Advertisement

ಮಲಬಾರ್‌ ಟ್ರೀಟೋಡ್‌ಗೆ ರಾಜ್ಯ ಕಪ್ಪೆ ಸ್ಥಾನಮಾನ

02:00 AM Nov 20, 2021 | Team Udayavani |

ಉಡುಪಿ: ಅಳಿವಿನಂಚಿನಲ್ಲಿರುವ ಜೀವಿ ಎಂದು ಗುರುತಿಸಲ್ಪಟ್ಟ, ಜಗತ್ತಿನ ಬೇರೆಲ್ಲಿಯೂ ಕಾಣಸಿಗದ ಪಶ್ಚಿಮಘಟ್ಟದ ವಿಶೇಷ ಜೀವ ಸಂಕುಲಗಳಲ್ಲಿ ಒಂದಾದ ಮಲಬಾರ್‌ ಟ್ರೀಟೋಡ್‌ಗೆ (ಮಲಬಾರ್‌ ಮರಗಪ್ಪೆ) ರಾಜ್ಯ ಕಪ್ಪೆ ಸ್ಥಾನಮಾನ ನೀಡಲು ಸರಕಾರ ಚಿಂತಿಸಿದೆ.

Advertisement

ಅರಣ್ಯ ಇಲಾಖೆಯ ಜೀವ ವೈವಿಧ್ಯ ಸಂಕುಲ ಶೆಡ್ನೂಲ್‌4 ಸಂರಕ್ಷಣೆ ಅಡಿಯಲ್ಲಿ ಮಲಬಾಲ್‌ ಟ್ರೀಟೋಡ್‌ ಬರಲಿದೆ. ಈಗಾಗಲೇ ಕಪ್ಪೆ ಸಂಶೋಧಕ ಸೃಷ್ಟಿ ಮಣಿಪಾಲದ ಡಾ| ಗುರುರಾಜ್‌ ಕೆ.ವಿ. ಕಪ್ಪೆಯ ಕುರಿತು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಪರಿಶೀಲಿಸಿದ ಬಳಿಕ ಮುಂದಿನ ಹಂತದಲ್ಲಿ ರಾಜ್ಯ ವನ್ಯಜೀವಿ ಮಂಡಳಿ “ರಾಜ್ಯ ಕಪ್ಪೆ’ ಎಂದು ಅಧಿಕೃತ ಮನ್ನಣೆ ನೀಡಬೇಕಿದೆ.

ಅಳಿವಿನಂಚಿನ ಕಪ್ಪೆ ಎಂದು ಅಧ್ಯಯನಕಾರರ ಚಿತ್ತದಿಂದ ದೂರವಾಗಿದ್ದ ಟ್ರೀಟೋಡ್‌ 2016ರಿಂದ ಮುನ್ನೆಲೆಗೆ ಬಂದಿದೆ. ಈ ಕಪ್ಪೆಯನ್ನು 1875ರಲ್ಲಿ ಕೇರಳದಲ್ಲಿ ಪತ್ತೆ ಮಾಡಲಾಗಿತ್ತು. 105 ವರ್ಷಗಳ ಅನಂತರ 1998-2003ರ ನಡುವೆ ಗೋವಾ, ಮಹಾರಾಷ್ಟ್ರ, ಕೇರಳದ ಕೆಲವು ಭಾಗಗಳಲ್ಲಿ ಪತ್ತೆಯಾಗಿತ್ತು. 2005-06ರಲ್ಲಿ ಹೊಸನಗರ, ಹೊಸಗದ್ದೆಯಲ್ಲಿ ಡಾ| ಗುರುರಾಜ್‌ ಪತ್ತೆ ಮಾಡಿದ್ದರು. ವೈಜ್ಞಾನಿಕ ಅಧ್ಯಯನ ನಡೆಸಿದ ಅವರು ಮೊದಲ ಬಾರಿಗೆ ಅದರ ಕೂಗುವಿಕೆಯನ್ನು ಧ್ವನಿ ಮುದ್ರಿಸಿಕೊಂಡಿದ್ದರು. ಅದು ಕಪ್ಪೆ ಧ್ವನಿ ಎಂದು ಅಂದಾಜು ಮಾಡಲಾರದಷ್ಟು ಮಿಡತೆಗಳ ಕೂಗನ್ನು ಹೋಲುವುದು ವಿಶೇಷ. ಇದೇ ಕಾರಣಕ್ಕೆ ಅಧ್ಯಯನಕಾರರಿಗೆ ಇದರ ಪತ್ತೆ ಕಷ್ಟವಾಗಿ ಅಳಿವಂಚಿನ ಕಪ್ಪೆ ಎಂದು ಗುರುತಿಸಲಾಗಿತ್ತು. ಇದೀಗ ಕಾರ್ಕಳ, ದಾಂಡೇಲಿ, ಶಿರಸಿ, ಸಿದ್ದಾಪುರ, ಹೊಸನಗರ, ತೀರ್ಥಹಳ್ಳಿ ಸೇರಿದಂತೆ ಕರಾವಳಿ, ಮಲೆನಾಡು ಭಾಗದ ಅರಣ್ಯದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದೆ.

ಮ್ಯಾಪಿಂಗ್‌ ಮಲಬಾರ್‌
ಟ್ರೀಟೋಡ್‌ ಅಭಿಯಾನ
2014ರಲ್ಲಿ ಡಾ| ಗುರುರಾಜ್‌ ಕೆ.ವಿ. ನೇತೃತ್ವದ ತಂಡ “ಮ್ಯಾಪಿಂಗ್‌ ಮಲಬಾರ್‌ ಟ್ರೀಟೋಡ್‌’ ಎಂಬ ವಿಶಿಷ್ಟ ಅಭಿಯಾನ ಹಮ್ಮಿಕೊಂಡಿತು. ಆಸಕ್ತ ಸಾರ್ವಜನಿಕರು ಇಂಡಿಯಾ ಬಯೋಡೈವರ್ಸಿಟಿ ಪೋರ್ಟಲ್‌ನಲ್ಲಿ ಈ ಕುರಿತು ವರದಿ ಮಾಡಲು ಯೋಜನೆ ರೂಪಿಸಿದ್ದು, 2014ರಿಂದ 2019ರ ವರೆಗೆ 193 ಕಡೆಗಳಿಂದ ವರದಿ ದಾಖಲಾಗಿತ್ತು.

ಇದನ್ನೂ ಓದಿ:ರೈತರ ಹೋರಾಟಕ್ಕೆ ಸಂದ ಜಯ: ಪೂಜಾರಿ

Advertisement

ರಾಜ್ಯ ಕಪ್ಪೆ ಸ್ಥಾನಮಾನ ಯಾಕೆ ?
ಅಳವಂಚಿನಲ್ಲಿದೆ ಎಂದು ಗುರುತಿಸಲ್ಪಟ್ಟಿದ್ದ ಈ ಕಪ್ಪೆಯನ್ನು ಸಾರ್ವಜನಿಕರು ವಿಶೇಷ ಆಸಕ್ತಿಯಿಂದ ಗುರುತಿಸಿದ್ದಾರೆ. ಜಗತ್ತಿನ ಬೇರೆಲ್ಲಿಯೂ ಇಲ್ಲದ ರಾಜ್ಯದ ಪಶ್ಚಿಮ ಘಟ್ಟದಲ್ಲಿ ಮಾತ್ರ ಕಾಣಸಿಗುವುದರಿಂದ ಮತ್ತು ಮುಂಬರುವ ದಿನಗಳಲ್ಲಿ ಇದರ ವಿಶೇಷ ಅಧ್ಯಯನ, ಸಂರಕ್ಷಣೆ ಉದ್ದೇಶದಿಂದ ರಾಜ್ಯ ಕಪ್ಪೆ ಸ್ಥಾನಮಾನ ನೀಡಬೇಕು ಎಂಬುದು ಆಶಯ ಎನ್ನುತ್ತಾರೆ ಸಂಶೋಧಕ ಡಾ| ಗುರುರಾಜ್‌.

ಪಶ್ಚಿಮ ಘಟ್ಟದಲ್ಲಿ 115 ಕಪ್ಪೆ ಪ್ರಭೇದ
ಪ್ರಮುಖ ಆಹಾರ ಸರಪಳಿ ಕೊಂಡಿಯಾಗಿರುವ ಕಪ್ಪೆಗಳು ಪರಿಸರ ಸಮತೋಲನಕ್ಕೆ ಅಗತ್ಯ. ಅವು ಇರದಿದ್ದರೆ ಕೀಟ, ಬಿಳಿ ಇರುವೆ (ಒರಲೆ) ಸಂತತಿ ಮಿತಿ ಮೀರಿ ಬೆಳೆಯುತ್ತಿದ್ದವು. ಅಂತೆಯೇ ಕಪ್ಪೆಗಳು ಇನ್ನೊಂದು ಜೀವಿಯ ಆಹಾರ. ರಾಜ್ಯದಲ್ಲಿ 115 ಪ್ರಭೇದಗಳ ಕಪ್ಪೆಗಳಿದ್ದು, ಮಲಬಾರ್‌ ಟ್ರೀಟೋಡ್‌ ಅತ್ಯಂತ ವಿಶೇಷ. ಮಾರ್ಚ್‌ನಲ್ಲಿ ಮರದ ಮೇಲೆ ಕುಳಿತು ಹೆಣ್ಣು ಕಪ್ಪೆಯನ್ನು ಆಕರ್ಷಿಸಲು ಕೂಗಲಾರಂಭಿಸುತ್ತವೆ. ಜೂನ್‌ನಲ್ಲಿ ಹೆಣ್ಣು ಕಪ್ಪೆ ಗಂಡು ಕಪ್ಪೆಯೊಂದಿಗೆ ಕೂಡುತ್ತದೆ. ಸಣ್ಣದಾಗಿ ಹರಿಯುವ ನೀರಿನಲ್ಲಿ ಮೊಟ್ಟೆಗಳನ್ನಿಟ್ಟು ಹೋಗುತ್ತವೆ. ಅವು ಗೊಜ್ಜುಮೊಟ್ಟೆಗಳಾಗಿ ಕಪ್ಪೆಗಳಾಗುತ್ತವೆ.

ಕಪ್ಪೆ ಹಬ್ಬ !
ಪಶ್ಚಿಮಘಟ್ಟದಲ್ಲಿ ವಿಶೇಷವಾಗಿ ಕಂಡುಬರುವ ಮಲಬಾರ್‌ ಟ್ರೀಟೋಡ್‌ ಕಪ್ಪೆಯನ್ನು ರಾಜ್ಯ ಕಪ್ಪೆಯಾಗಿಸುವ ಬಗ್ಗೆ ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ರಾಜ್ಯದಲ್ಲಿ ಇಲಾಖೆ, ಸಾರ್ವಜನಿಕರ ಭಾಗವಹಿಸುವಿಕೆಯಲ್ಲಿ ಜಾಗೃತಿ ಸಂರಕ್ಷಣೆ ಉದ್ದೇಶದಿಂದ ಕಪ್ಪೆ ಹಬ್ಬವನ್ನು ಅಯೋಜಿಸಲಾಗುವುದು.
– ಸಂಜಯ್‌ ಮೋಹನ್‌,
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next