ನವದೆಹಲಿ:ದೇಶ ಕಂಡ ಮುತ್ಸದ್ಧಿ ರಾಜಕಾರಣಿ, ಮಾಜಿ ರಾಷ್ಟ್ರಪತಿ ಭಾರತ ರತ್ನ ಪ್ರಣಬ್ ಮುಖರ್ಜಿ (84ವರ್ಷ) ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಮಂಗಳವಾರ ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಅವರಿಗೆ ಕೋವಿಡ್ 19 ಪಾಸಿಟಿವ್ ಎಂದು ವರದಿ ಬಂದಿತ್ತು. ಮೆದುಳು ಸರ್ಜರಿ ವೇಳೆ ಈ ವರದಿ ಬಂದ ನಂತರ ಅವರು ಕೋಮಾಕ್ಕೆ ಜಾರಿದ್ದರು. ಕೆಲವು ವಾರಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ (ಆಗಸ್ಟ್ 30, 2020) ನಿಧನರಾಗಿದ್ದರು.
ಪ್ರಣಬ್ ಮುಖರ್ಜಿ ಅವರ ಪಾರ್ಥಿವ ಶರೀರವನ್ನು ದೆಹಲಿಯಲ್ಲಿರುವ ನಿವಾಸಕ್ಕೆ ತರಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಭೇಟಿ ನೀಡಿ ಅಂತಿಮ ಗೌರವ ಸಲ್ಲಿಸಿದರು.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸೇನಾ ಮುಖ್ಯ ದಂಡನಾಯಕ ಜನರಲ್ ಬಿಪಿನ್ ರಾವತ್ ಪ್ರಣಬ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.