Advertisement

ರಾಜ್ಯ ಸರಕಾರದ ಬೊಕ್ಕಸ ಖಾಲಿ: ಖಂಡ್ರೆ

08:01 AM May 15, 2020 | Sriram |

ಬೆಂಗಳೂರು: ರಾಜ್ಯ ಸರಕಾರದ ಬೊಕ್ಕಸ ಬರಿದಾಗಿದ್ದು, ತನ್ನ ನೌಕರರಿಗೆ ವೇತನ ಬಿಡುಗಡೆ ಮಾಡಿಲ್ಲ. ಯಾವುದೇ ಕೆಲಸಗಳಿಗೂ ಹಣ ಬಿಡುಗಡೆಯಾಗುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಆರೋಪಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರಕಾರ ಆರ್ಥಿಕ ಸಂಕಷ್ಟದಲ್ಲಿದ್ದರೂ ಕೇಂದ್ರ ಸರಕಾರ ರಾಜ್ಯದತ್ತ ತಿರುಗಿ ನೋಡಿಲ್ಲ. ರಾಜ್ಯಕ್ಕೆ ಬರಬೇಕಾದ ಅನುದಾನವನ್ನೇ ನೀಡಿಲ್ಲ. ಕೇಂದ್ರಕ್ಕೆ ಹೆಚ್ಚಿನ ತೆರಿಗೆಯನ್ನು ಕೊಡುವ ರಾಜ್ಯ ಕರ್ನಾಟಕ. ಆದರೂ ಕೇಂದ್ರದಿಂದ ರಾಜ್ಯಕ್ಕೆ ನೆರವು ಸಿಗುತ್ತಿಲ್ಲ. ರಾಜ್ಯಕ್ಕೆ ಅನ್ಯಾಯದ ಮೇಲೆ ಅನ್ಯಾಯ ಆಗುತ್ತಿದ್ದು, ಆಡಳಿತ ಪಕ್ಷದ 25 ಸಂಸದರು ಇದ್ದರೂ ಪ್ರಯೋಜನವಿಲ್ಲ ಎಂದು ಹೇಳಿದರು.

ಕೇಂದ್ರದ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ ಬಗ್ಗೆ ಜನರನ್ನು ದಾರಿತಪ್ಪಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಬರೀ ಮಾಯಾಬಜಾರ್‌ ತೋರಿಸಿ ಜನರನ್ನು ಯಾಮಾರಿಸುವ ಕೆಲಸವಾಗುತ್ತಿದೆ. ಕೇವಲ ಉದ್ಯಮಿಗಳಿಗೆ ಮಾತ್ರ ನೆರವು ಘೋಷಿಸಲಾಗಿದ್ದು, ರೈತರು, ಕಾರ್ಮಿಕರನ್ನು ಸಂಪೂರ್ಣವಾಗಿ ಅವಗಣನೆ ಮಾಡಿದ್ದಾರೆ ಎಂದವರು ಟೀಕಿಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವಿರೋಧ
ಎಪಿಎಂಸಿ ತಿದ್ದುಪಡಿ ಕಾಯಿದೆಗೆ ತಿದ್ದುಪಡಿ ತರಲು ಹೊರಟಿರುವುದು ಆರ್ಥಿಕತೆಯ ಮೇಲೆ ಹೊಡೆತ ನೀಡಲಿದೆ. ಸದನದಲ್ಲಿ ಚರ್ಚೆಯಾಗದೆ ಕಾಯ್ದೆ ಜಾರಿ ಮಾಡಬಾರದು. ಬಹುರಾಷ್ಟ್ರೀಯ ಕಂಪೆನಿಗಳ ಪರ ಕೇಂದ್ರ ನಿಂತಿದೆ. ರೈತರ ವಿರುದ್ಧ ನೀತಿಗಳನ್ನು ಜಾರಿಗೆ ತರುತ್ತಿದೆ. ಕೃಷಿ ಭೂಮಿಯ ಮೇಲೆಯೇ ಕಂಪೆನಿಗಳಿಗೆ ಹಿಡಿತ ಬಿಟ್ಟುಕೊಟ್ಟಿದೆ. ಇದರಿಂದ ರೈತರ ಆಸ್ತಿ ಬೇರೆಯವರ ಪಾಲಾಗಲಿದೆ. ಕಂಪೆನಿಗಳೇ ರೈತರ ಬೆಳೆಗೆ ಬೆಲೆ ನಿಗದಿಪಡಿಸುವ ಸ್ಥಿತಿ ಬರಲಿದೆ. ಇದು ರೈತರ ಮೇಲೆ ದಬ್ಟಾಳಿಕೆಗೆ ಅವಕಾಶ ಮಾಡಿಕೊಟ್ಟಂತಾಗಲಿದೆ. ಕೋವಿಡ್‌ ಪರಿಸ್ಥಿತಿಯಲ್ಲಿಯೇ ಇಂಥ ಕಾಯಿದೆಯನ್ನು ತರುತ್ತಿದ್ದು, ಇದರ ವಿರುದ್ಧ ಕಾಂಗ್ರೆಸ್‌ ಹೋರಾಟ ಮಾಡಲಿದೆ ಎಂದು ಖಂಡ್ರೆ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next