Advertisement
ರಾಜ್ಯ ಜಿಎಸ್‌ಟಿ ತೆರಿಗೆ ಆದಾಯದ ಜತೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರ ಮೊತ್ತ ಹಾಗೂ ಪೆಟ್ರೋಲ್, ಡೀಸೆಲ್ ಸೇರಿದಂತೆ ತೈಲ ಉತ್ಪನ್ನಗಳ ಮೇಲಿನ ಮಾರಾಟ ತೆರಿಗೆ ಸಂಗ್ರಹಣೆಯಿಂದ ಹಿಂದಿನ ವರ್ಷಕ್ಕೆ ಹೋಲಿಸಿದರೆ 2017-18ನೇ ಸಾಲಿನಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಉತ್ತಮವಾಗಿದೆ. ಜಿಎಸ್‌ಟಿ ಜಾರಿ ನಂತರವೂ ತೆರಿಗೆ ಆದಾಯವು ನಿರೀಕ್ಷಿತ ಶೇ.9ಕ್ಕಿಂತ ಶೇ.13ರಷ್ಟು ಹೆಚ್ಚಳವಾಗಿರುವುದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಲ್ಲಿ ಸಂತಸ ಮೂಡಿಸಿದೆ.
ವ್ಯಾಟ್ ಪದ್ಧತಿಯಡಿ ತೆರಿಗೆ ಸಂಗ್ರಹ ಪದ್ದತಿ ಜಾರಿಯಲ್ಲಿದ್ದಾಗಲೇ ವಾಣಿಜ್ಯ ತೆರಿಗೆ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸಿತ್ತು. ಹಾಗಾಗಿ ವಾಣಿಜ್ಯ ತೆರಿಗೆ ಸಂಗ್ರಹಣೆಯಲ್ಲಿ ರಾಜ್ಯ ಮೊದಲಿನಿಂದಲೂ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಜಿಎಸ್‌ಟಿ ಜಾರಿ ಬಳಿಕ ತೆರಿಗೆ ಸಂಗ್ರಹ ಪ್ರಮಾಣದಲ್ಲೂ ಏರಿಕೆಯಾಗುವ ಆತಂಕ ಸೃಷ್ಟಿಯಾಗಿತ್ತು. ಅಲ್ಲದೇ ಸಾರ್ವಜನಿಕರು, ವ್ಯಾಪಾರ- ವಹಿವಾಟುದಾರರ ಆಕ್ಷೇಪಣೆ ಹಿನ್ನೆಲೆಯಲ್ಲಿ ತೆರಿಗೆ ಪ್ರಮಾಣವೂ ಇಳಿಕೆಯಾಗಿದ್ದರಿಂದ ತೆರಿಗೆ ಹೆಚ್ಚಳವಿರಲಿ ನಿರೀಕ್ಷಿತ ತೆರಿಗೆ ಆದಾಯ ಸಂಗ್ರಹದ ಬಗ್ಗೆಯೂ ಅನುಮಾನ ಮೂಡಿತ್ತು. ಆದರೆ ನಿರೀಕ್ಷೆಗೂ ಮೀರಿ ಎಂಬಂತೆ ತೆರಿಗೆ ಆದಾಯ ಹೆಚ್ಚಾಗಿದೆ.
Related Articles
ಕಳೆದ 2017ರ ಜುಲೈನಿಂದ 2018ರ ಮಾರ್ಚ್‌ವರೆಗೆ ಎಸ್‌ಜಿಎಸ್‌ಟಿಯಡಿ 27,567 ಕೋಟಿ ರೂ. ಸಂಗ್ರಹವಾಗಿದೆ. ರಾಜ್ಯ ಸರ್ಕಾರಗಳು 2015-16ನೇ ಸಾಲಿನಲ್ಲಿ ಪಡೆದ ತೆರಿಗೆ ಪ್ರಮಾಣಕ್ಕೆ ಶೇ.14 ರಷ್ಟು ಹೆಚ್ಚಳ ಮಾಡಿ ಆ ಮೊತ್ತದಲ್ಲಿ ಕಡಿಮೆಯಾದರೆ ವ್ಯತ್ಯಾಸ ಮೊತ್ತವನ್ನು ಭರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಅದರಂತೆ ಜುಲೈನಿಂದ ಫೆಬ್ರುವರಿವರೆಗೆ 6245 ಕೋಟಿ ರೂ. ಪರಿಹಾರ ಮೊತ್ತವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದರಿಂದ ತೆರಿಗೆ ಆದಾಯ 33,812 ಕೋಟಿ ರೂ. ಮೀರುತ್ತದೆ. ಜತೆಗೆ ಐಜಿಎಸ್‌ಟಿ ಹಾಗೂ ತೈಲ ಉತ್ಪನ್ನಗಳಿಗೆ ವಿಧಿಸುವ ಮಾರಾಟ ತೆರಿಗೆಯಿಂದಲೂ ಉತ್ತಮ ಆದಾಯ ಸಂಗ್ರಹವಾಗಿದೆ.
Advertisement
ಹೆಚ್ಚಳಕ್ಕೆ ಕಾರಣವಾದ ಅಂಶಗಳುರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣೆಯಲ್ಲಿ ಹಿಂದಿನಿಂದಲೂ ಒಂದಷ್ಟು ಶಿಸ್ತು ಪಾಲಿಸಿಕೊಂಡು ಬರಲಾಗಿದೆ. ಜತೆಗೆ ವ್ಯಾಟ್ ಪದ್ಧತಿಯಲ್ಲಿದ್ದ ಬಹುತೇಕ ಅರ್ಹ ವ್ಯಾಪಾರ- ವಹಿವಾಟುದಾರರು ಜಿಎಸ್‌ಟಿಗೆ ವರ್ಗಾವಣೆಯಾಗಿದ್ದು, ತೆರಿಗೆ ಪಾವತಿಯೂ ಉತ್ತಮವಾಗಿದೆ. ಅರ್ಹ ವ್ಯಾಪಾರ- ವ್ಯವಹಾರಸ್ಥರ ಪೈಕಿ ಬಹುತೇಕರು ತೆರಿಗೆ ವ್ಯಾಪ್ತಿಯಲ್ಲಿರುವುದರಿಂದ ಆದಾಯ ಸಂಗ್ರಹ ಹೆಚ್ಚಾಗಿರಬಹುದು. ಜಿಎಸ್‌ಟಿಯಡಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಆರಂಭದಲ್ಲಿ ತಲೆದೋರಿದ್ದ ತಾಂತ್ರಿಕ ಅಡಚಣೆಗಳು ಕ್ರಮೇಣ ನಿವಾರಣೆಯಾಗಿದ್ದು ಸಹ ವ್ಯಾಪಾರ- ವಹಿವಾಟು ಪ್ರಗತಿಗೆR ಕಾರಣವಾಗಿರಬಹುದು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ರಾಜ್ಯದಲ್ಲಿ ಮಾರಾಟವಾಗುವ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಶೇ.30 ಹಾಗೂ ಡೀಸೆಲ್ ಮೇಲೆ ಶೇ.20ರಷ್ಟು ಮಾರಾಟ ತೆರಿಗೆಯನ್ನು ರಾಜ್ಯ ಸರ್ಕಾರ ವಿಧಿಸುತ್ತದೆ. ಕಳೆದ ವರ್ಷದಿಂದೀಚೆಗೆ ಪೆಟ್ರೋಲ್, ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ತೆರಿಗೆ ಸಂಗ್ರಹವೂ ಹೆಚ್ಚಾಗಿದೆ. ಜಿಎಸ್‌ಟಿ ಜಾರಿಯಾದ ಸಂದರ್ಭದಲ್ಲಿ ಆಯ್ದ ಸರಕುಗಳ ಮೇಲಿ ವಿಧಿಸಲಾಗಿದ್ದ ತೆರಿಗೆ ಪ್ರಮಾಣ ನಂತರ ಕಡಿಮೆಯಾಯಿತು. ಶೇ.28ರಿಂದ ಶೇ.18, ಶೇ.18ರಿಂದ ಶೇ.12 ಹಾಗೂ ಶೇ.12ರಿಂದ ಶೇ.5ಕ್ಕೆ ತೆರಿಗೆ ದರ ಇಳಿಕೆಯಾಗಿದ್ದರಿಂದ ವ್ಯಾಪಾರ- ವಹಿವಾಟು ವೃದ್ಧಿಸಿ ಆದಾಯ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಶೇ.13ರಷ್ಟು ಹೆಚ್ಚಳ
2017ರ ಜುಲೈನಿಂದ ಮಾರ್ಚ್‌ವರೆಗೆ ಎಸ್‌ಜಿಎಸ್‌ಟಿಯಡಿ 27,567 ಕೋಟಿ ರೂ. ತೆರಿಗೆ ಜತೆಗೆ ಕೇಂದ್ರ ಸರ್ಕಾರದಿಂದ 6245 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆಯೂ ರಾಜ್ಯ ಸರ್ಕಾರ ಮಾರಾಟ ತೆರಿಗೆ ವಿಧಿಸುತ್ತಿದ್ದು, ಅದರಿಂದಲೂ ಮಾಸಿಕ 1,200 ಕೋಟಿ ರೂ.ವರೆಗೆ ತೆರಿಗೆ ಸಂಗ್ರಹವಾಗಲಿದೆ. ಸಾಮಾನ್ಯವಾಗಿ ವರ್ಷದಿಂದ ವರ್ಷಕ್ಕೆ ಶೇ.8ರಿಂದ ಶೇ.9ರಷ್ಟು ತೆರಿಗೆ ಹೆಚ್ಚಳ ನಿರೀಕ್ಷೆ ಇರುತ್ತದೆ. ಆದರೆ ಕಳೆದ ಹಣಕಾಸು ವರ್ಷದಲ್ಲಿ ಶೇ.13ರಷ್ಟು ತೆರಿಗೆ ಹೆಚ್ಚಳ ಕಂಡಿದೆ. ಕೇಂದ್ರ ಸರ್ಕಾರ ಪರಿಹಾರ ವಿತರಿಸಿರುವುದು ತೆರಿಗೆ ಹೆಚ್ಚಳಕ್ಕೆ ಸಹಕಾರಿಯಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಉನ್ನತ ಮೂಲಗಳು ತಿಳಿಸಿವೆ. ಎಸ್‌ಜಿಎಸ್‌ಟಿ ಸಂಗ್ರಹ ವಿವರ
ತಿಂಗಳು ತೆರಿಗೆ ಪ್ರಮಾಣ (ಕೋಟಿ ರೂ.ಗಳಲ್ಲಿ)
ಜುಲೈ 3815
ಆಗಸ್ಟ್ 2561
ಸೆಪ್ಟೆಂಬರ್ 2868
ಅಕ್ಟೋಬರ್ 2930
ನವೆಂಬರ್ 2923
ಡಿಸೆಂಬರ್ 2460
ಜನವರಿ 3007
ಫೆಬ್ರುವರಿ 4369
ಮಾರ್ಚ್ 2634
ಒಟ್ಟು 27,567 – ಎಂ.ಕೀರ್ತಿಪ್ರಸಾದ್