Advertisement

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ರಾಜ್ಯ ಬದ್ಧ

11:48 AM Sep 18, 2019 | Suhan S |

ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ ಪಾಟೀಲ ಹೇಳಿದರು.

Advertisement

ಕೊಪ್ಪಳ ಜಿಲ್ಲಾಡಳಿತದಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 72ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇಶಕ್ಕೆ ಆಗಸ್ಟ್‌ 15, 1947 ರಂದು ಸ್ವಾತಂತ್ರ್ಯ ಪಡೆಯಿತು. ಆದರೆ, ಹೈದರಾಬಾದ್‌ ನಿಜಾಮರ ಆಳ್ವಿಕೆಯ ಭಾಗವಾಗಿದ್ದ ಕೊಪ್ಪಳ, ಬಳ್ಳಾರಿ, ರಾಯಚೂರು, ಕಲಬುರಗಿ, ಯಾದಗಿರಿ, ಬೀದರ್‌ ಹಾಗೂ ಇತರ ಪ್ರದೇಶಗಳು ಸ್ವಾತಂತ್ರ್ಯಕ್ಕಾಗಿ ಒಂದು ವರ್ಷ ಹೆಚ್ಚು ಕಾಯಬೇಕಾಯಿತು. ಇಡೀ ದೇಶ ಸ್ವಾತಂತ್ರ್ಯದ ಸಂಭ್ರಮ ಅನುಭವಿಸುತ್ತಿದ್ದರೆ, ಹೈಕ ಭಾಗದ ಜನರು ರಜಾಕಾರರ ದಬ್ಟಾಳಿಕೆಗೆ ಸಿಕ್ಕಿ ಶೋಷಣೆ ಅನುಭವಿಸುತ್ತಿದ್ದರು ಎಂದರು.

ಬ್ರಿಟಿಷರ ಕುಮ್ಮಕ್ಕಿನಿಂದ ಹೈದರಾಬಾದ್‌ ಪ್ರಾಂತ್ಯವನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದ ನಿಜಾಮರು, ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಭಾರತದ ಒಕ್ಕೂಟಕ್ಕೆ ಸೇರಲು ನಿರಾಕರಿಸಿದರು. ಸ್ವತಂತ್ರ ಭಾರತದಲ್ಲಿ ವಿಲೀನಗೊಳ್ಳದೇ ತಾನು ಪ್ರತ್ಯೇಕವಾಗಿ ಉಳಿದು, ತಮ್ಮದೇ ಒಂದು ದೇಶವನ್ನಾಗಿ ಉಳಿಸಿಕೊಂಡು ಆಳ್ವಿಕೆ ನಡೆಸುವ ಧೋರಣೆಯಲ್ಲಿ ಹೈದ್ರಾಬಾದ್‌ ನಿಜಾಮರಿದ್ದರು. ಆಗಿನ ಗೃಹ ಸಚಿವ ಸರ್ದಾರ್‌ ವಲ್ಲಭಭಾಯಿ ಪಟೇಲರು, ದಿಟ್ಟತನದಿಂದ ಕೈಗೊಂಡ ಸೈನಿಕ ಕಾರ್ಯಾಚರಣೆಯಲ್ಲಿ ನಿಜಾಮರು ಶರಣಾಗಿ ಭಾರತದ ಒಕ್ಕೂಟಕ್ಕೆ ಸೇರಿದ್ದರಿಂದ ಹೈದ್ರಾಬಾದ್‌-ಕರ್ನಾಟಕ 1948 ಸೆ.17ರಂದು ಸ್ವಾತಂತ್ರ್ಯ ಪಡೆಯಿತು ಎಂದು ಇತಿಹಾಸ ಸ್ಮರಿಸಿದರು.

ಅಖಂಡ ಭಾರತದ ಒಕ್ಕೂಟ ವ್ಯವಸ್ಥೆಗೆ ಅಡ್ಡಗಾಲಾದ ನಿಜಾಮರ ವಿರುದ್ಧ ಹೋರಾಡಲು ಈ ಭಾಗದ ಜನತೆ, ಶ್ರೀಸ್ವಾಮಿ ರಮಾನಂದ ತೀರ್ಥರಂತಹ ಸ್ವಾತಂತ್ರ್ಯ ಪ್ರೇಮಿಗಳಿಂದ ಪ್ರೇರಿತರಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟ ಮಾಡಿದ್ದಾರೆ. ಶಿವಮೂರ್ತಿ ಸ್ವಾಮಿ ಅಳವಂಡಿ, ಪುಂಡಲೀಕಪ್ಪ ಜ್ಞಾನಮೋಠೆ, ವೀರಭದ್ರಪ್ಪ ಶಿರೂರು, ಸಿ.ಎಂ. ಚುರ್ಚಿಹಾಳಮಠ, ಸೋಮಪ್ಪ ಡಂಬಳ, ಯರಾಶಿ ಶಂಕ್ರಪ್ಪನವರು, ಎಂ.ವಿರುಪಾಕ್ಷಪ್ಪನವರು, ನರಸಿಂಗರಾವ್‌, ಜನಾರ್ದನರಾವ್‌ ದೇಸಾಯಿ, ದೇವೇಂದ್ರ ಕುಮಾರ ಹಕಾರಿ, ಡಾ| ಪಂಚಾಕ್ಷರಿ ಹಿರೇಮಠ ಸೇರಿದಂತೆ ಹಲವು ಮಹನೀಯರ ಹೋರಾಟದ ಫಲವಾಗಿ ಹೈಕ ವಿಮೋಚನಾ ಹೋರಾಟ ಈ ನಾಡಿನ ಭವ್ಯ ಇತಿಹಾಸವಾಗಿ ಉಳಿದಿದೆ. ಸ್ವಾತಂತ್ರ್ಯ ಹೋರಾಟದ ರೋಚಕ ಇತಿಹಾಸ ಹಾಗೂ ಅದರ ಮಹತ್ವವನ್ನು ನಾವೆಲ್ಲರೂ ಅರಿತು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸಹ ಸ್ಮರಿಸಿ, ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಜಿಲ್ಲೆಯಲ್ಲಿ ನೆರೆಯಿಂದ ಹಾನಿಯಾದ ಪ್ರದೇಶದ ಜನತೆಗೆ ಆತ್ಮಸ್ಥೆ ೖರ್ಯ ತುಂಬುವ ಕೆಲಸ ಮಾಡಿದೆ. ಅಲ್ಲದೇ, ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಸರ್ಕಾರ ಪರಿಹಾರ ವಿತರಣಾ ಕಾರ್ಯ ನಡೆಸಿದೆ. ಇನ್ನೂ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 1,54,186 ರೈತರಿಗೆ ನೋಂದಣಿ ಮಾಡಿಸಿದ್ದು, 1,19,673 ರೈತರಿಗೆ ಹಣ ಜಮೆ ಮಾಡಿದೆ. 60 ವರ್ಷ ವಯಸ್ಸಿನ ನಂತರದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾಸಿಕ ಕನಿಷ್ಠ 3,000 ಪಿಂಚಣಿ ನೀಡಲು ಯೋಜನೆ ಜಾರಿಯಲ್ಲಿದ್ದು, ಜಿಲ್ಲೆಯಲ್ಲಿ 1,480 ರೈತರ ನೊಂದಣಿ ಮಾಡಲಾಗಿದೆ.

Advertisement

ಜಲಶಕ್ತಿ ಅಭಿಯಾನದಡಿ ಕೊಪ್ಪಳ ಜಿಲ್ಲೆಯಲ್ಲಿ ಯಲಬುರ್ಗಾ ತಾಲೂಕನ್ನು ಆಯ್ಕೆ ಮಾಡಿದೆ. ಕೆರೆಗಳ ಹೂಳೆತ್ತುವ ಕಾಮಗಾರಿ, ಹೊಸಕೆರೆ, ಚೆಕ್‌ಡ್ಯಾಂ, ಗೋ-ಕಟ್ಟೆಗಳನ್ನು, ಕೃಷಿ ಹೊಂಡ, ಬದು ನಿರ್ಮಾಣ, ಹಸಿರೀಕರಣ, ತೋಟಗಾರಿಕೆ ಬೆಳೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದೆ. ಇನ್ನೂ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಮಣ್ಣು, ನೀರು ಮತ್ತು ಎಲೆ ವಿಶ್ಲೇಷಣೆ ಮಾಡುವ ಅತ್ಯಾಧುನಿಕ ಪ್ರಯೋಗ ಶಾಲೆಯನ್ನು ಕೊಪ್ಪಳ ತಾಲ್ಲೂಕಿನ ಗಿಣಿಗೇರಾ ತೋಟಗಾರಿಕೆ ಕ್ಷೇತ್ರದಲ್ಲಿ ನಿರ್ಮಿಸಲಾಗಿದೆ. 2019-20 ನೇ ಸಾಲಿಗೆ 1 ರಿಂದ 10ನೇ ತರಗತಿ ವರೆಗಿನ ಸರಕಾರಿ 1,73,464 ಮತ್ತು ಅನುದಾನಿತ 17,663 ಮಕ್ಕಳಿಗೆ ಪಠ್ಯ ಪುಸ್ತಕ ನೀಡಿದೆ. 1 ರಿಂದ 10ನೇ ತರಗತಿ ವರೆಗಿನ 1,73,464 ಮಕ್ಕಳಿಗೆ ಸಮವಸ್ತ್ರಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ. 8ನೇ ತರಗತಿ 18,706 ಮಕ್ಕಳಿಗೆ ಬೈಸಿಕಲ್ಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ. 1 ರಿಂದ 10ನೇ ತರಗತಿಯವರೆಗಿನ 1,73,464 ಮಕ್ಕಳಿಗೆ ಶೂ ಮತ್ತು ಸಾಕ್ಸ್‌ ನೀಡಿದೆ ಎಂದರು.

ಸಂಸದ ಸಂಗಣ್ಣ ಕರಡಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್‌, ತಾ.ಪಂ. ಅಧ್ಯಕ್ಷ ಬಾಲಚಂದ್ರನ್‌, ಡಿಸಿ ಪಿ.ಸುನೀಲ್ ಕುಮಾರ್‌, ಎಸ್ಪಿ ರೇಣುಕಾ ಸುಕುಮಾರ್‌, ಜಿ.ಪಂ ಸಿಇಒ ರಘುನಂದನ ಮೂರ್ತಿ, ಡಿಎಫ್‌ಓ ಯಶ್‌ಪಾಲ ಕ್ಷೀರಸಾಗರ, ಪ್ರೊಬೇಷನರಿ ಐಎಎಸ್‌ ಅಧಿಕಾರಿ ನೇಹಾ ಜೈನ್‌, ತಹಶೀಲ್ದಾರ ಜೆ.ಬಿ. ಮಜ್ಗಿ, ತಾ.ಪಂ ಇಒ ಟಿ.ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

72ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ತ ವಿವಿಧ ಶಾಲಾ ಮಕ್ಕಳು, ಪೊಲೀಸ್‌, ಎನ್‌.ಸಿ.ಸಿ, ಸೇವಾದಳ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌, ಗೃಹರಕ್ಷಕ ದಳದಿಂದ ಆಕರ್ಷಕ ಪಥಸಂಚಲನ ನಡೆಯಿತು. ಜಿಲ್ಲೆಯ ಸ್ವಾತಂತ್ರ್ಯ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next