Advertisement

ಗ್ರಾಮೀಣ ಜನರ ಮೊರೆಗೆ ಸ್ಪಂದಿಸಿದ ರಾಜ್ಯ ಸರಕಾರ

12:14 AM May 13, 2022 | Team Udayavani |

ಪಟ್ಟಣ ಪಂಚಾಯತ್‌, ಪುರಸಭೆ ವ್ಯಾಪ್ತಿಯಲ್ಲಿ ಖಾಸಗಿ ಜಾಗದ ಮಾರಾಟ, ಮನೆ, ಕಟ್ಟಡಗಳ ನಿರ್ಮಾಣಕ್ಕೆ ನಗರ ಯೋಜನೆ ವಿಭಾಗದಿಂದ ಅನುಮತಿ ಪಡೆಯುವುದನ್ನು ಈ ಹಿಂದೆ ಕಡ್ಡಾಯಗೊಳಿಸಿದ್ದ ರಾಜ್ಯ ಸರಕಾರ ಇದೀಗ ಕೊನೆಗೂ ಜನಾಗ್ರಹಕ್ಕೆ ಮಣಿದು ಹಾಲಿ ಕಾಯ್ದೆಗೆ ತಿದ್ದುಪಡಿ ತಂದು ಈ ನಿಯಮದಿಂದ ವಿನಾಯಿತಿ ನೀಡಲು ತೀರ್ಮಾನಿಸಿದೆ.

Advertisement

ಟೌನ್‌ ಪ್ಲಾನಿಂಗ್‌ ಅನುಮತಿ ಕಡ್ಡಾಯ ನಿಯಮ ಜಾರಿಯಾದಂದಿನಿಂದ ಮನೆ, ಕಟ್ಟಡ ನಿರ್ಮಾಣ ಅನುಮತಿ, 11 ಇ-ನಕ್ಷೆ, ಆಸ್ತಿ ಮಾರಾಟಕ್ಕಾಗಿ ಜನರು ನಗರ ಯೋಜನೆ ಪ್ರಾಧಿಕಾರ ಕಚೇರಿ ಇರುವ ನಗರಕ್ಕೆ ಜನರು ಅಲೆದಾಡುವಂತಾಗಿತ್ತು. ಪುರಸಭೆ, ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ನಗರ ಯೋಜನಾ ಪ್ರಾಧಿಕಾರ ಇರುವುದು ತೀರಾ ವಿರಳವಾಗಿರುವುದರಿಂದ ಜನರು ಇವೆಲ್ಲವುಗಳಿಗೆ ಅನುಮತಿ ಪಡೆಯಲು ಜಿಲ್ಲಾ ಕೇಂದ್ರವನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಅಷ್ಟು ಮಾತ್ರವಲ್ಲದೆ ಜನರ ಈ ಅರ್ಜಿಗಳಿಗೆ ನಗರ ಯೋಜನೆ ಪ್ರಾಧಿಕಾರ ಒಂದಲ್ಲ ಒಂದು ತಗಾದೆ ತೆಗೆದು ಅದಕ್ಕೆ ಅನುಮತಿ ನೀಡಲು ಸತಾಯಿಸುತ್ತಿದ್ದ ಪ್ರಸಂಗಗಳೂ ಸಾಮಾನ್ಯವಾಗಿದ್ದವು. ಇದೇ ಕಾರಣದಿಂದ ಮನೆ, ಕಟ್ಟಡ ನಿರ್ಮಾಣಕ್ಕಾಗಿ ಜನರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ದಾಖಲೆಪತ್ರಗಳು ಸಮರ್ಪಕವಾಗಿಲ್ಲ ಎಂಬ ಕಾರಣವೊಡ್ಡಿ ಅರ್ಜಿಯನ್ನು ತಿರಸ್ಕರಿಸುತ್ತಿದ್ದ ಘಟನೆಗಳೂ ನಡೆಯುತ್ತಿದ್ದವು.

ಹಾಲಿ ಪಟ್ಟಣ ಪಂಚಾಯತ್‌ ಮತ್ತು ಪುರಸಭೆ ಮುಂದಿನ ದಿನಗಳಲ್ಲಿ ಬೇಕಾಬಿಟ್ಟಿಯಾಗಿ ಅಭಿವೃದ್ಧಿ ಹೊಂದಿದಲ್ಲಿ ಈಗಿನ ನಗರಗಳು ಎದುರಿಸುತಿ¤ರುವ ಸಮಸ್ಯೆಯನ್ನೇ ಈ ಪಟ್ಟಣಗಳೂ ಎದುರಿಸಬೇಕಾಗಿ ಬರಬಹುದು ಎಂಬ ದೂರದೃಷ್ಟಿಯಿಂದ ಸರಕಾರ ಈ ನಿಯಮವನ್ನು ಜಾರಿಗೊಳಿಸಿತ್ತಾದರೂ ಈ ಪಟ್ಟಣಗಳಲ್ಲಿನ ವಾಸ್ತವ ಸ್ಥಿತಿಯನ್ನು ಅರಿಯುವ ಕನಿಷ್ಠ ಪ್ರಯತ್ನವನ್ನೂ ಮಾಡದೆ ಏಕಾಏಕಿಯಾಗಿ ನಿಯಮ ಜಾರಿಗೊಳಿಸಿದ್ದರಿಂದಾಗಿ ನಗರೇತರ ಪ್ರದೇಶಗಳ ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿತ್ತು. ಅಷ್ಟು ಮಾತ್ರವಲ್ಲದೆ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅರಣ್ಯ ಪ್ರದೇಶಗಳಲ್ಲಿ ಮನೆ ನಿರ್ಮಿಸಿಕೊಳ್ಳುವ ಪಟ್ಟಾ ಜಮೀನುಗಳಿಗೂ ಟೌನ್‌ ಪ್ಲಾನಿಂಗ್‌ ನಿಯಮ ಅನ್ವಯವಾಗುತ್ತಿದ್ದುದರಿಂದ ಮನೆ ನಿರ್ಮಾಣ ಇವರ ಪಾಲಿಗೆ ಕನಸಿನ ಮಾತಾಗಿ ಬಿಟ್ಟಿತ್ತು. ಈ ಗೊಂದಲಕಾರಿ ನಿಯಮದಿಂದಾಗಿ ಗ್ರಾ. ಪಂ. ಮಟ್ಟದಲ್ಲಿ ಮನೆ, ಕಟ್ಟಡ ನಿರ್ಮಾಣ ಕಾರ್ಯಗಳು ಬಹುತೇಕ ಸ್ಥಗಿತವಾಗಿದ್ದವು. ಸಹಜ ವಾಗಿ ನಗರ ಯೋಜನೆ ಪ್ರಾಧಿಕಾರದ ಕಚೇರಿಗಳಲ್ಲಿ ಇಂಥ ಅರ್ಜಿಗಳ ರಾಶಿಯೇ ಬೀಳುವಂತಾಗಿತ್ತಲ್ಲದೆ ಅಗತ್ಯ ಸಿಬಂದಿಯ ಕೊರತೆಯಿಂದಾಗಿ ಅರ್ಜಿಗಳ ವಿಲೇವಾರಿಯೂ ಆಮೆಗತಿಯಲ್ಲಿ ಸಾಗಿತ್ತು. ಈ ಎಲ್ಲ ಸಮಸ್ಯೆಗಳಿಂದ ರೋಸಿ ಹೋಗಿದ್ದ ಜನತೆ ನಿರಂತರವಾಗಿ ಈ ನಿಯಮ ದಿಂದ ಗ್ರಾಮ ಪಂಚಾಯತ್‌, ಪಟ್ಟಣ ಪಂಚಾಯತ್‌ ಮತ್ತು ಪುರಸಭೆ ಗಳನ್ನು ಹೊರಗಿಡುವಂತೆ ಮನವಿ ಸಲ್ಲಿಸುತ್ತಲೇ ಬಂದಿದ್ದರು.

ಈಗ ರಾಜ್ಯ ಸಚಿವ ಸಂಪುಟ ಕೊನೆಗೂ ಕಾಯ್ದೆಗೆ ತಿದ್ದುಪಡಿ ತರಲು ಸಮ್ಮತಿಸಿದೆ. ಆದರೆ ಈ ವ್ಯಾಪ್ತಿಯಲ್ಲಿ ಒಂದು ಎಕ್ರೆಗಿಂತ ಹೆಚ್ಚಿನ ಪ್ರದೇಶ ದಲ್ಲಿ ಬಡಾವಣೆ ನಿರ್ಮಾಣ, ನಿವೇಶನ, ಕಟ್ಟಡ ನಿರ್ಮಾಣ ಮಾಡ ಬೇಕಾದರೆ ನಗರ ಯೋಜನೆ ಪ್ರಾಧಿಕಾರದ ಅನುಮತಿಯನ್ನು ಪಡೆದು ಕೊಳ್ಳುವುದು ಕಡ್ಡಾಯವಾಗಿದೆ. ಒಟ್ಟಾರೆ ರಾಜ್ಯ ಸರಕಾರದ ಈ ನಿರ್ಧಾರದಿಂದ ಗ್ರಾಮೀಣ ಮತ್ತು ಅರೆ ನಗರ ಪ್ರದೇಶದ ಜನರು ನಿಟ್ಟುಸಿರು ಬಿಡುವಂತಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next