Advertisement

ಸುಸ್ಥಿತಿಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ

09:36 AM Nov 18, 2017 | Team Udayavani |

ವಿಧಾನಸಭೆ: ರಾಜ್ಯದ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿದ್ದು, ಕೇಂದ್ರದ ಕೆಲವು ಕ್ರಮಗಳಿಂದ ತಾತ್ಕಾಲಿಕವಾಗಿ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿದ್ದರೂ ಮುಂದಿನ ದಿನಗಳಲ್ಲಿ ಚೇತರಿಸಿಕೊಂಡು ನಿರೀಕ್ಷಿತ ಸಂಪನ್ಮೂಲ ಕ್ರೋಢೀಕರಣವಾಗಲಿದೆ ಎಂದು ರಾಜ್ಯ
ಸರ್ಕಾರ ಪ್ರತಿಪಾದಿಸಿದೆ.

Advertisement

ಪ್ರಸಕ್ತ ಸಾಲಿನ ಆರು ತಿಂಗಳಲ್ಲಿ ರಾಜ್ಯದ ಸ್ವಂತ ತೆರಿಗೆ ಮೂಲಗಳಿಂದ ಶೇ.49 ಸಾಧನೆ ಮಾಡಲಾಗಿದ್ದು, ಕಳೆದ ವರ್ಷಕ್ಕಿಂತ ಶೇ.1
ಪ್ರಗತಿಯಾಗಿದೆ ಎಂದು ತಿಳಿಸಿದೆ. ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನೆ 2017-18ನೇ ವರದಿಯನ್ನು ಕಾನೂನು ಮತ್ತು
ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಶುಕ್ರವಾರ ಮಂಡಿಸಿದ್ದು, ವರದಿಯಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಲಾಗಿದೆ. ವಾಣಿಜ್ಯ, ಅಬಕಾರಿ, ಮೋಟಾರು ವಾಹನ ಮತ್ತು ನೋಂದಣಿ ಮತ್ತು ಮುದ್ರಾಂಕ ಬಾಬಿ¤ನಲ್ಲಿ 2017 ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 26753 ಕೋಟಿ
ರೂ. ಸಂಗ್ರಹ ಮಾಡಲಾಗಿದ್ದು, ಇದು ಬಜೆಟ್‌ನ ನಿರೀಕ್ಷಿತ ಸಂಪನ್ಮೂಲದ ಶೇ.49 ಕಳೆದ ವರ್ಷ ಇದರ ಪ್ರಮಾಣ ಶೇ.48 ಇತ್ತು ಎಂದು ತಿಳಿಸಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ವಾಣಿಜ್ಯ ತೆರಿಗೆಯಲ್ಲಿ ಶೇ.7.9, ಆಬಕಾರಿಯಲ್ಲಿ 5.9, ಮೋಟಾರು ವಾಹನದಲ್ಲಿ ಶೇ.11.1 ಹಾಗೂ
ನೋಂದಣಿ ಮತ್ತು ಮುದ್ರಾಂಕ ಶುಲ್ಕ ಬಾಬಿ¤ನಲ್ಲಿ ಶೇ.3 ಸಂಗ್ರಹ ಹೆಚ್ಚಳ ಕಂಡಿದೆ. ಜಿಎಸ್‌ಟಿ ಜಾರಿ ನಂತರ ಜುಲೈ ಹಾಗೂ ಆಗಸ್ಟ್‌ ತಿಂಗಳಲ್ಲಿ 6190 ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗಿದ್ದು, ಶೇ.14 ವಾರ್ಷಿಕ ಬೆಳವಣಿಗೆಯಂತೆ ಇದು 6640 ರೂ.
ಆಗಬೇಕಿದ್ದು ವ್ಯತ್ಯಾಸವಿರುವ 450 ಕೋಟಿ ರೂ. ಕೇಂದ್ರ ಸರ್ಕಾರ ಪರಿಹಾರವಾಗಿ ನೀಡಬೇಕಿದೆ ಎಂದು ತಿಳಿಸಲಾಗಿದೆ.

ಅಬಕಾರಿ ಹಾಗೂ ಮುಂದ್ರಾಂಕ ಮತ್ತು ನೋಂದಣಿ, ಮೋಟಾರು ವಾಹನ ತೆರಿಗೆ ಸಂಗ್ರಹಣೆಯಲ್ಲಿ ಮುಂದಿನ ಆರು ತಿಂಗಳಲ್ಲಿ
ಮತ್ತಷ್ಟು ಸುಧಾರಣೆಯಾಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಲಾಗಿದೆ. ಇದುವರೆಗೆ 1500 ಕೋಟಿ ಸಾಲ: ಪ್ರಸಕ್ತ ಆರ್ಥಿಕ
ವರ್ಷದಲ್ಲಿ ಬಜೆಟ್‌ನ ಒಟ್ಟು 34,717 ಕೋಟಿ ರೂ. ಮುಕ್ತ ಮಾರುಕಟ್ಟೆ ಸಾಲದ ಪೈಕಿ ಮೊದಲ 9 ತಿಂಗಳಲ್ಲಿ 30,358 ಕೋಟಿ ರೂ. ಪಡೆಯಲು ಕೇಂದ್ರ ಸರ್ಕಾರದ ಅನುಮೋದನೆ ಪಡೆದಿದೆ. ಇದುವರೆಗೆ 1500 ಕೋಟಿ ರೂ. ಸಾಲ ಪಡೆದಿದ್ದು, ಕೊನೆಯ ಎರಡು ತ್ತೈಮಾಸಿಕಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಅನುಮೋದಿತ ಮಿತಿಯೊಳಗೆ ಸಾಲ ಪಡೆಯಲಾಗುವುದು ಎಂದೂ ವರದಿಯಲ್ಲಿ
ಹೇಳಲಾಗಿದೆ. 

ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಪ್ರಕಾರ ವಿತ್ತೀಯ ಕೊರತೆ ಜಿಎಸ್‌ಡಿಪಿಯ ಶೇ.3ರ ಮಿತಿಯೊಳಗಿರಬೇಕಾಗಿರುವುದರಿಂದ ವಿತ್ತೀಯ ಕೊರತೆಯನ್ನು ಜಿಎಸ್‌ಡಿಪಿಯ ಶೇ.2.54 ಅಂದರೆ 33,359 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಸೆಪ್ಟೆಂಬರ್‌ 2017 ರ ಅಂತ್ಯಕ್ಕೆ ರಾಜ್ಯವು 6891 ರೂ. ವಿತ್ತೀಯ ಕೊರತೆ ಹೊಂದಿದೆ. ಕ್ರಮಬದ್ಧ ವಿತ್ತೀಯ ನಿರ್ವಹಣೆ, ರಾಜಸ್ವ ಸಂಗ್ರಹಣೆಯ ಮುಂದುವರಿದ ಪ್ರಯತ್ನ ಮತ್ತು ಅನಗತ್ಯ ವೆಚ್ಚ ನಿಯಂತ್ರಣ, ಪೂರಕ ಅಂದಾಜುಗಳಲ್ಲಿ ಸೇರಿಸಲಾದ ಹೊಸ ವೆಚ್ಚದ ಬದ್ಧತೆಗಳಿಗೆ ಭಾಗಶಃ ಹಣ ಒದಗಿಸಲು ಉಳಿತಾಯ ಗುರುತಿಸುವಿಕೆ ಮೂಲಕ ವಿತ್ತೀಯ ಕೊರತೆ ಮಿತಿ ಕಾಯ್ದುಕೊಳ್ಳುವ
ಸಾಧ್ಯತೆಯಿದೆ. ರಾಜ್ಯ ಸರ್ಕಾರವು ರಾಜಸ್ವ ಹೆಚ್ಚುವರಿಯನ್ನು ಕಾಯ್ದುಕೊಂಡು ವಿತ್ತೀಯ ಕೊರತೆಯನ್ನು ಜೆಎಸ್‌ಡಿಪಿಯ ಶೇ.3ರ
ಮಿತಿಯೊಳಗಿರುವಂತೆ ನೋಡಿಕೊಳ್ಳಲು ಬದ್ಧವಾಗಿರುತ್ತದೆ ಎಂದು ತಿಳಿಸಲಾಗಿದೆ.

Advertisement

ರೈತರಿಗೆ ಬೇಸಿಗೆಯಲ್ಲೂ 7 ಗಂಟೆ ವಿದ್ಯುತ್‌: ಡಿಕೆಶಿ
ವಿಧಾನಸಭೆ: ಮುಂದಿನ ಬೇಸಿಗೆಯಲ್ಲೂ ರೈತರಿಗೆ ನಿರಂತರ 7 ಗಂಟೆ 3 ಫೇಸ್‌ ವಿದ್ಯುತ್‌ ನೀಡಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಶುಕ್ರವಾರ ಬಿಜೆಪಿಯ ದುರೊದನ ಐಹೊಳೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಮುಂದಿನ ಬೇಸಿಗೆಯಲ್ಲೂ ರೈತರಿಗೆ ತೊಂದರೆಯಾಗದಂತೆ ಬೇರೆ ಬೇರೆ ಸಮಯದಲ್ಲಿ ದಿನದ ಏಳು ಗಂಟೆ 3 ಫೇಸ್‌ ವಿದ್ಯುತ್‌ ನೀಡಲಾಗುವುದು ಎಂದು ಹೇಳಿದರು. ಎಲ್ಲ ರೈತರಿಗೂ ಹಗಲು ಹೊತ್ತಿನಲ್ಲಿಯೇ 3 ಫೇಸ್‌ ವಿದ್ಯುತ್‌
ನೀಡಬೇಕೆಂಬ ಬೇಡಿಕೆ ಇದೆ. ಆದರೆ, ಇದು ಕಷ್ಟಸಾಧ್ಯ ಈ ವರ್ಷ ಕಲ್ಲಿದ್ದಲು ಸಮಸ್ಯೆ ಇದ್ದರೂ ರಾಜ್ಯ ಸರ್ಕಾರ ರೈತರಿಗೆ ಯಾವುದೇ
ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು. ಇತ್ತಿಚೆಗೆ ರೈತರು ಸೋಲಾರ್‌ ಘಟಕಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಈಗಾಗಲೇ 60 ತಾಲೂಕುಗಳಲ್ಲಿ ಸ್ಥಳೀಯವಾಗಿ ಸೋಲಾರ್‌ ವಿದ್ಯುತ್‌ ಉತ್ಪಾದನೆ ಮಾಡಲು ತೀರ್ಮಾನಿಸಲಾಗಿದೆ. ಇನ್ನೂ 43 ತಾಲೂಕುಗಳಲ್ಲಿ ಘಟಕ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next