಡಾ| ಸುಧಾಕರ್‌, ವೈದ್ಯಕೀಯ ಶಿಕ್ಷಣ ಸಚಿವ

ಸರಕಾರ ನಮ್ಮ ಮನವಿಯನ್ನು ಪರಿಗಣಿಸಿದ್ದು, ಅದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇವೆ. ಈಗ ಆಗಿರುವ ಚರ್ಚೆಯ ಪ್ರಕಾರ 507 ವೈದ್ಯರನ್ನು ನೇರ ನೇಮಕ ಮಾಡಿಕೊಳ್ಳುವ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡಲಿದ್ದಾರೆ. ಹೀಗಾಗಿ ಪ್ರತಿಭಟನೆ ಮತ್ತು ರಾಜೀನಾಮೆ ತೀರ್ಮಾನವನ್ನು ಹಿಂಪಡೆದಿದ್ದೇವೆ.
– ಶ್ರೀನಿವಾಸ್‌, ಸರಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next