ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮಂಗಳವಾರ ನಗರಕ್ಕೆ ಆಗಮಿಸಲಿದ್ದು ಆರು ದಿನಗಳ ಕಾಲ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ.
ಬೆಂಗಳೂರು, ಬಾಗಲಕೋಟೆ, ಬೆಳಗಾವಿ, ಮೈಸೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸ ಕೈಗೊಳ್ಳಲಿರುವ ವೇಣುಗೋಪಾಲ್ ಸ್ಥಳೀಯ ಶಾಸಕರು ಹಾಗೂ ಮುಖಂಡರ ಜತೆ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ಧತೆ ಕುರಿತು ಸಮಾಲೋಚನೆ ನಡೆಸಲಿದ್ದಾರೆ.
ಶಾಸಕರು, ಮಾಜಿ ಶಾಸಕರು, ಬ್ಲಾಕ್, ತಾಲೂಕು, ಜಿಲ್ಲಾ ಘಟಕಗಳ ಅಧ್ಯಕ್ಷರು, ಆಯಾ ಜಿಲ್ಲೆಯ ಕೆಪಿಸಿಸಿ ಮತ್ತು ಡಿಸಿಸಿ ಪದಾಧಿಕಾರಿಗಳಿಗೆ ಸಭೆಗೆ ಆಹ್ವಾನ ನೀಡಲಾಗಿದೆ. ಕೆಲವೆಡೆ ಸಭೆ- ಸಮಾವೇಶಗಳನ್ನೂ ಆಯೋಜಿಸಲಾಗಿದೆ ಎಂದು ಹೇಳಲಾಗಿದೆ.
ಆಯಾ ಜಿಲ್ಲೆಯಲ್ಲಿ ಪಕ್ಷದ ಸ್ಥಿತಿಗತಿ, ಹಾಲಿ ಶಾಸಕರ ಬಗ್ಗೆ ಮುಖಂಡರು ಹಾಗೂ ಕಾರ್ಯಕರ್ತರಿಗೆ ಇರುವ ಅಭಿಪ್ರಾಯ, ಕ್ಷೇತ್ರದ ಅಭಿವೃದ್ಧಿ, ಜನರ ಸ್ಪಂದನೆ, ಆಯಾ ಕ್ಷೇತ್ರಗಳಲ್ಲಿ ಪ್ರತಿಪಕ್ಷಗಳ ಶಕ್ತಿ ಸಾಮರ್ಥ್ಯ ಮತ್ತಿತರ ಅಂಶಗಳ ಬಗ್ಗೆ ಪ್ರವಾಸ ಸಂದರ್ಭದಲ್ಲಿ ವೇಣುಗೋಪಾಲ್ ಮಾಹಿತಿ ಕಲೆ ಹಾಕಲಿದ್ದಾರೆ.ಮುಂದಿನ ಚುನಾವಣೆಗೆ ಟಿಕೆಟ್ ನೀಡುವ ಸಂದರ್ಭದಲ್ಲಿ ವೇಣುಗೋಪಾಲ್ ನೀಡಲಿರುವ ವರದಿ ಪರಿಗಣನೆಯಾಗಲಿದೆ ಎಂದು ತಿಳಿದು ಬಂದಿದೆ.
ಜಿಲ್ಲಾ ಪ್ರವಾಸಕ್ಕೂ ಮುನ್ನ ಮಂಗಳವಾರ 2 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ವೇಣುಗೋಪಾಲ್ ಸಭೆ ನಡೆಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷರಾದ ದಿನೇಶ್‌ಗುಂಡೂರಾವ್, ಎಸ್.ಆರ್.ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ.
ರಾಜ್ಯ ಉಸ್ತುವಾರಿಯಾಗಿ ನೇಮಕಗೊಂಡ ನಂತರ ಈ ಹಿಂದೆ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ್ದ ವೇಣುಗೋಪಾಲ್, ಎಲ್ಲ ಶಾಸಕರು, ಸಚಿವರು, ಮಾಜಿ ಸಚಿವರು, ಹಿರಿಯ ನಾಯಕರ ಜತೆ ಸಮಾಲೋಚನೆ ನಡೆಸಿ ಪಕ್ಷದ ಸ್ಥಿತಿಗತಿ ಹಾಗೂ ಮುಂದಿನ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚಿಸಿದ್ದರು.
ಇದೀಗ ಎರಡನೇ ಹಂತದಲ್ಲಿ ಜಿಲ್ಲಾ ಪ್ರವಾಸ ಕೈಗೊಂಡು ಪಕ್ಷ ಬಲವರ್ಧನೆ ಹಾಗೂ ವಿಧಾನಸಭೆ ಚುನಾವಣೆಗೆ ಪಕ್ಷ ಸಜ್ಜುಗೊಳಿಸಲು ಮುಂದಾಗಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಗೂ ಪ್ರವಾಸ ಕೈಗೊಳ್ಳಲು ವೇಣುಗೋಪಾಲ್ ನಿರ್ಧರಿಸಿದ್ದು, ಇದೀಗ ಐದು ಜಿಲ್ಲೆ ಆಯ್ಕೆ ಮಾಡಿಕೊಂಡಿದ್ದಾರೆ.