Advertisement

ಸಿದ್ದುಗೆ ಗುದ್ದು: ಹೈ ತಂತ್ರ

10:21 AM Sep 30, 2019 | Team Udayavani |

ಸಿದ್ದು ಕೈತಪ್ಪೀತೆ ವಿಪಕ್ಷ ನಾಯಕ ಸ್ಥಾನ? ಕೆಪಿಸಿಸಿ ಅಧ್ಯಕ್ಷರ ಬದಲಿಗೂ ಚಿಂತನೆ

Advertisement

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಹೈಕಮಾಂಡ್‌ ಗರಂ ಆಗಿದ್ದು, ಸೋಮವಾರ ಅಥವಾ ದಸರಾ ಅನಂತರ ಕೆಪಿಸಿಸಿ ಅಧ್ಯಕ್ಷ, ವಿಪಕ್ಷ ನಾಯಕ ಸ್ಥಾನ ಸೇರಿ ಉನ್ನತ ಹುದ್ದೆಗಳಿಗೆ ಸಂಬಂಧಿಸಿದಂತೆ ಬದಲಾವಣೆಗಳಾಗುವ ಸಾಧ್ಯತೆಗಳಿವೆ

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಹಿರಿಯ ನಾಯಕರಾದ ಕೆ.ಎಚ್‌. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್‌ ನಡುವಣ ಮಾತಿನ ಚಕಮಕಿ ಕುರಿತು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹೈಕಮಾಂಡ್‌ಗೆ ಮಾಹಿತಿ ನೀಡಿದ್ದು, ದಿಲ್ಲಿ ನಾಯಕರು ತೀವ್ರವಾಗಿ ಬೇಸರಗೊಂಡಿದ್ದಾರೆ.

ಮುಸುಕಿನ ಗುದ್ದಾಟದಿಂದ ಪಕ್ಷದ ಮೇಲೆ ಆಗಿರುವ ಪರಿಣಾಮದ ಬಗ್ಗೆಯೂ ತಲೆಕೆಡಿಸಿಕೊಂಡಿರುವ ಹೈಕಮಾಂಡ್‌, ಹೊಸ ವಿಪಕ್ಷ ನಾಯಕನ ನೇಮಕದ ಜತೆಗೆ ಕೆಪಿಸಿಸಿ ಹುದ್ದೆ ಗಳ ಬದಲಾವಣೆಗೂ ಚಿಂತನೆ ನಡೆಸಿದೆ. ಸಿದ್ದ ರಾಮಯ್ಯ ಅವರಿಗೆ ಪ್ರಮುಖ ಹುದ್ದೆ ತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಭಾವನೆ, ರಾಜ್ಯ ನಾಯಕರ ನಡುವೆ ಭಿನ್ನಾ ಭಿಪ್ರಾಯ, ಮೂಲ -ವಲಸಿಗ ಎಂಬ ಗುಂಪು ಗಾರಿಕೆ, ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ನಾಯಕರ ನಡುವೆ ಗುದ್ದಾಟ ಇರುವುದರಿಂದ ಹೈಕಮಾಂಡ್‌ ಮಧ್ಯಪ್ರವೇಶಕ್ಕೆ ತೀರ್ಮಾನಿಸಿದೆ. ಮುಂದಿನ ವಾರ ಅಥವಾ ವಿಧಾನಮಂಡಲ ಅಧಿವೇಶನಕ್ಕೆ ಮುನ್ನ ರಾಜ್ಯ ಕಾಂಗ್ರೆಸ್‌ನಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿದೆ.

Advertisement

ಈ ಮಧ್ಯೆ ಹಿರಿಯರು ಮತ್ತು ಅನರ್ಹಗೊಂಡ ಶಾಸಕರ ಮಾತುಗಳಿಂದ ದಿನೇಶ್‌ ಗುಂಡೂರಾವ್‌ ಕೂಡ ಬೇಸರಗೊಂಡಿದ್ದು, ತನಗೆ ಅಧ್ಯಕ್ಷಗಿರಿ ಉಸಾಬರಿ ಬೇಡ, ಯಾರಾದರೂ ವಹಿಸಿಕೊಂಡು ಮುನ್ನಡೆಸಲಿ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌. ಮುನಿಯಪ್ಪ, ವೀರಪ್ಪ ಮೊಲಿ, ಬಿ.ಕೆ. ಹರಿಪ್ರಸಾದ್‌ ಸೂಚಿಸಿದವರಿಗೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮೂಲ ಕಾಂಗ್ರೆಸಿಗರಿಗೆ ನಾಯಕತ್ವ ನೀಡ ಬೇಕು ಎಂಬ ಒಂದಂಶದ ಕಾರ್ಯಕ್ರಮದಡಿ ಸಿದ್ದರಾಮಯ್ಯ ಅವರನ್ನು ಬದಿಗೆ ಸರಿಸಲು ಹಿರಿಯರು ಒಂದಾಗಿದ್ದಾರೆ. ಸೋನಿಯಾ ಮತ್ತು ರಾಹುಲ್‌ ಮಧ್ಯಪ್ರವೇಶಕ್ಕೆ ಒತ್ತಾಯಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಖರ್ಗೆ ಮತ್ತು ಹಿರಿಯ ನಾಯಕರು ಸಿದ್ದ ರಾಮಯ್ಯ, ದಿನೇಶ್‌ ಗುಂಡೂರಾವ್‌ ವರ್ತನೆ ಯಿಂದ ಬೇಸರಿಸಿ ಹೈಕಮಾಂಡ್‌ಗೆ ದೂರು ನೀಡಿದ್ದಾರೆ. ಪ್ರತಿಯಾಗಿ ಸಿದ್ದರಾಮಯ್ಯ, ದಿನೇಶ್‌ ಬಣದವರೂ ದೂರು ನೀಡಿದ್ದಾರೆ ಎನ್ನಲಾಗಿದೆ.

ಬದಲಾಯಿಸಿದರೆ ಕಷ್ಟ
ಉಪ ಚುನಾವಣೆಗೆ ದಿನಾಂಕ ಘೋಷಣೆ ಮಾಡಿರುವ ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಬಿಟ್ಟು ಬೇರೊಬ್ಬರನ್ನು ಶಾಸಕಾಂಗ ಪಕ್ಷದ ನಾಯಕ ಅಥವಾ ವಿಪಕ್ಷ ನಾಯಕನಾಗಿ ಮಾಡಿದರೂ ಕಷ್ಟ. ದಿನೇಶ್‌ ಗುಂಡೂರಾವ್‌ ಅವರನ್ನು ಬದ ಲಿಸಿದರೂ ಬೇರೆ ರೀತಿಯ ಸಂದೇಶ ರವಾನೆ ಯಾಗುತ್ತದೆ. ಸಿದ್ದರಾಮಯ್ಯ ಅವರನ್ನು ನಿರ್ಲಕ್ಷ್ಯ ಮಾಡಿದರೆ ಬೇರೆ ರೀತಿಯ ಪರಿಣಾಮ ಆಗಬಹುದು ಎಂಬುದು ಸಿದ್ದರಾಮಯ್ಯ ಬೆಂಬಲಿಗರ ವಾದ.

ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next